ಕಳವೆಯಲ್ಲಿ ಬಿಎಸ್‌ಎನ್‌ಎಲ್‌ ೪ಜಿ ಸ್ಯಾಚುರೇಶನ್ ಟವರ್ ಉದ್ಘಾಟನೆ

| Published : Aug 17 2024, 12:46 AM IST

ಕಳವೆಯಲ್ಲಿ ಬಿಎಸ್‌ಎನ್‌ಎಲ್‌ ೪ಜಿ ಸ್ಯಾಚುರೇಶನ್ ಟವರ್ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

೪ಜಿ ಸ್ಯಾಚುರೇಶನ್ ಪ್ರಾಜೆಕ್ಟ್ ಅಡಿಯಲ್ಲಿ ತಾಲೂಕಿನ ಕಳವೆಯ ಹಂದಿಜಡ್ಡಿಯಲ್ಲಿ ನಿರ್ಮಾಣಗೊಂಡ ಬಿಎಸ್‌ಎನ್‌ಎಲ್ ರಾಜ್ಯದ ಪ್ರಥಮ 4ಜಿ ಟಾವರ್‌ ಅನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ಲೋಕಾರ್ಪಣೆಗೊಳಿಸಿದರು.

ಶಿರಸಿ: ೪ಜಿ ಸ್ಯಾಚುರೇಶನ್ ಪ್ರಾಜೆಕ್ಟ್ ಅಡಿಯಲ್ಲಿ ತಾಲೂಕಿನ ಕಳವೆಯ ಹಂದಿಜಡ್ಡಿಯಲ್ಲಿ ನಿರ್ಮಾಣಗೊಂಡ ಬಿಎಸ್‌ಎನ್‌ಎಲ್ ರಾಜ್ಯದ ಪ್ರಥಮ 4ಜಿ ಟಾವರ್‌ ಅನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ಲೋಕಾರ್ಪಣೆಗೊಳಿಸಿದರು.

ವಿಡಿಯೋ ಕರೆ ಮಾಡುವ ಮೂಲಕ ತಂತ್ರಜ್ಞಾನದ ಕಾರ್ಯಕ್ಷಮತೆ ವೀಕ್ಷಿಸಿ ಮಾತನಾಡಿದ ಅವರು, ಮಲೆನಾಡು ಗುಡ್ಡಗಾಡು ಪ್ರದೇಶದಲ್ಲಿ ನೆಟ್‌ವರ್ಕ್ ಇಲ್ಲದ ಕುಗ್ರಾಮಗಳಲ್ಲಿ ನೆಟ್‌ವರ್ಕ್ ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಯುಎಸ್‌ಎಫ್‌ಒ ಯೋಜನೆಯಲ್ಲಿ ಟಾವರ್ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಜಿಲ್ಲೆಯಲ್ಲಿ ಒಟ್ಟು ೨೩೩ ೪ಜಿ ಟಾವರ್‌ಗಳ ಕಾರ್ಯಾರಂಭ ಮಾಡಲು ಯೋಚಿಸಲಾಗಿದ್ದು, ಸುಮಾರು ೧೧ ಹೊಸ ೪ಜಿ ಟಾವರ್‌ ಅಳವಡಿಸಲಾಗಿದೆ. ಶಿರಸಿ, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಜೋಯಿಡಾ, ಹಳಿಯಾಳ, ಯಲ್ಲಾಪುರ ಭಾಗದಲ್ಲಿ ೨೪೨ ಸ್ಥಳಗಳನ್ನು ಗುರುತಿಸಲಾಗಿದೆ. ೨೪೨ ಸ್ಥಳಗಳಲ್ಲಿ ಅರಣ್ಯ ಜಾಗದಲ್ಲಿ ೧೬೧ ಹಾಗೂ ಇತರೆ ೮೧ ಜಾಗವನ್ನು ಗುರುತಿಸಲಾಗಿದೆ. ೭೮ ಸ್ಥಳಗಳಲ್ಲಿ ಭೂಮಿ ಮಂಜೂರಿ ಮಾಡಿ ಕಾಮಗಾರಿ ಆರಂಭಿಸಲಾಗಿದೆ. ಪ್ರಸ್ತುತ ೫೯ ಟಾವರ್‌ಗಳನ್ನು ನಿರ್ಮಿಸಲಾಗಿದೆ. ಅರಣ್ಯದ ೧೬೧ರಲ್ಲಿ ೭೮ ಜಮೀನುಗಳನ್ನು ಮಂಜೂರು ಮಾಡಲಾಗಿದ್ದು, ಕೆಲವು ದಿನಗಳಲ್ಲಿ ಟಾವರ್ ನಿರ್ಮಾಣದ ಕೆಲಸ ಆರಂಭಿಸಲಾಗುತ್ತದೆ ಎಂದು ಹೇಳಿದರು.

ಕಳವೆಯ ಟಾವರ್‌ಗೆ ನೂತನ ತಂತ್ರಜ್ಞಾನ ಅಳವಡಿಸಿದ್ದು, ೪೦ ಮೀಟರ್ ಎತ್ತರವಿದೆ. ೧ರಿಂದ ೨ ಕಿಮೀ ವ್ಯಾಪ್ತಿಯಲ್ಲಿ ನೆಟ್‌ವರ್ಕ್ ಬರಲಿದೆ ಎಂದ ಅವರು, ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯದಿಂದ ಬಿಎಸ್‌ಎನ್‌ಎಲ್ ಟಾವರ್‌ಗಳು ಸ್ಥಗಿತಗೊಳ್ಳುತ್ತಿದೆ ಎಂಬ ದೂರು ಬಂದ ಹಿನ್ನೆಲೆ ದೂರ ಸಂಪರ್ಕ ಇಲಾಖೆಯ ಕೇಂದ್ರ ಸಚಿವ ಜೋತಿರಾದಿತ್ಯಾ ಸಿಂಧ್ಯ ಅವರನ್ನು ಭೇಟಿಯಾಗಿ ಹೊಸ ಬ್ಯಾಟರಿ ಮತ್ತು ಜನರೇಟರ್ ನೀಡಲು ವಿನಂತಿಸಿದ್ದೇನೆ. ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಮಂಜೂರಾತಿ ನೀಡಿದ್ದಾರೆ. ಸದ್ಯದಲ್ಲಿಯೇ ಅಳವಡಿಸುವುದಾಗಿ ಬಿಎಸ್‌ಎನ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

ಅರಣ್ಯ ಜಾಗದಲ್ಲಿ ಟಾವರ್ ನಿರ್ಮಾಣಕ್ಕೆ ಸಮಸ್ಯೆಯಾಗುತ್ತಿದೆ. ಅದನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ. ಕೆಲವು ಪ್ರದೇಶದಲ್ಲಿ ಜಾಗದ ಸಮಸ್ಯೆ ನಿವಾರಣೆಯಾಗಿದೆ. ಕುಮಟಾ ತಾಲೂಕಿನ ಸಂತೆಗುಳಿಯ ಬಿಎಸ್‌ಎನ್‌ಎಲ್ ಟಾವರ್ ರಾಜ್ಯದಲ್ಲಿಯೇ ಅತಿ ಹೆಚ್ಚು ಡಾಟಾ ಬಳಕೆ ಮಾಡುವ ಟಾವರ್ ಎಂಬ ಖ್ಯಾತಿ ಪಡೆದಿದೆ. ಗ್ರಾಮೀಣ ಭಾಗಗಳಲ್ಲಿ ನೆಟ್‌ವರ್ಕ್ ಉತ್ತಮಗೊಳಿಸಲು ಹಂತ ಹಂತವಾಗಿ ಟಾವರ್ ನಿರ್ಮಾಣ ಮಾಡಲಾಗುತ್ತದೆ ಎಂದರು.

ಬಿಎಸ್‌ಎನ್‌ಎಲ್ ಅಧಿಕಾರಿಗಳಾದ ನವೀನಕುಮಾರ ಗುಪ್ತಾ, ಬಿಂದು ಸಂತೋಷ, ಅವಿನಾಶ ಪೂಜಾರ, ವಿಕ್ರಮ್, ನಾಗರಾಜ ನಾಯ್ಕ, ಸಂತೋಷ ಚವ್ಹಾಣ, ಸ್ಥಳೀಯರಾದ ಶಿವಾನಂದ ಕಳವೆ, ಆರ್.ಡಿ. ಹೆಗಡೆ ಜಾನ್ಮನೆ ಸೇರಿದಂತೆ ಮತ್ತಿತರರು ಇದ್ದರು.ಉನ್ನತ್ತೀಕರಣ

ಜಿಲ್ಲೆಯಲ್ಲಿ ಹೊಸ ತಂತ್ರಜ್ಞಾನದ ಮೈಕ್ರೋ ತರಂಗಾಂತರಗಳ ಟಾವರ್‌ಗಳನ್ನು ಸ್ಥಾಪಿಸುವ ಜತೆಗೆ ಈಗಿರುವ ೨೫೬ ಬಿಎಸ್‌ಎನ್‌ಎಲ್ ಟಾವರ್‌ಗಳನ್ನು ೪ಜಿ ಆಗಿ ಉನ್ನತೀಕರಿಸಲಾಗುತ್ತದೆ.

ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ