ಒತ್ತಡದಿಂದ ಹೊರಬರಲು ಕ್ರೀಡೆ ಸಹಕಾರಿ

| Published : Nov 28 2024, 12:31 AM IST

ಸಾರಾಂಶ

ಕ್ರೀಡೆ ಜೀವನ ಪಾಠ ಹೇಳಿಕೊಡುತ್ತದೆ. ಇಲ್ಲಿ ತಾಳ್ಮೆ ಮುಖ್ಯ

ಕನ್ನಡಪ್ರಭ ವಾರ್ತೆ ಮೈಸೂರುಕ್ರೀಡಾಕೂಟಗಳು ಪೊಲೀಸರ ನಿತ್ಯದ ಒತ್ತಡದಿಂದ ಹೊರಬರಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ ಹೇಳಿದರು.ಚಾಮುಂಡಿಬೆಟ್ಟದ ತಪ್ಪಲಿನ ನಗರ ಸಶಸ್ತ್ರ ಮೀಸಲು ಪಡೆಯ ಮೈದಾನದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ನಿತ್ಯ ಒತ್ತಡ ಇರುತ್ತದೆ. ಅದರೊಳಗೆ ತಾಳ್ಮೆಯಿಂದ ಕೆಲಸ ನಿರ್ವಹಣೆ ಮಾಡಬೇಕಾದ ಸವಾಲು ಅಧಿಕಾರಿ, ಸಿಬ್ಬಂದಿಗೆ ಇದೆ ಎಂದರು.ಕ್ರೀಡೆ ಜೀವನ ಪಾಠ ಹೇಳಿಕೊಡುತ್ತದೆ. ಇಲ್ಲಿ ತಾಳ್ಮೆ, ಗುರಿ ತಲುಪುವ ಪರಿಶ್ರಮ ಹಾಗೂ ಒಗ್ಗಟ್ಟಿನ ಮೌಲ್ಯವನ್ನು ತಿಳಿಯಲು ಸಾಧ್ಯ. ನಿತ್ಯ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರು ಕ್ರೀಡೆಗಳಲ್ಲಿ ಭಾಗವಹಿಸಿ ಒತ್ತಡ ಕಡಿಮೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.ಇಲಾಖೆಯಲ್ಲಿ ಕ್ಲಿಷ್ಟಕರ ಸಮಸ್ಯೆ ಎದುರಿಸುವಾಗ ಇಲ್ಲಿ ಕಲಿತ ಕೆಲವು ಪಾಠಗಳು ಸಹಾಯಕ್ಕೆ ಬರಬಹುದು. ದಿನದ 24 ಗಂಟೆಗಳ ಕಾಲ ಸಾರ್ವಜನಿಕರ ಆಸ್ತಿ-ಪ್ರಾಸ್ತಿ, ಪ್ರಾಣ ರಕ್ಷಣೆಗಾಗಿ ಕೆಲಸ ಮಾಡುವ ಪೊಲೀಸರು ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ ಮೈಸೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿವಿಧ ಆಟೋಟಗಳಲ್ಲಿ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದಾಗಿ ಅವರು ತಿಳಿಸಿದರು.ಸದಾ ತಮ್ಮ ಕೆಲಸದಲ್ಲೇ ಮಗ್ನರಾಗಿರುವ ಇಲಾಖೆ ಸಿಬ್ಬಂದಿ ಆರೋಗ್ಯದ ಬಗ್ಗೆಯೂ ಗಮನ ಹರಿಸುವ ಅನಿವಾರ್ಯತೆ ಇದೆ. ದೈಹಿಕವಾಗಿ ಸದೃಢರಾಗಿರಲು ನಿತ್ಯ ವ್ಯಾಯಾಮ, ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಒಳ್ಳೆಯದು. ಹಿಂದೆ ಎಲ್ಲಾ ಸರ್ಕಾರಿ ಇಲಾಖೆಗಳಲ್ಲೂ ಪ್ರತಿ ವರ್ಷ ಕ್ರೀಡಾಕೂಟ ನಡೆಯುತ್ತಿತ್ತು. ಈಚೆಗೆ ಅವು ಮೂರು ವರ್ಷಗಳಿಗೊಮ್ಮೆ ನಡೆಯುತ್ತಿದೆ. ಆದರೆ ಪೊಲೀಸ್ ಇಲಾಖೆ ನಿರಂತರ ಕ್ರೀಡಾಕೂಟ ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಿದೆ ಎಂದರು.ಕ್ರೀಡಾಕೂಟವನ್ನು ಜಿಲ್ಲಾಧಿಕಾರಿ ಜಿ. ಲಕ್ಷ್ನೀಕಾಂತ್ ರೆಡ್ಡಿ ಬಲೂನು, ಪಾರಿವಾಳ ಹಾರಿ ಬಿಡುವ ಮೂಲಕ ಉದ್ಘಾಟಿಸಿದರು.ಕ್ರೀಡಾಪಟುಗಳು ಆಕರ್ಷಕ ಪಥಸಂಚಲನದ ಮೂಲಕ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು. ಆರ್.ಪಿ. ರಾಮು ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಕ್ರೀಡಾಕೂಟದಲ್ಲಿ ಸಿಎಆರ್, ನರಸಿಂಹರಾಜ ಉಪ ವಿಭಾಗ, ಕೃಷ್ಣರಾಜ ಉಪ ವಿಭಾಗ, ದೇವರಾಜ ಉಪ ವಿಭಾಗ, ವಿಜಯನಗರ ಉಪ ವಿಭಾಗ, ಸಂಚಾರ ಉಪ ವಿಭಾಗ, ವಿಶೇಷ ಪಡೆ, ಮಹಿಳಾ ಪಡೆ, ಅಶ್ವರೋಹಿ ದಳದ ಸಿಬ್ಬಂದಿ ಆಕರ್ಷಕ ಪಥ ಸಂಚಲನ ನಡೆಸಿ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು.ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಸೆಸ್ಕ್ ಜಾಗೃತ ದಳದ ಎಸ್ಪಿ ಸವಿತಾ ಹೂಗಾರ್, ಅಶ್ವರೋಹಿ ದಳದ ಕಮಾಂಡೆಂಟ್ ಶೈಲೇಂದ್ರ, ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿ, ಮಾರುತಿ ಮೊದಲಾದವರು ಇದ್ದರು.ಇದಕ್ಕೂ ಮೊದಲು ಗಣ್ಯರನ್ನು ಅಶ್ವಾರೋಹಿ ಪಡೆಯೊಂದಿಗೆ ಬರಮಾಡಿಕೊಳ್ಳಲಾಯಿತು. ನಂತರ, ತಂಡಗಳನ್ನು ಪರಿಚಯ ಮಾಡಿಕೊಟ್ಟು ಪಥ ಸಂಚಲನ ನಡೆಸಲಾಯಿತು. ಪೊಲೀಸ್, ರಾಷ್ಟ್ರಧ್ವಜ ಆಗಮನದ ಬಳಿಕ ಕ್ರೀಡಾಜ್ಯೋತಿ ಸ್ವೀಕರಿಸಲಾಯಿತು.