ದುಶ್ಚಟ ಜೀವನವನ್ನೇ ನುಂಗಿ ಹಾಕುತ್ತವೆ

| Published : Aug 02 2024, 12:56 AM IST

ಸಾರಾಂಶ

ರಾಷ್ಟ್ರದ ಭವಿಷ್ಯವಾಗಿರುವ ಯುವಜನರು ಶಾಲಾ- ಕಾಲೇಜು ಹಂತದಲ್ಲಿಯೇ ಮಧ್ಯಪಾನ ಧೂಮಪಾನ ಹಾಗೂ ಡ್ರಗ್ಸ್ ಗಳಂತಹ ಹಾನಿಕಾರಕ ವಸ್ತುಗಳಿಗೆ ಮಾರಿಹೋಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಚಟ, ದುಶ್ಚಟ ಹಾಗೂ ವ್ಯಸನ ಎನ್ನುವುವು ಒಂದಕ್ಕೊoದು ಸಂಬoಧ ಹೊಂದಿದ್ದು, ದಿನೇ ದಿನೇ ಸ್ವಲ್ಪ ಮಟ್ಟಿಗೆ ನಮ್ಮನ್ನು ಆವರಿಸಿ ಕಾಲಕ್ರಮೇಣ ನಮ್ಮ ಜೀವನವನ್ನೇ ನುಂಗಿ ಬಿಡುತ್ತವೆ. ಆದ್ದರಿಂದ ಯುವಜನತೆ ಇದರಿಂದ ದೂರ ಇರಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ವಿದ್ಯಾವಿಕಾಸಎಂಜಿನಿಯರಿಂಗ್ ಕಾಲೇಜು ವತಿಯಿಂದ ವಿದ್ಯಾವಿಕಾಸ ಎಂಜಿನಿಯರಿoಗ್ ಕಾಲೇಜಿನಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವ್ಯಸನ ಮುಕ್ತ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರದ ಭವಿಷ್ಯವಾಗಿರುವ ಯುವಜನರು ಶಾಲಾ- ಕಾಲೇಜು ಹಂತದಲ್ಲಿಯೇ ಮಧ್ಯಪಾನ ಧೂಮಪಾನ ಹಾಗೂ ಡ್ರಗ್ಸ್ ಗಳಂತಹ ಹಾನಿಕಾರಕ ವಸ್ತುಗಳಿಗೆ ಮಾರಿಹೋಗುತ್ತಿದ್ದಾರೆ. ಭವಿಷ್ಯ ಕಟ್ಟಿಕೊಳ್ಳುವ ಅವಕಾಶವಿರುವುದು ವಿದ್ಯಾರ್ಥಿ ಜೀವನದಲ್ಲಿಯೇ. ಹಾಗಾಗಿ ಈ ಉತ್ತಮ ಸಮಯವನ್ನು ಒಳ್ಳೆಯ ಕಾರ್ಯ ಚಟುವಟಿಕೆಗೆ ಬಳಸಿಕೊಂಡು ಮತ್ತೊಬ್ಬರಿಗೆ ಮಾದರಿ ಆಗುವಂತೆ ಬದುಕಬೇಕು ಎಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಿ. ಕವೀಶ್ ಗೌಡ ಮಾತನಾಡಿ, ನಮಗೆಲ್ಲರಿಗೂ ಹಲವಾರು ಜವಾಬ್ದಾರಿಗಳಿದ್ದು, ಮದ್ಯಪಾನ ಧೂಮಪಾನದಂತಹ ಅಪಾಯಕಾರಿ ವಸ್ತುಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದ ಮೇಲೆ ಅದನ್ನು ಹತ್ತಿರಕ್ಕೆ ಬರಲು ಬಿಡಬಾರದು ಎಂದರು.

ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜು ಹಂತದಲ್ಲಿಯೇ ಮಾದಕ ವಸ್ತು ಹಾಗೂ ದುಶ್ಚಟಗಳ ಬಗ್ಗೆ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಅರ್ಥಪೂರ್ಣ ವಿಷಯವನ್ನು ಹೊಂದಿರುವ ಜಯಂತಿಗಳನ್ನು ಆಚರಿಸಿ ಅದರಲ್ಲಿರುವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜವನ್ನು ಉಳಿಸಿ ಬೆಳೆಸುವ ಕೆಲಸಮಾಗಬೇಕು ಎಂದು ಅವರು ಹೇಳಿದರು.

ಡಿಎಚ್ಒ ಡಾ.ಪಿ.ಸಿ. ಕುಮಾರಸ್ವಾಮಿ ಮಾತನಾಡಿ, ಅಲ್ಪಕಾಲಿಕ ಸಂತೋಷಕ್ಕಾಗಿ ಬಳಸುವ ಮಾದಕ ವ್ಯಸನ ವಸ್ತುಗಳು ಆರೋಗ್ಯಕ್ಕೆ ಹಾನಿಕಾರಕ. ಅವು ನಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ದುರ್ಬಲರನ್ನಾಗಿ ಮಾಡುತ್ತವೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಕೆ. ಶಿವಕುಮಾರ್ ಮಾತನಾಡಿ, ಪ್ರಸ್ತುತ ಕರ್ನಾಟಕದಲ್ಲಿ ಅಂದಾಜು 150 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಇದರಿಂದ ನಮ್ಮ ರಾಜ್ಯದ ಜನರು ಡ್ರಗ್ಸ್ ಉತ್ಪನ್ನಗಳಿಗೆ ದಾಸರಾಗಿರುವ ಅಂಕಿ-ಅoಶ ತಿಳಿಯಬಹುದು. ಪ್ರಸ್ತುತ ಧೂಮಪಾನ, ತಂಬಾಕು ಸೇವನೆ ಹಾಗೂ ಇತರ ದುಶ್ಚಟಗಳು ಕಾಲೇಜು ಸುತ್ತಮುತ್ತಲಿನ ಪರಿಸರದಲ್ಲಿ ಹೆಚ್ಚಾಗಿರುವುದೇ ಶೋಚನೀಯ ಸಂಗತಿ. ಇದು ಮುಂದಿನ ಉತ್ತಮ ಸಮಾಜದ ಕನಸಿಗೆ ಹಾನಿಕಾರಕ ಎಂದು ಆತಂಕ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಸಿಗರೇಟ್ ಅಭ್ಯಾಸ ಸಾಮಾನ್ಯವಾಗಿದ್ದು, ವಿದ್ಯಾರ್ಥಿಗಳು ಈಗಲೇ ಇಂತಹ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾದರೆ ಮುಂದಿನ ದಿನಗಳಲ್ಲಿ ಅವರ ಜೀವನ ತುಂಬಾ ಕಷ್ಟವಾಗುತ್ತದೆ. ಇದರಿಂದ ಹೊರ ಬಂದು ವಿದ್ಯಾರ್ಥಿಗಳು ಆದಷ್ಟು ಎನ್.ಎಸ್.ಎಸ್, ಎನ್.ಸಿ.ಸಿ ಅಂತಹ ಉತ್ತಮ ಚಟವಟಿಕೆ ಮೈಗೂಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಪ್ರಸ್ತಾವಿಕ ನುಡಿಗಳನ್ನಾಡಿದ ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿಮಹದೇವಸ್ವಾಮಿ ಅವರು, ಡಾ. ಮಹಾಂತ ಶಿವಯೋಗಿ ಅವರು ಶಿಕ್ಷಣ, ಅರೋಗ್ಯ, ವಿಧವೆಯರ ವಿದ್ಯಾಭ್ಯಾಸ ಹಾಗೂ ದೇವದಾಸಿ ಪದ್ಧತಿ ಹೋಗಲಾಡಿಸಲು ಹೋರಾಡಿದ ಶ್ರೇಷ್ಠ ವ್ಯಕ್ತಿ. ದುಶ್ಚಟಕ್ಕೆ ಒಳಗಾಗಿದ್ದವರ ಮನೆ ಬಾಗಿಲಿಗೆ ಹೋಗಿ ತಮ್ಮ ಜೋಳಿಗೆಗೆ ಅವರ ದುಶ್ಚಟಗಳನ್ನು ಭಿಕ್ಷೆಯಾಗಿ ಕೇಳಿದ ಮಹಾನ್ ಶಿವಯೋಗಿ ಇವರು ಎಂದರು.

ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಡಿ. ಅಶೋಕ್ ಕುಮಾರ್ ಮಾತನಾಡಿ, ವ್ಯಸನ ಮುಕ್ತಕ್ಕೆ ಸಂಬoಧಿಸಿದoತೆ ಪ್ರತಿಜ್ಞಾವಿಧಿ ಬೋಧಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್ ಸ್ವಾಗತಿಸಿದರು.

ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಬೃಂದಾ, ವಿದ್ಯಾವಿಕಾಸ ಎಂಜಿನಿಯರಿoಗ್ ಕಾಲೇಜಿನ ಪ್ರಾಂಶುಪಾಲ ಬಿಂದು ಥಾಮಸ್ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.