ಜಿ.ಸೋಮಶೇಖರ
ಕೊಟ್ಟೂರು: ತಾಲೂಕು ಕೇಂದ್ರದಲ್ಲಿ ಕಳೆದ ತಿಂಗಳು ಆರಂಭಿಸಿದ ತೋಟಗಾರಿಕೆ ಇಲಾಖೆಯ ಕಚೇರಿ ಇದೀಗ ಒಮ್ಮೆಲೇ ಬೀಗ ಜಡಿದುಕೊಂಡಿದೆ. ಇದರಿಂದಾಗಿ ತಾಲೂಕಿನ ರೈತರು ವಿವಿಧ ಯೋಜನೆಯಡಿ ಆರ್ಥಿಕ ಸಹಾಯ ಮತ್ತಿತರ ಸೌಲಭ್ಯ ಕೋರಿ ಮತ್ತೆ ಹಿಂದಿನ ತಾಲೂಕು ಕೇಂದ್ರವಾದ ಕೂಡ್ಲಿಗಿಗೆ ಅನಿವಾರ್ಯವಾಗಿ ಅಲೆದಾಡುವಂತಾಗಿದೆ.2018ರಲ್ಲಿ ತಾಲೂಕು ಕೇಂದ್ರವಾಗಿ ರಚನೆಗೊಂಡ ಕೊಟ್ಟೂರಿನಲ್ಲಿ ಸದ್ಯಕ್ಕೆ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಖಜಾನೆಯಂತಹ ಕಚೇರಿಗಳು ಮಾತ್ರ ಪ್ರಾರಂಭವಾಗಿದ್ದವು. ಸಾರ್ವಜನಿಕ ಸೇವೆಯಲ್ಲಿ ಮುಖ್ಯವಾಗಿ ರೈತರಿಗೆ ಅನುಕೂಲವಾಗಲು ತೋಟಗಾರಿಕೆ ಇಲಾಖೆ ಕಚೇರಿ ಬೇಕೇಬೇಕು ಎನ್ನುವ ಕಾರಣಕ್ಕಾಗಿ ಶಾಸಕ ಕೆ.ನೇಮರಾಜ್ ನಾಯ್ಕ ಅವರ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಸರ್ಕಾರ ಕಳೆದ ತಿಂಗಳ ಮೇ 1ರಿಂದ ಜಾರಿಗೆ ಬರುವಂತೆ ತೋಟಗಾರಿಕ ಇಲಾಖೆ ಕಚೇರಿ ಆರಂಭಿಸುವ ತೀರ್ಮಾನ ಕೈಗೊಂಡು ಕಚೇರಿಯನ್ನು ಇಲ್ಲಿಯ ಎಪಿಎಂಸಿಯ ಸುಸಜ್ಜಿತ ಕಟ್ಟಡವೊಂದರಲ್ಲಿ ಪ್ರಾರಂಭಿಸಿದ್ದರು. ತೋಟಗಾರಿಕೆ ಕಚೇರಿ ಕೊಟ್ಟೂರಿನಲ್ಲಿ ಕಾರ್ಯ ನಿರ್ವಹಿಸಲು ಒಬ್ಬ ಸಹಾಯಕ ತೋಟಗಾರಿಕೆ ನಿರ್ದೇಶಕ, ಒಬ್ಬ ಸಹಾಯಕ ತೋಟಗಾರಿಕೆ ಅಧಿಕಾರಿ, ಒಬ್ಬ ಲಿಪಿಕ ಸಿಬ್ಬಂದಿ ಮತ್ತು ತಾಂತ್ರಿಕ ಸಿಬ್ಬಂದಿ ಅಲ್ಲದೇ ಹೊರಗುತ್ತಿಗೆ ಸಿಬ್ಬಂದಿಯಾಗಿ ಜಿಪಂನಿಂದ ನಿಯೋಜನೆಗೊಳಗಾದ ನರೇಗಾ ತಾಂತ್ರಿಕ ಸಿಬ್ಬಂದಿ ಮತ್ತು ಗಣಕಯಂತ್ರ ನಿರ್ವಾಹಕರನ್ನು ನಿಯೋಜಿಸಲಾಗಿತ್ತು.
ತಾಲೂಕಿನ ವಿವಿಧ ಗ್ರಾಮಗಳಿಂದ 50 ಕಿ.ಮೀ. ಅಂತರ ಪ್ರಯಾಣಿಸಿ ಅಲೆದಾಡುವ ಸ್ಥಿತಿ ರೈತರದ್ದು. ಅನಗತ್ಯ ಆರ್ಥಿಕ ವೆಚ್ಚಗಳನ್ನು ರೈತರು ಹೊರೆಯಾಗಿಸಿಕೊಳ್ಳಬೇಕಿದೆ. ಕಚೇರಿ ಆರಂಭಗೊಳ್ಳುವುದು ಅನುಮಾನವಾಗಿದೆ ಎಂದು ರೈತರು ದೂರುತ್ತಿದ್ದಾರೆ. ಕಚೇರಿ ಕೆಲ ದಿನಗಳ ನಡೆದು, ಇದೀಗ ಸರಿಯಾಗಿ ಕೆಲಸ ಮಾಡದೇ ಬಂದ್ ಆಗಿರುವುದು ರೈತರಲ್ಲಿ ಆಕ್ರೋಶ ತಂದಿದೆ.ಕೊಟ್ಟೂರು ತೋಟಗಾರಿಕೆ ಇಲಾಖೆಗೆ ಎಎಚ್ಒ ಆಗಿ ಸೇವೆ ಸಲ್ಲಿಸುತ್ತಿದ್ದ ಮಹಿಳಾ ಅಧಿಕಾರಿಯನ್ನು ಸರ್ಕಾರ ಬೇರೆಡೆಗೆ ವರ್ಗ ಮಾಡಿದೆ. ಇದರಿಂದ ಪುನಃ ಬೇರೊಬ್ಬ ಅಧಿಕಾರಿ ಬರುವವರೆಗೆ ಕೊಟ್ಟೂರು ಕಚೇರಿ ತೆರೆದಿಲ್ಲ. ಅಲ್ಲಿ ನಿಯೋಜನೆಗೊಂಡ ಸಿಬ್ಬಂದಿಯನ್ನು ಕೂಡ್ಲಿಗಿಯ ಹಿರಿಯ ಸಹಾಯಕ ತೋಟಗಾರಿಕೆ ಇಲಾಖಾ ಕಚೇರಿಗೆ ಬಳಸಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ಅಧಿಕಾರಿ ಕುಬೇರಾಚಾರ್.
ತೋಟಗಾರಿಕೆ ಇಲಾಖೆ ಕಚೇರಿ ಕೊಟ್ಟೂರಿನಲ್ಲಿ ಬಂದ್ ಆಗಿರುವ ವಿವಿಧ ಯೋಜನೆಗಳ ಲಾಭವನ್ನು ಪಡೆಯಲು ಅನಗತ್ಯವಾಗಿ ಅಲೆದಾಡುವಂತಾಗಿದೆ. ಪಟ್ಟಣದಲ್ಲಿ ಕಚೇರಿ ಪುನರ್ ಆರಂಭವಾಗಬೇಕು ಎನ್ನುತ್ತಾರೆ ರೈತ ಚನ್ನಬಸವರಾಜ್.