ಕೃಷಿ ಪರಿಕರ ಮಾರಾಟಗಾರರಿಗೆ ಡಿಪ್ಲೋಮಾ 6ನೇ ತಂಡದ ಉದ್ಘಾಟನೆ

| Published : Feb 09 2024, 01:53 AM IST / Updated: Feb 09 2024, 04:05 PM IST

ಸಾರಾಂಶ

ದೇಸಿ ತರಬೇತಿಯ ರಾಜ್ಯ ನೋಡಲ್ ಅಧಿಕಾರಿ ಡಾ.ಬಿ. ಕಲ್ಪನಾ ಅವರು ಪರಿಕರ ಮಾರಾಟಗಾರರಿಗೆ ದೇಸಿ ತರಬೇತಿಯ ಅಗತ್ಯತೆಯ ಬಗ್ಗೆ, ದೇಸಿ ತರಬೇತಿಯ ಅನುಷ್ಠಾನ, ದೇಸಿ ತರಬೇತಿಯ ಮೂಲ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಬೀದರ್‌ನಲ್ಲಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಭಾರತೀಯ ಕೃಷಿ ಅನುಸಂಧಾನ ಪರಿಷತ್- ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ ಬೆಂಗಳೂರು, ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ ಹೈದರಾಬಾದ್ ಮತ್ತು ದ.ಕ. ಕೃಷಿ ಇಲಾಖೆ ಸಹಯೋಗದಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ವಿಸ್ತರಣಾ ಸೇವೆಯಲ್ಲಿ ಡಿಪ್ಲೋಮಾ 6ನೇ ತಂಡದ ಉದ್ಘಾಟನಾ ಸಮಾರಂಭ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಡಾ. ಕೆಂಪೇಗೌಡ ಎಚ್., ಪರಿಕರ ಮಾರಾಟಗಾರರು ವ್ಯಾಪಾರದ ಜೊತೆಗೆ ನೈತಿಕತೆ ಹೊಂದಿರಬೇಕು. 

ಪ್ರಮಾಣ ಪತ್ರಕ್ಕಾಗಿ ಮಾತ್ರವಲ್ಲದೆ ಜ್ಞಾನದ ಅವಶ್ಯಕತೆಕಾಗಿ ದೇಸಿ ಕೋರ್ಸ್ ಅವಶ್ಯವಾಗಿದೆ ಎಂದು ಹೇಳಿದರು.ದೇಸಿ ತರಬೇತಿಯ ರಾಜ್ಯ ನೋಡಲ್ ಅಧಿಕಾರಿ ಡಾ.ಬಿ. ಕಲ್ಪನಾ ಅವರು ಪರಿಕರ ಮಾರಾಟಗಾರರಿಗೆ ದೇಸಿ ತರಬೇತಿಯ ಅಗತ್ಯತೆಯ ಬಗ್ಗೆ, ದೇಸಿ ತರಬೇತಿಯ ಅನುಷ್ಠಾನ, ದೇಸಿ ತರಬೇತಿಯ ಮೂಲ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. 

ದೇಶದಲ್ಲಿ ಈಗಾಗಲೇ 2,80,000 ಜನ ದೇಸಿ ಕೋರ್ಸ್‌ಗೆ ನೋಂದಣಿ ಮಾಡಿದ್ದು 80,200 ಅಭ್ಯರ್ಥಿಗಳು ಪ್ರಮಾಣ ಪತ್ರ ಪಡೆದಿದ್ದಾರೆ. 22,000 ಅಭ್ಯರ್ಥಿ ಗಳು ಪ್ರಸ್ತುತ ತರಬೇತಿ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಮೀನುಗಾರಿಕಾ ಕಾಲೇಜಿನ ಡೀನ್ ಡಾ. ಆಂಜನೇಯಪ್ಪ ಎಚ್.ಎನ್. ಮಾತನಾಡಿ, ಪರಿಕರ ಮಾರಾಟಗಾರರು ತಮ್ಮನ್ನು ತಾವೇ ಸಂಪನ್ಮೂಲ ವ್ಯಕ್ತಿಯಾಗಿ ಮೊದಲು ಪರಿವರ್ತಿಸಿಕೊಳ್ಳಬೇಕು. 

ಇತರ ಪರಿಕರ ಮಾರಾಟಗಾರರೊಂದಿಗೆ ಸಂವಾದ ನಡೆಸಿ ಮಾಹಿತಿಯನ್ನು ಹಂಚಿಕೊಂಡು ರೈತರಿಗೆ ಸೂಕ್ತ ಸಲಹೆ ನೀಡಬೇಕು ಎಂದು ಹೇಳಿದರು.

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥ ಡಾ.ಟಿ.ಜೆ. ರಮೇಶ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ರವೀಂದ್ರಗೌಡ ಪಾಟೀಲ್ ಇದ್ದರು. 

ಕೇಂದ್ರದ ವಿಜ್ಞಾನಿ ಮತ್ತು ದೇಸಿ ಸಂಯೋಜಕ ಡಾ. ಶಿವಕುಮಾರ್ ಆರ್. ಸ್ವಾಗತಿಸಿದರು, ಡಾ. ಮಲ್ಲಿಕಾರ್ಜುನ ಎಲ್. ವಂದಿಸಿದರು, ದೇಸಿ ಕಾರ್ಯಕ್ರಮದ ಅನುವುಗಾರ ವಿಜಿತ ವಿ. ಶೆಟ್ಟಿ ನಿರೂಪಿಸಿದರು. ಒಟ್ಟು 40 ಅಭ್ಯರ್ಥಿ ಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.