ಇಂದು ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

| Published : Jul 17 2025, 12:34 AM IST

ಸಾರಾಂಶ

ಸಂಸ್ಕೃತಿ ಚಿಂತಕ ಪ್ರೊ.ಎಂ.ಕೃಷ್ಣೇಗೌಡ ವಿದ್ಯಾರ್ಥಿಗಳನ್ನು ಕುರಿತು ಪ್ರಧಾನ ಭಾಷಣ ಮಾಡಲಿದ್ದಾರೆ. ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಿ.ರಾಮಕೃಷ್ಣರ ಉಪಸ್ಥಿತಿಯಲ್ಲಿ ಸಮಾರಂಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ವಿನಯ್ ರಾಮಕೃಷ್ಣ ಅಧ್ಯಕ್ಷತೆ ವಹಿಸುವರು. ಸಿಇಒ ಕೀರ್ತನ ಆರ್ ನಿಖಿಲ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಕೆ.ಹೊನ್ನಲಗೆರೆಯ ಆರ್.ಕೆ.ಸಮೂಹ ಶಿಕ್ಷಣ ಸಂಸ್ಥೆಯಿಂದ ಜುಲೈ 17ರಂದು ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಶಿಕ್ಷಣ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವಿನಯ್ ರಾಮಕೃಷ್ಣ ಬುಧವಾರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಕೆ.ಶಿಕ್ಷಣ ಸಂಸ್ಥೆ ಆವರಣದಲ್ಲಿ ಬೆಳಗ್ಗೆ 10.30 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಉದ್ಘಾಟಿಸಲಿದ್ದಾರೆ ಎಂದರು.

ಸಂಸ್ಕೃತಿ ಚಿಂತಕ ಪ್ರೊ.ಎಂ.ಕೃಷ್ಣೇಗೌಡ ವಿದ್ಯಾರ್ಥಿಗಳನ್ನು ಕುರಿತು ಪ್ರಧಾನ ಭಾಷಣ ಮಾಡಲಿದ್ದಾರೆ. ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಿ.ರಾಮಕೃಷ್ಣರ ಉಪಸ್ಥಿತಿಯಲ್ಲಿ ಸಮಾರಂಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ವಿನಯ್ ರಾಮಕೃಷ್ಣ ಅಧ್ಯಕ್ಷತೆ ವಹಿಸುವರು. ಸಿಇಒ ಕೀರ್ತನ ಆರ್ ನಿಖಿಲ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್ ಗಳಲ್ಲಿ ವ್ಯಾಸಂಗ ಮುಗಿಸಿ ಭವಿಷ್ಯ ಕಟ್ಟಿಕೊಂಡಿದ್ದರಲ್ಲದೇ ಆರ್ಥಿಕವಾಗಿ ಅತೀ ಸಂಕಷ್ಟದಲ್ಲಿರುವ ಕೆಲವು ಕುಟುಂಬಗಳ ವಿದ್ಯಾರ್ಥಿಗಳಿಗೆ ಆರ್.ಕೆ.ವಿದ್ಯಾ ಸಂಸ್ಥೆಯಿಂದ ಪ್ರತಿ ವರ್ಷ ಉಚಿತ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಮರಿಸ್ವಾಮಿಗೌಡ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಬಾಬು, ಪ್ರಾದ್ಯಾಪಕ ಅಜಯ್ ಇದ್ದರು.

ನಗರ ಸೇರಿದಂತೆ ಹಲವೆಡೆ ಭಾರೀ ಮಳೆ

ಮಂಡ್ಯ:

ನಗರ ಸೇರಿದಂತೆ ತಾಲೂಕು ಹಾಗೂ ಜಿಲ್ಲಾದ್ಯಂತ ಬುಧವಾರ ಸಂಜೆ ಭಾರೀ ಮಳೆ ಸುರಿಯಿತು.

ಕಳೆದ ಕೆಲ ದಿನಗಳಿಂದ ತಂಪಾದ ಗಾಳಿಯೊಂದಿಗೆ ಆಗಾಗ್ಗೆ ತುಂತುರು ಮಳೆ ಸುರಿಯುತ್ತಿತ್ತು. ಬಿಸಿಲಿನ ಜೊತೆಗೆ ಮೋಡ ಮುಸುಕಿನ ವಾತಾವರಣವಿತ್ತು. ಆದರೆ, ಇಲ್ಲಿಯವರೆಗೂ ಜೋರು ಮಳೆ ಮಾತ್ರ ಸುರಿದಿರಲಿಲ್ಲ. ಇದರಿಂದ ಸೆಕೆಯೂ ಹೆಚ್ಚಾಗಿತ್ತು.

ಬುಧವಾರ ಬೆಳಗ್ಗೆಯಿಂದಲೂ ಬಿಸಿಲು, ಮೋಡದ ಜೊತೆಗೆ ತಂಪಾದ ಗಾಳಿಯೂ ಬೀಸುತ್ತಿತ್ತು. ಸಂಜೆ 4.15ರಲ್ಲಿ ಮೋಡ ಕವಿದು ಕೆಲಕಾಲ ಭಾರೀ ಮಳೆ ಸುರಿದು ವಾತಾವರಣವನ್ನು ಸ್ವಲ್ಪ ತಂಪಾಗಿಸಿತು. ನಂತರ ರಾತ್ರಿ 7.05ರ ಸಮಯದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಜೋರು ಮಳೆ ಸುರಿದು ವಾತಾವರಣವನ್ನು ಮತ್ತಷ್ಟು ತಂಪಾಗಿಸಿತು.

ಮಳೆಯಿಂದಾಗಿ ಸಂಜೆ ಕೆಲ ವಿದ್ಯಾರ್ಥಿಗಳು ಮಳೆಯಲ್ಲಿ ನೆನೆದು ತಮ್ಮ ಮನೆಗಳಿಗೆ ತೆರಳುವಂತಾಯಿತು. ರಾತ್ರಿ ಸುರಿದ ಮಳೆಯಿಂದಾಗಿ ವಾಹನ ಸವಾರರು, ಪಾದಚಾರಿಗಳ ಸಂಚಾರ, ರಸ್ತೆ ಬದಿಯ ಪಾಸ್ಟ್ ಫುಡ್ ವ್ಯಾಪಾರಸ್ಥರಿಗೆ ತೊಂದರೆಯಾಯಿತು. ಮಂಡ್ಯ ನಗರ ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಲ್ಲೂ ಮಳೆಯಾದ ವರದಿಯಾಗಿದೆ.