ಜುಲೈ 28 ರಂದು ಮುಖ್ಯಮಂತ್ರಿಗಳಿಂದ 88 ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ: ಡಾ.ಕುಮಾರ

| Published : Jul 23 2025, 01:45 AM IST

ಸಾರಾಂಶ

ಸಾರ್ವಜನಿಕರಿಗೆ ನೀಡಲಾಗುವ ಊಟ ತಯಾರಿಕೆ ಸ್ಥಳದಲ್ಲಿ ಹಾಗೂ ವೇದಿಕೆ ಬಳಿ ಆಹಾರ ಸುರಕ್ಷತಾ ಅಧಿಕಾರಿಗಳನ್ನು ನಿಯೋಜಿಸಿ ಆಹಾರ ಪರಿಶೀಲನೆ, ಸುತ್ತಮುತ್ತಲೂ ಸ್ವಚ್ಛತೆ ಕಾಪಾಡಲು ಪೌರಕಾರ್ಮಿಕರನ್ನು ನಿಯೋಜಿಸಬೇಕು. ಆಹಾರ ವಿತರಣೆಯಲ್ಲಿ ಲೋಪವಾಗದಂತೆ ಕೌಂಟರ್ ಗಳನ್ನು ತೆರೆಯಬೇಕು. ನೂಕು ನುಗ್ಗಲಾಗದಂತೆ ಸಿಬ್ಬಂದಿಯನ್ನು ನಿಯೋಜಿಸಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಮದ್ದೂರು ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಜುಲೈ 28 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಸಿದ್ಧತೆ ಮಾಡಿಕೊಳ್ಳಬೇಕು. ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು. ಇದಕ್ಕೂ ಮುನ್ನ ಪರಿಶೀಲಿಸಬೇಕು ಎಂದರು.

ಸಾರ್ವಜನಿಕರಿಗೆ ನೀಡಲಾಗುವ ಊಟ ತಯಾರಿಕೆ ಸ್ಥಳದಲ್ಲಿ ಹಾಗೂ ವೇದಿಕೆ ಬಳಿ ಆಹಾರ ಸುರಕ್ಷತಾ ಅಧಿಕಾರಿಗಳನ್ನು ನಿಯೋಜಿಸಿ ಆಹಾರ ಪರಿಶೀಲನೆ, ಸುತ್ತಮುತ್ತಲೂ ಸ್ವಚ್ಛತೆ ಕಾಪಾಡಲು ಪೌರಕಾರ್ಮಿಕರನ್ನು ನಿಯೋಜಿಸಬೇಕು. ಆಹಾರ ವಿತರಣೆಯಲ್ಲಿ ಲೋಪವಾಗದಂತೆ ಕೌಂಟರ್ ಗಳನ್ನು ತೆರೆಯಬೇಕು. ನೂಕು ನುಗ್ಗಲಾಗದಂತೆ ಸಿಬ್ಬಂದಿಯನ್ನು ನಿಯೋಜಿಸುವಂತೆ ಸೂಚಿಸಿದರು.

88 ಕಾಮಗಾರಿಗಳ ಉದ್ಘಾಟನೆ/ಶಿಲಾನ್ಯಾಸ:

ಲೋಕೋಪಯೋಗಿ ಇಲಾಖೆಯ- 81.29 ಕೋಟಿ ರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ- 12.15 ಕೋಟಿ ರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ- 8 ಕೋಟಿ ರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ- 257.18 ಕೋಟಿ ರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- 2.45 ಕೋಟಿ ರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ-16.49 ಕೋಟಿ ರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪ ವಿಭಾಗ 47.28 ಕೋಟಿ ರು. ಕಾವೇರಿ ನೀರಾವರಿ ನಿಗಮ ರು. 484.33 ಕೋಟಿ. ಮದ್ದೂರು ಪುರಸಭೆ 5.25 ಕೋಟಿ ರು. ಸಮಾಜ ಕಲ್ಯಾಣ ಇಲಾಖೆ 23 ಕೋಟಿ ರು. ಮಂಡ್ಯ ವಿಶ್ವವಿದ್ಯಾನಿಲಯ 8.50 ಕೋಟಿ ರು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ 187 ಕೋಟಿ ರು, ಕೃಷಿ ಇಲಾಖೆ 2 ಕೋಟಿ ರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 1.80 ಕೋಟಿ ರು, ತೋಟಗಾರಿಕೆ ಇಲಾಖೆ 21.65 ಕೋಟಿ ರು ಅನುದಾನದ ಕಾಮಗಾರಿಗಳ ಶಂಕುಸ್ಥಾಪನೆ/ ಉದ್ಘಾಟನೆ ನೆರವೇರಲಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಕುಮಾರ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.