ಮೂಡುಬಿದಿರೆ ಆಳ್ವಾಸ್ ಹೆಲ್ತ್ ಸೆಂಟರ್‌ನಲ್ಲಿ ಬುಧವಾರ ನೂತನವಾಗಿ ಪ್ರಾರಂಭಗೊಂಡ ಆಳ್ವಾಸ್ ಕಾರ್ಡಿಯಾಕ್ ಸೆಂಟರ್ ಲೋಕಾರ್ಪಣೆಗೊಂಡಿತು.
ಮೂಡುಬಿದಿರೆ: ಮೂಡುಬಿದಿರೆ ಜನಸಾಮಾನ್ಯರ ಆರೋಗ್ಯ ಕಾಳಜಿ ಮನಗಂಡು ಸೇವೆ ಸಲ್ಲಿಸುತ್ತಿರುವ ಆಳ್ವಾಸ್ ಆರೋಗ್ಯ ಕೇಂದ್ರವು ಮತ್ತೊಂದು ಮಹತ್ವದ ಹೆಜ್ಜೆಯಾಗಿ ಹೃದಯ ಚಿಕಿತ್ಸಾ ಕೇಂದ್ರ (ಕಾರ್ಡಿಯಾಕ್ ಸೆಂಟರ್) ಆರಂಭಿಸಿರುವುದು ಶ್ಲಾಘನೀಯ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ನಿಟ್ಟೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎನ್ ವಿನಯ್ ಹೆಗ್ಡೆ ಹೇಳಿದ್ದಾರೆ.
ಆಳ್ವಾಸ್ ಹೆಲ್ತ್ ಸೆಂಟರ್‌ನಲ್ಲಿ ಬುಧವಾರ ನೂತನವಾಗಿ ಪ್ರಾರಂಭಗೊಂಡ ಆಳ್ವಾಸ್ ಕಾರ್ಡಿಯಾಕ್ ಸೆಂಟರ್ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ಮೂಡುಬಿದಿರೆ, ಮೂಲ್ಕಿ, ಕಾರ್ಕಳ ಹಾಗೂ ಬೆಳ್ತಂಗಡಿ ಪ್ರದೇಶಗಳಲ್ಲಿಯೇ ಮೊದಲ ಬಾರಿಗೆ ಸ್ಥಾಪನೆಯಾದ ಆಳ್ವಾಸ್ ಕಾರ್ಡಿಯಾಕ್ ಸೆಂಟರ್ ಈ ಭಾಗದ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲಾಗಿದೆ ಎಂದರು.ವೈದ್ಯಕೀಯ ಶಿಕ್ಷಣದಂತ ಕ್ಷೇತ್ರದಲ್ಲಿ ಲಾಭದ ದೃಷ್ಟಿಕೋನಕ್ಕಿಂತ ಮಾನವೀಯತೆ, ಸೇವಾಭಾವ ಮತ್ತು ಸಾಮಾಜಿಕ ಹೊಣೆಗಾರಿಕೆ ಪ್ರಧಾನವಾಗಬೇಕು. ಇಂದಿನ ದಿನಗಳಲ್ಲಿ ಅನೇಕ ಖಾಸಗಿ ವೈದ್ಯಕೀಯ ಕಾಲೇಜುಗಳು ಶಿಕ್ಷಣ ಸೇವೆಯನ್ನು ನೀಡುತ್ತಿದ್ದರೂ, ಅವುಗಳ ಮೇಲೆ ಸರ್ಕಾರ ವಿಧಿಸಿರುವ ನೀತಿಗಳು ಹಲವು ಸವಾಲುಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ನುಡಿದರು.
ಎ.ಜೆ. ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ಗಳ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ ಮಾತನಾಡಿ, ಹೃದಯ ಚಿಕಿತ್ಸಾ ಕೇಂದ್ರವು ಆಳ್ವಾಸ್ ಆರೋಗ್ಯ ಕೇಂದ್ರದ ಸೇವೆಗೆ ಮತ್ತೊಂದು ಮಹತ್ವದ ಆಯಾಮ ನೀಡಿದೆ. ಮೂಡುಬಿದಿರೆಯಲ್ಲೇ ಅತ್ಯಾಧುನಿಕ ಹೃದಯ ಚಿಕಿತ್ಸಾ ಸೌಲಭ್ಯ ಲಭ್ಯವಾಗಿರುವುದು ಅನೇಕ ಜೀವಗಳನ್ನು ಉಳಿಸುವಲ್ಲಿ ಸಹಕಾರಿಯಾಗಲಿದೆ ಎಂದರು. ಕಣಚೂರು ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ಗಳ ಸ್ಥಾಪಕಾಧ್ಯಕ್ಷ ಡಾ ಹಾಜಿ ಯು.ಕೆ ಮೋನು ಮಾತನಾಡಿ, ಸಾಮಾನ್ಯವಾಗಿ ಮಹಾನಗರಗಳಿಗೆ ಮಾತ್ರ ಸೀಮಿತವಾಗಿರುವ ಅತ್ಯಾಧುನಿಕ ಹೃದಯ ಚಿಕಿತ್ಸಾ ಸೌಲಭ್ಯವನ್ನು ಒಂದು ಸಣ್ಣ ಪಟ್ಟಣ ಮೂಡುಬಿದಿರೆಗೆ ತಂದುಕೊಟ್ಟಿರುವುದು ಶ್ಲಾಘನೀಯ ಎಂದರು.ಅಧ್ಯಕ್ಷತೆ ವಹಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಮಾತನಾಡಿ, ನಾನು ಎಂದಿಗೂ ನನ್ನ ಊರನ್ನು ಬಿಟ್ಟು ಹೋಗಬೇಕೆಂದು ಭಾವಿಸಿಲ್ಲ. ನನ್ನಿಂದ ಸಾಧ್ಯವಾದ ಎಲ್ಲಾ ಕಾರ್ಯಗಳನ್ನು ನನ್ನದೇ ನೆಲದಲ್ಲಿ, ನನ್ನ ಜನರಿಗಾಗಿ ಮಾಡುವುದೇ ನನ್ನ ಗುರಿಯಾಗಿದೆ. ಇಂದು ನನಗೆ ಅತ್ಯಂತ ಭಾಗ್ಯಶಾಲಿ ದಿನ ಎಂದರು. ೧೯೮೦ರ ದಶಕದಲ್ಲೆ ಆಳ್ವಾಸ್ ಆರೋಗ್ಯ ಕೇಂದ್ರ ಆರಂಭಿಸಿ, ಎಲ್ಲಾ ವಿಶೇಷ ತಜ್ಞ ವೈದ್ಯರ ಸೇವೆ ಜನಸಾಮಾನ್ಯರಿಗೆ ಕನಿಷ್ಠ ಶುಲ್ಕದಲ್ಲಿ ನೀಡಿದ ನೆಮ್ಮದಿ ತನಗಿದೆ ಎಂದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ ವಿನಯ ಆಳ್ವ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ಆಳ್ವಾಸ್ ಮೆಡಿಕಲ್ ಕಾಲೇಜಿನ ಡೀನ್ ಡಾ. ಮಹಾಬಲ ಶೆಟ್ಟಿ, ತಜ್ಞ ವೈದ್ಯ ಡಾ ಹರೀಶ್ ನಾಯಕ, ಸ್ತ್ರೀ ತಜ್ಞೆ ಡಾ ಹನ ಶೆಟ್ಟಿ ಇದ್ದರು. ಆಳ್ವಾಸ್ ಕಾರ್ಡಿಯಾಕ್ ಸೆಂಟರ್‌ನ ಮುಖ್ಯಸ್ಥ ಡಾ ದಿತೇಶ್ ವಂದಿಸಿದರು. ಪ್ರೊ. ವೇಣುಗೋಪಾಲ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.