ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಸಹಕಾರಿ ಕ್ಷೇತ್ರದ ಅಭಿವೃದ್ಧಿಗಾಗಿ ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಕರ್ತವ್ಯ ನಿರ್ವಹಿಸಬೇಕಿದೆ ಎಂದು ರಾಜ್ಯ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಸಲಹೆ ನೀಡಿದ್ದಾರೆ.ರಾಜ್ಯ ಸಹಕಾರ ಮಹಾಮಂಡಲ ನಿಯಮಿತ ಬೆಂಗಳೂರು, ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೇತೃತ್ವದಲ್ಲಿ ವಿವಿಧ ಸಹಕಾರ ಸಂಘಗಳ ಸಹಯೋಗದಲ್ಲಿ ನಗರದ ಉರ್ವ ಮಾರ್ಕೆಟ್ ಮೈದಾನದಲ್ಲಿ ಶನಿವಾರ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ತತ್ವ ಎಲ್ಲರೊಳಗೂ ಜನ್ಮತಃ ಬಂದಿರುತ್ತದೆ. ‘ನಾನು ಎಲ್ಲರಿಗಾಗಿ ಎಲ್ಲರು ನನಗಾಗಿ’ ಎಂಬ ತತ್ವದ ಮೇಲೆ ಈ ಕ್ಷೇತ್ರ ನಿಂತಿದೆ. ಹಾಗಾಗಿ ಇಲ್ಲಿ ಜಾತ್ಯತೀತವಾಗಿ, ಪಕ್ಷಾತೀತವಾಗಿ ಸ್ಪಂದನೆ ಮಾಡಬೇಕಾಗುತ್ತದೆ. ಸಹಕಾರಿ ಕ್ಷೇತ್ರದಲ್ಲಿ ಸೇವೆಯನ್ನು ಗುರುತಿಸಿ ಜನರು ನಾಯಕತ್ವ ಕೊಡ್ತಾರೆ. ಅದೇ ರೀತಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಉತ್ತಮ ಸಹಕಾರಿ ಆಗಿ ಎಲ್ಲ ಸಮುದಾಯ, ಪಕ್ಷಗಳ ಮುಖಂಡರ ಗೌರವ ಪಡೆಯುತ್ತಿದ್ದಾರೆ. ಜಾತ್ಯತೀತ, ಪಕ್ಷಾತೀತ ಕೆಲಸಗಳಿಂದ ಇದು ಸಾಧ್ಯವಾಗಿದೆ ಎಂದರು.ಯುವಕರ ಸಹಭಾಗಿತ್ವ ಅಗತ್ಯ:
ಸಹಕಾರಿ ಆಂದೋಲನ ಜನರ ಆಂದೋಲನ ಆಗಬೇಕು ಎನ್ನುವುದು ನಮ್ಮ ಉದ್ದೇಶ. ಈ ಕ್ಷೇತ್ರ ಸೀಮಿತ ಜನರ ಕೈಯಲ್ಲಿ ಇರುವಂಥದ್ದಲ್ಲ. ಹೊಸ ಯುವಕರು ಸಹಕಾರಿ ಆಂದೋಲನದಲ್ಲಿ ತೊಡಗಿಸೋದು ಇತ್ತೀಚೆಗೆ ಕಡಿಮೆಯಾಗಿದೆ. ಹೆಚ್ಚೆಚ್ಚು ಯುವಕರು, ಮಹಿಳೆಯರು ಈ ಕ್ಷೇತ್ರಕ್ಕೆ ಬರಬೇಕಿದೆ ಎಂದು ಕೆ.ಎನ್. ರಾಜಣ್ಣ ಕರೆ ನೀಡಿದರು.ಸಹಕಾರಿ ಆಂದೋಲನ 1904ರಿಂದ ಇದುವರೆಗೆ ಸಶಕ್ತವಾಗಿ ಜನರ ಬೇಡಿಕೆಗೆ ಅನುಗುಣವಾಗಿ ಸ್ಪಂದಿಸುತ್ತಿದೆ. ಮುಂದೆಯೂ ಜನರ ಜೀವನ ಉತ್ತಮಪಡಿಸಲು ಅಗತ್ಯ ಇರುವವರಿಗೆ ಸಾಲ ಸೌಲಭ್ಯ ಕೊಡಬೇಕಾದ ಕರ್ತವ್ಯ ಈ ಕ್ಷೇತ್ರಕ್ಕಿದೆ. ರಾಜಕಾರಣವನ್ನು ಮೀರಿ ಸಹಕಾರಿಗಳದ್ದೇ ಒಂದು ಪಕ್ಷ ಅಂತ ತಿಳಿದು ಪಕ್ಷಾತೀತವಾಗಿ ನಿರ್ವಹಿಸಲು ಕಟಿಬದ್ಧನಾಗಿರುತ್ತೇವೆ ಎಂದು ರಾಜಣ್ಣ ಹೇಳಿದರು.
ಆರ್ಥಿಕ ಚಟುವಟಿಕೆ ಚೇತರಿಕೆ:ದೇಶದ ಆರ್ಥಿಕತೆ ಹೆಚ್ಚಿಸುವ ಕೆಲಸ ಮಾಡಬೇಕಿದೆ. ಅದಕ್ಕಾಗಿ ಹಳ್ಳಿ ಹಳ್ಳಿಗಳಲ್ಲಿ ಹೆಚ್ಚು ಆರ್ಥಿಕ ಚಟುವಟಿಕೆ ನಡೆಯಬೇಕು. ಬೇಸಾಯದ ಕುಟುಂಬಗಳು ಉಪಕಸುಬು ಮಾಡಲು ಸ್ವಸಹಾಯ ಸಂಘಗಳು ಹಣಕಾಸಿನ ನೆರವು ಮಾಡುವುದು, ರೈತರು- ಗ್ರಾಮೀಣ ಜನತೆ ಸಿದ್ಧಪಡಿಸುವ ವಸ್ತುಗಳಿಗೆ ಮಾರುಕಟ್ಟೆ ದೊರಕಿಸಿದಾಗ ದೇಶದ ಆರ್ಥಿಕತೆ ಏರಿಕೆಯಾಗಲಿದೆ. ಈ ನಿಟ್ಟಿನಲ್ಲಿ ನವೋದಯ ಚಾರಿಟೆಬಲ್ ಟ್ರಸ್ಟ್ ಮೂಲಕ 38 ಸಾವಿರಕ್ಕೂ ಅಧಿಕ ಸ್ವಸಹಾಯ ಸಂಘಗಳನ್ನು ಮಾಡಿ ಹಳ್ಳಿಗಾಡಿನ ಜನರು ಸ್ವಾಭಿಮಾನ ಬದುಕು ಕಾಣಲು ಸಾಧ್ಯವಾಗುತ್ತಿದೆ ಎಂದರು.
ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಜನಸಾಮಾನ್ಯರೂ ಸ್ವಾವಲಂಬನೆಯ ಜೀವನ ಸಾಗಿಸಲು ಸಹಕಾರಿ ಕ್ಷೇತ್ರದ ಕೊಡುಗೆ ಅತಿ ಗಮನಾರ್ಹ. ಜನರಿಗೆ ಬೇಕಾದ ಯೋಜನೆಗಳು ಸಹಕಾರಿ ಕ್ಷೇತ್ರದ ಮೂಲಕ ಕಾರ್ಯಗತವಾಗಿವೆ. ಎಲ್ಲ ಬ್ಯಾಂಕ್‌ಗಳು ಆಸ್ತಿ, ಆದಾಯ ನೋಡಿ ಸಾಲ ನೀಡಿದರೆ, ಕೇವಲ ಜನರ ಮುಖ ನೋಡಿ ಸಾಲ ಕೊಡುವುದಿದ್ದರೆ ಅದು ಸಹಕಾರಿ ಬ್ಯಾಂಕ್‌ಗಳು ಮಾತ್ರ. ಈ ಕ್ಷೇತ್ರ ಇನ್ನಷ್ಟು ಬೆಳೆಯಬೇಕಾಗಿದೆ ಎಂದರಲ್ಲದೆ, ಎಸ್‌ಸಿಡಿಸಿಸಿ ಬ್ಯಾಂಕ್ ಎಲ್ಲ ತಂತ್ರಜ್ಞಾನ ಅಳವಡಿಸಿಕೊಂಡು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಷ್ಟು ಬೆಳೆದಿದೆ. ಇದು ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.ಸಹಕಾರಿ ಧ್ವಜಾರೋಹಣ ನೆರವೇರಿಸಿದ ಶಾಸಕ ಹಾಗೂ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಟಿ. ದೇವೇಗೌಡ ಮಾತನಾಡಿ, ರಾಜ್ಯದಲ್ಲಿ ಯಶಸ್ವಿ ಸಹಕಾರಿ ಆಂದೋಲನವು ಡಾ.ಎಂ.ಎನ್. ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ನಡೆಯುತ್ತಿದೆ. ಅವರು ರಾಷ್ಟ್ರದ ಸಹಕಾರಿ ರೂವಾರಿ ಆಗಿದ್ದಾರೆ. ಸಹಕಾರಿ ಕ್ಷೇತ್ರದ ಏಕೈಕ ನಾಯಕ ಆಗಿ ಹೊರಹೊಮ್ಮಿದ್ದಾರೆ ಎಂದು ಶ್ಲಾಘಿಸಿದರು.ಐದು ಟ್ರಿಲಿಯನ್ ಆರ್ಥಿಕತೆಯ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹಾಕಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ನಂಬಿಕೆ, ವಿಶ್ವಾಸದಿಂದ ಸಹಕಾರ ಕ್ಷೇತ್ರವನ್ನು ಮುನ್ನಡೆಸಬೇಕಾಗಿದೆ. ಯುವಕರು ಹೆಚ್ಚೆಚ್ಚು ಈ ಕ್ಷೇತ್ರಕ್ಕೆ ಬರುವಂತೆ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಸಹಕಾರಿ ತತ್ವಗಳು, ವಿಚಾರಗಳು ನೂರು ವರ್ಷ ದಾಟಿ ಅದ್ಭುತ ಸಾಧನೆ ಮಾಡಿದೆ. ಭಾರತ ಆರ್ಥಿಕತೆಯಲ್ಲಿ 5ನೇ ಸ್ಥಾನದಿಂದ ಮೂರಕ್ಕೆ ಏರಿದೆ. ಇದಕ್ಕೆ ಸಹಕಾರಿ ರಂಗ ಪ್ರಮುಖ ಕಾರಣ. ರೈತರ ಆತ್ಮಹತ್ಯೆ ಆಗದ ಜಿಲ್ಲೆ ಇದ್ದರೆ ಅದು ಕರಾವಳಿ ಮಾತ್ರ, ಇದಕ್ಕೆ ಸಹಕಾರಿ ಕ್ಷೇತ್ರ ಮುಖ್ಯ ಕಾರಣ ಎಂದರು.ಶಾಸಕರಾದ ಡಿ.ವೇದವ್ಯಾಸ ಕಾಮತ್, ಯಶಪಾಲ್ ಸುವರ್ಣ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಕೆಎಂಎಫ್ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ರಾಜ್ಯ ಸಹಕಾರ ಮಹಾಮಂಡಳ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್. ನವೀನ್, ಆರ್.ಶ್ರೀಧರ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಗೋಪಾಲಕೃಷ್ಣ ಭಟ್, ಮಾಜಿ ಸಚಿವ ಅಭಯಚಂದ್ರ ಜೈನ್, ಉದ್ಯಮಿ, ರೋಹನ್ ಕಾರ್ಪೋರೇಶನ್‌ನ ಆಡಳಿತ ನಿರ್ದೇಶಕ ರೋಹನ್ ಮೊಂತೇರೊ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಸಹಕಾರ ಇಲಾಖೆಯ ಅಧಿಕಾರಿ ಲಿಂಗರಾಜು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ರಾಜ್ಯ ಸಹಕಾರ ಮಹಾಮಂಡಳ ವ್ಯವಸ್ಥಾಪಕ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರು ಇದ್ದರು. ಕಾರ್ಯಕ್ರಮಕ್ಕೆ ಮೊದಲು ವೈಭವದ ಸಹಕಾರಿ ಜಾಥಾ ಜನಮನಸೂರೆಗೊಂಡಿತು.ಸೇವೆಯ ಕ್ಷೇತ್ರವಾಗಿ ಸಹಕಾರಿ ಬೆಳೆಯಲಿ: ಡಾ.ಎಂಎನ್ಆರ್‌ಕರಾವಳಿ ಜಿಲ್ಲೆಗಳ ಸಹಕಾರ ಕ್ಷೇತ್ರದ ಗೌರವವನ್ನು ಇಲ್ಲಿನ ಜನರು ಉಳಿಸಿದ್ದಾರೆ. ಯಾವುದೇ ಅಭಿವೃದ್ಧಿ ಸಹಕಾರ ಕ್ಷೇತ್ರದಿಂದ ಮಾತ್ರ ಸಾಧ್ಯ. ಇದನ್ನು ಕೇಂದ್ರ ಸರ್ಕಾರ ಮನಗಂಡು ಸಹಕಾರ ಇಲಾಖೆ ಆರಂಭ ಮಾಡಿ, ಸಹಕಾರ ಕ್ಷೇತ್ರ ಇನ್ನಷ್ಟು ಬಲಗೊಳಿಸಲು ಪೂರಕ ಕ್ರಮ ಕೈಗೊಂಡಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು. ದೇಶದಲ್ಲಿ ಮಹಿಳಾ ಸ್ವಾವಲಂಬನೆ ಆದದ್ದು ಸಹಕಾರ ಕ್ಷೇತ್ರದಿಂದ. ಇನ್ನಷ್ಟು ಜನರ ಸೇವೆಯ ಕ್ಷೇತ್ರವಾಗಿ ಸಹಕಾರಿ ಕ್ಷೇತ್ರ ಬೆಳೆಯಲಿ ಎಂದು ಅವರು ಆಶಿಸಿದರು.ನಂದಿನಿ ಹೊಸ ಉತ್ಪನ್ನ ಬಿಡುಗಡೆ
ಕಾರ್ಯಕ್ರಮದಲ್ಲಿ ನಂದಿನಿ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು. ಕಡಲೆಕಾಯಿ ಬರ್ಫಿ, ರಸ್ ಕದಮ್ ಉತ್ಪನ್ನಗಳನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು. ಕರಾವಳಿ ಸಹಕಾರಿ ಪತ್ರಿಕೆಯ ವಿಶೇಷ ಪುರವಣಿಯನ್ನು ಸಚಿವ ರಾಜಣ್ಣ ಬಿಡುಗಡೆ ಮಾಡಿದರು. ಇದೇ ಸಂದರ್ಭ ಅತ್ಯುತ್ತಮ ಸಹಕಾರಿ ಸಂಘಗಳಿಗೆ ಅಭಿನಂದನೆ ಸಲ್ಲಿಸಲಾಯಿತು.