ಅಖಿಲ ಭಾರತ ಅಂತರ್​ ವಿವಿ ಪುರುಷರ ಹೊನಲು ಬೆಳಕಿನ ಖೋ-ಖೋ ಪಂದ್ಯಾಟ ಉದ್ಘಾಟನೆ

| Published : Apr 10 2025, 01:19 AM IST

ಅಖಿಲ ಭಾರತ ಅಂತರ್​ ವಿವಿ ಪುರುಷರ ಹೊನಲು ಬೆಳಕಿನ ಖೋ-ಖೋ ಪಂದ್ಯಾಟ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಶ್ರೀ ವಿಬುಧೇಶತೀರ್ಥ ಒಳಾಂಗಣ ಕ್ರೀಡಾಂಗಣದಲ್ಲಿ ಅಖಿಲ ಭಾರತ ಅಂತರ್​ ವಿವಿ ಪುರುಷರ ಹೊನಲು ಬೆಳಕಿನ ಖೋ-ಖೋ ಪಂದ್ಯಾಟದ ಉದ್ಘಾಟನೆ ಬುಧವಾರ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

ಭಾರತದಲ್ಲಿ ಕ್ರೀಡಾಕ್ಷೇತ್ರ ನಿರೀಕ್ಷೆಗಿಂತ ಹಿಂದುಳಿದಿದ್ದು, ಇದಕ್ಕೆ ಶಾಲಾ ಮಟ್ಟದಲ್ಲೇ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದು ಅನಿವಾರ್ಯವಾಗಿದೆ. ಕೇಂದ್ರ ಸರ್ಕಾರ ಸ್ಥಳಿಯ ಹಂತದಲ್ಲೇ ಕ್ರೀಡೆ ಉತ್ತೇಜಿಸಲು ಅನೇಕ ಯೋಜನೆ ಜಾರಿಗೊಳಿಸಿದ್ದು, ಕ್ರೀಡಾ ಬಜೆಟ್​ 3 ಪಟ್ಟು ಹೆಚ್ಚಿಸಿದೆ. ಇದರ ಸದ್ಬಳಕೆಯಾಗಬೇಕಾಗಿದೆ ಎಂದು ಮಾಜಿ ಐಪಿಎಸ್​ ಅಧಿಕಾರಿ ಕೆ.ಅಣ್ಣಾಮಲೈ ಹೇಳಿದ್ದಾರೆ.

ಬುಧವಾರ, ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಪೂರ್ಣಪ್ರಜ್ಞ ಕಾಲೇಜಿನ ಶ್ರೀ ವಿಬುಧೇಶತೀರ್ಥ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಖಿಲ ಭಾರತ ಅಂತರ್​ ವಿವಿ ಪುರುಷರ ಹೊನಲು ಬೆಳಕಿನ ಖೋ-ಖೋ ಪಂದ್ಯಾಟ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಲೇಜು ವಿದ್ಯಾರ್ಥಿಗಳು ಜೀವನದಲ್ಲಿ ಸ್ಪೋರ್ಟ್ಸ್‌ ಕಲ್ಚರ್‌ ಅಳವಡಿಸಿಕೊಳ್ಳಬೇಕು. ಇದರಿಂದಾಗಿ ಡ್ರಗ್ಸ್​ ಮುಂತಾದ ದುಶ್ಚಟಗಳಿಂದ ದೂರವಿರಲು ಸಾಧ್ಯವಾಗುತ್ತದೆ ಎಂದವರು ಹೇಳಿದರು.

ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಅದಮಾರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀ ಈಶಪ್ರಿಯ ತೀರ್ಥರು ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುರೇಶ ಶೆಟ್ಟಿ, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಕಿಶೋರ್​ ಕುಮಾರ್​ ಸಿ.ಕೆ., ಕ್ರೀಡಾಕೂಟ ಸಂಚಾಲಕ ಡಾ.ಜೆರಾಲ್ಡ್​ ಸಂತೋಷ್​ ಡಿಸೋಜಾ, ಕರ್ಣಾಟಕ ಬ್ಯಾಂಕಿನ ಸಿಇಓ ಕೃಷ್ಣನ್​ ಎಚ್​.,ಅದಮಾರು ಮಠ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎ.ಪಿ.ಭಟ್​, ಖಜಾಂಜಿ ಸಿಎ ಪ್ರಶಾಂತ್​ ಹೊಳ್ಳ, ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್​ ಇದ್ದರು.

ಕಾಲೇಜಿನ ಕಾರ್ಯದರ್ಶಿ ಡಾ.ಜಿ.ಎಸ್​.ಚಂದ್ರಶೇಖರ್​​ ಸ್ವಾಗತಿಸಿದರು. ಪ್ರಾಂಶುಪಾಲ ಡಾ. ರಾಮು ಎಲ್.​ ವಂದಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ್ ಶೆಟ್ಟಿ ನಿರೂಪಿಸಿದರು.

...................2036ರಲ್ಲಿ 100 ಪದಕಗಳ ಗುರಿ: ಅಣ್ಣಾಮಲೈ ಭಾರತವು 200 ವರ್ಷಗಳಿಂದ ಕ್ರೀಡಾಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ. ಚೀನಾ 1980ರವರೆಗೆ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿಲ್ಲ. ಆದರೂ ಕಳೆದ ಒಲಂಪಿಕ್​ನಲ್ಲಿ ಚೀನಾ 727 ಪದಕಗಳನ್ನು ಗೆದ್ದರೆ, 140 ಕೋಟಿ ಜನಸಂಖ್ಯೆಯ ಭಾರತ ಕೇವಲ 41 ಪದಕಗಳನ್ನಷ್ಟೇ ಗಳಿಸಿದೆ ಎಂದ ಅಣ್ಣಾಮಲೈ, 2036ಕ್ಕೆ ಭಾರತದಲ್ಲಿ ಒಲಂಪಿಕ್ಸ್​ ನಡೆಯುವ ಸಾಧ್ಯತೆಗಳಿದ್ದು, ಕನಿಷ್ಠ 100 ಪದಕಗಳನ್ನು ಗೆಲ್ಲುವ ಗುರಿ ಹೊಂದಬೇಕು. 2008ರಲ್ಲಿ ಚೀನಾ ಒಲಂಪಿಕ್ಸ್​ ಆಯೋಜಿಸಿ 100 ಪದಕಗಳನ್ನು ಬಾಚಿಕೊಂಡಿತ್ತು ಎಂದರು.