ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಕಷ್ಟದಲ್ಲಿದ್ದವರ ಕೈ ಹಿಡಿದು ಮೇಲಕ್ಕೆತ್ತಿದರೆ ಅದು ಅಣ್ಣ ಬಸವಣ್ಣನವರು ಹೇಳುವಂತೆ ಪೂಜೆ ಹಾಗೂ ಧ್ಯಾನಕ್ಕೆ ಸಮಾನವಾಗಿದೆ ಎಂದು ಅನುಭವ ಮಂಟಪದ ಅಧ್ಯಕ್ಷರು ಹಾಗೂ ನಾಡೋಜ ಪ್ರಶಸ್ತಿ ಪುರಸ್ಕೃತರಾದ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.ನಗರದ ಗುಂಪಾ ರಸ್ತೆಯಲ್ಲಿ ಡಾ.ಚನ್ನಬಸವ ಪಟ್ಟದ್ದೇವರ ಸೌಹಾರ್ದ ಪತ್ತಿನ ಸಹಕಾರ ಸಂಘದ ನೂತನ ಶಾಖೆ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿ, ಮನುಷ್ಯನು ಎಲ್ಲ ಪ್ರಾಣಿಗಳಿಗಿಂತ ಶ್ರೇಷ್ಠ ಪ್ರಾಣಿಯಾದರೂ ಸಹಕಾರದಿಂದ ವಿಮುಖರಾಗಿರುವುದೆ ಹೆಚ್ಚು. ಆದರೆ ಅನ್ಯ ಪ್ರಾಣಿಗಳು ಹಂಚಿಕೊಂಡು ತಿನ್ನುವ ಪರಿಕಲ್ಪನೆಯಲ್ಲಿರುತ್ತವೆ. ಸಹಕಾರ ಕ್ಷೇತ್ರ ಪವಿತ್ರವಾಗಿರಲು ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ನಿಸ್ವಾರ್ಥದಿಂದ ದುಡಿಯಬೇಕು. ಆ ಕಾರ್ಯ ಕಳೆದ 18 ವರ್ಷಗಳಿಂದ ನಮ್ಮ ಬ್ಯಾಂಕ್ ಮೂಲಕ ನಡೆಯುತ್ತಿರುವುದು ನಮಗೆ ಹೆಮ್ಮೆ ಇದೆ ಎಂದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, ಒಂದು ಕಾಲದಲ್ಲಿ ನಮ್ಮ ಶ್ರೀಗಳು ಸಹಕಾರ ಬ್ಯಾಂಕ್‌ನಿಂದ ಬರೀ ವಿಶ್ವಾಸದ ಮೇಲೆ 25 ಸಾವಿರ ಸಾಲ ತಂದು ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಶಿಕ್ಷಣದ ಜೊತೆಗೆ ಸಣ್ಣ ಸಣ್ಣ ವ್ಯಾಪಾರಿಗಳಿಗೆ ಬರೀ ವಿಶ್ವಾಸದ ಮೇಲೆ ಹಣ ನೀಡಿ ದುರ್ಬಲರನ್ನು ಸಶಕ್ತರನ್ನಾಗಿ ಮಾಡುವುದೇ ನಮ್ಮ ಬ್ಯಾಂಕಿನ ಗುರಿಯಾಗಿದೆ ಎಂದರು.ಗಾಂಧಿ ಗಂಜ್ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ ಉದ್ಘಾಟಿಸಿ ಮಾತನಾಡಿ, ಬ್ಯಾಂಕ್ ಅಂದಾಕ್ಷಣ ಅದು ಹಣ ಗಳಿಕೆಯ ಕೇಂದ್ರವಾಗಬಾರದು. ಪರಸ್ಪರ ಹೊಂದಾಣಿಕೆಯಿಂದ ಬಲಿಷ್ಠ ಸಹಕಾರ ಸಂಘ ನಿರ್ಮಾಣ ಸಾಧ್ಯ ಎಂದವರು ಹೇಳಿದರು.
ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬುವಾಲಿ ಮಾತನಾಡಿ, ಸಹಕಾರ ಕ್ಷೇತ್ರ ರುಂಡ, ಮುಂಡವಿಲ್ಲದ, ಬರೀ ಎರಡು ಕೈಗಳಿಂದ ನಡೆಯುವ ಕ್ಷೇತ್ರವೇ ಸಹಕಾರ. ಇಲ್ಲಿ ಪ್ರೀತಿ ಹಾಗೂ ವಿಶ್ವಾಸಗಳ ಸಮ್ಮೀಲನವಿದ್ದರೆ ಹಣ ತನ್ನಿಂದ ತಾನೇ ಹರಿದು ಬರುತ್ತದೆ ಎಂದರು.ಬ್ಯಾಂಕಿನ ಅಧ್ಯಕ್ಷ ಡಿ.ಕೆ ಸಿದ್ರಾಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 18 ವರ್ಷಗಳಲ್ಲಿ ಬ್ಯಾಂಕ್ 498 ಕೋಟಿ ವಹಿವಾಟು ಮಾಡಿದೆ. ಭಾಲ್ಕಿಯಲ್ಲಿ 13, ಔರಾದ್‌ನಲ್ಲಿ 2 ಕೋಟಿ ಉಳಿತಾಯ ಠೇವಣಿ ಇರಿಸಲಾಗಿದೆ. 21 ಕೋಟಿ ಸಾಲ ನೀಡಲಾಗಿದ್ದು, ಶೇ.95ರಷ್ಟು ವಸುಲಿ ಮಾಡಿದ ಜಿಲ್ಲೆಯ ಚೊಚ್ಚಲ ಬ್ಯಾಂಕ್ ಎಂಬ ಹೆಸರು ಗಳಿಸಿದೆ ಎಂದರು.
ಈ ಸಂದರ್ಭದಲ್ಲಿ ಬಸವಣಪ್ಪ ನೇಳಗಿ 2 ಲಕ್ಷ, ಡಿ.ಕೆ ಸಿದ್ರಾಮ 11 ಲಕ್ಷ ಹಾಗೂ ಬ್ಯಾಂಕ್‌ನ ಸ್ಥಳಿಯ ಅಧ್ಯಕ್ಷ ಜಯರಾಜ ಖಂಡ್ರೆ 10 ಮುದ್ದತ್ ಠೇವಣಿ ಇರಿಸುವುದಾಗಿ ಘೋಷಿಸಿದರು.ಕಾರ್ಯಕ್ರಮದಲ್ಲಿ ಕಾಶಿನಾಥ ಬೆಲ್ದಾಳೆ, ರಾಜಶೇಖರ ಅಷ್ಟುರೆ, ಚಂದ್ರಶೇಖರ ಹೆಬ್ಬಾಳೆ, ಚಂದ್ರಶೇಖರ ಪಾಟೀಲ, ಶ್ರೀನಿವಾಸ ಸಾಳೆ, ರವಿಂದ್ರ ಮೀಸೆ, ಮನ್ಮಥಪ್ಪ ಬಿರಾದಾರ, ನಾಗನಾಥ ಮೇತ್ರೆ, ಆಶಾ ಮಹೇಶ ಘಾಳೆ, ಜಗದೇವಿ, ಶರಣಪ್ಪ ಬಿರಾದಾರ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣಪತಿ ಬಾವಗೆ ಸೇರಿದಂತೆ ಹಲವರು ಇದ್ದರು. ಸ್ಥಳಿಯ ಅಧ್ಯಕ್ಷ ಜಯರಾಜ ಖಂಡ್ರೆ ಸ್ವಾಗತಿಸಿದರು. ನವಲಿಂಗ ಪಾಟೀಲ ನಿರೂಪಿಸಿದರೆ ಉಮಾಕಾಂತ ಮೀಸೆ ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))