ನಮ್ಮ ವ್ಯಕ್ತಿತ್ವಕ್ಕೆ ಗೌರವ ಸಿಗುವುದು ನಾವು ಧರಿಸಿದ ಬಟ್ಟೆಯಿಂದಲ್ಲ, ಬದಲಾಗಿ ಸಂಸ್ಕಾರಯುತ ನಡೆ ನುಡಿಯಿಂದ. ಆದ್ದರಿಂದ ಮೌಲ್ಯಯುತವಾದ ನಡೆ ನುಡಿಗಳನ್ನು ಅಳವಡಿಸಿಕೊಂಡು ಉತ್ತಮ ಸಂಸ್ಕಾರಯುತ ಜೀವನ ನಡೆಸಬೇಕು ಎಂದು ದೆಹಲಿಯ ಜೆಎನ್‌ಯುವಿನ ಪ್ರಾಧ್ಯಾಪಕ ಡಾ.ನರಸಿಂಹ ಮೂರ್ತಿ ಹೇಳಿದರು.
ಪುತ್ತೂರು: ನಮ್ಮ ವ್ಯಕ್ತಿತ್ವಕ್ಕೆ ಗೌರವ ಸಿಗುವುದು ನಾವು ಧರಿಸಿದ ಬಟ್ಟೆಯಿಂದಲ್ಲ, ಬದಲಾಗಿ ಸಂಸ್ಕಾರಯುತ ನಡೆ ನುಡಿಯಿಂದ. ಆದ್ದರಿಂದ ಮೌಲ್ಯಯುತವಾದ ನಡೆ ನುಡಿಗಳನ್ನು ಅಳವಡಿಸಿಕೊಂಡು ಉತ್ತಮ ಸಂಸ್ಕಾರಯುತ ಜೀವನ ನಡೆಸಬೇಕು ಎಂದು ದೆಹಲಿಯ ಜೆಎನ್‌ಯುವಿನ ಪ್ರಾಧ್ಯಾಪಕ ಡಾ.ನರಸಿಂಹ ಮೂರ್ತಿ ಹೇಳಿದರು.ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ನಡೆದ ಪ್ರಥಮ ಪಿಯುಸಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಭಾನುವಾರ ಮಾತನಾಡಿದರು.
ಹೃದಯವನ್ನು ಅರಳಿಸುವ ಶಿಕ್ಷಣ: ವಿದ್ಯಾರ್ಥಿಗಳನ್ನು ಮೂರ್ಖರನ್ನಾಗಿಸುವ ವ್ಯವಸ್ಥೆಗಳು ಸುತ್ತಮುತ್ತ ರಾರಾಜಿಸುತ್ತಿರುತ್ತವೆ. ವಿವಿಧ ರೀತಿಯ ಆಕರ್ಷಣೀಯವಾದ ಪೋಸ್ಟರ್ ಮತ್ತು ಜಾಹೀರಾತುಗಳಿಗೆ ಮಾರುಹೋಗದೆ ನಮ್ಮ ವಿಮರ್ಶ ಶಕ್ತಿಯನ್ನು ಬಳಸಿಕೊಂಡು ನಮಗೆ ಸರಿಹೊಂದುವ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಕೇವಲ ದೊಡ್ಡ ಹುದ್ದೆಗಳನ್ನು ಅಲಂಕರಿಸುವುದು ಮಾತ್ರವಲ್ಲದೆ ತಾವು ಆತ್ಮ ತೃಪ್ತಿಯಿಂದ ಬದುಕುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಮೆದುಳನ್ನು ಚುರುಕುಗೊಳಿಸುವುದು ಮಾತ್ರ ವಿದ್ಯಾರ್ಜನೆಯ ಉದ್ದೇಶವಲ್ಲ, ವ್ಯಕ್ತಿಯ ಹೃದಯವಂತಿಕೆಯನ್ನು ಅರಳಿಸುವುದೇ ಶಿಕ್ಷಣದ ಉದ್ದೇಶ ಎಂದರು.ನಾವು ಸೇವಿಸುವ ಆಹಾರ ನಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುವುದರಿಂದ ವಿದ್ಯಾರ್ಥಿಗಳು ಸಾತ್ವಿಕ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವಂತೆ ಹೆತ್ತವರು ಮುತುವರ್ಜಿ ವಹಿಸಬೇಕು. ಆಕರ್ಷಣೆ ಮತ್ತು ಗೊಂದಲಗಳು ಯಶಸ್ಸಿಗೆ ಮುಳುವಾಗುತ್ತವೆ ಮತ್ತು ಬೆವರಿನ ಪರಿಶ್ರಮವೊಂದೇ ಯಶಸ್ಸಿಗೆ ಸೂತ್ರ ಎಂದು ತಿಳಿಸಿದರು.ವಿರಾಜಪೇಟೆಯ ಪ್ರಗತಿ ವಿದ್ಯಾಕೇಂದ್ರದ ಆಡಳಿತಾಧಿಕಾರಿ, ೪೨ ಬಾರಿ ದೇಶವನ್ನು ಕ್ರೀಡಾ ವಿಭಾಗದಲ್ಲಿ ಪ್ರತಿನಿಧಿಸಿದ ಹೆಗ್ಗಳಿಕೆ ಹೊಂದಿರುವ ತಿಮ್ಮಯ್ಯ ಮಾದಂಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯಶಸ್ಸಿಗೆ ಕಠಿಣ ಪರಿಶ್ರಮವೊಂದೇ ಪರಿಹಾರ. ದಿನದ ೨೪ ಗಂಟೆಯನ್ನು ಬಹಳ ಜಾಣ್ಮೆಯಿಂದ ಸದುಪಯೋಗಪಡಿಸಿಕೊಂಡು ಯಶಸ್ಸಿನ ಮೆಟ್ಟಿಲನ್ನು ಏರಬೇಕು. ವಿದ್ಯಾರ್ಥಿಗಳು ತಮ್ಮ ಬಳಿ ಇರುವಂತಹ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಸುಲಭವಾಗಿ ಗುರಿ ತಲುಪಬಹುದು ಹಾಗೂ ಗುರಿ ತಲುಪಲು ಸರಿಯಾದ ಯೋಜನೆಯು ತುಂಬಾ ಅಗತ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ದೇಶದ ಗೌರವವನ್ನು ಎತ್ತಿ ಹಿಡಿಯುವಂತಹ ವಿದ್ಯಾರ್ಥಿಗಳು ಪ್ರತಿ ವಿದ್ಯಾಸಂಸ್ಥೆಗಳಿಂದ ಹೊರಹೊಮ್ಮಬೇಕು. ಅದಕ್ಕಾಗಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಅಂಬಿಕಾ ವಿದ್ಯಾಲಯದಲ್ಲಿ ಪಠ್ಯಪುಸ್ತಕಗಳ ಬೋಧನೆಯ ಜೊತೆ ಜೊತೆಗೆ ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗುವಂತಹ ಸೂರ್ಯ ನಮಸ್ಕಾರ, ಯೋಗ, ಧ್ಯಾನ, ಪ್ರಾಣಾಯಾಮಗಳಂತಹ ಮೌಲ್ಯಯುತ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.ಸಂಸ್ಥೆಯ ಕಾರ್ಯದರ್ಶಿ ರಾಜಶ್ರೀ ನಟ್ಟೋಜ ಮಾತನಾಡಿ ಮಕ್ಕಳು ತಮ್ಮ ವಿದ್ಯಾರ್ಜನೆಯ ಕಡೆಗೆ ಹೆಚ್ಚಿನ ಗಮನ ನೀಡಿ ತಮ್ಮ ಯಶಸ್ಸನ್ನು ಕಂಡುಕೊಳ್ಳಬೇಕು ಎಂದು ತಿಳಿಸಿ ಸಂಸ್ಥೆಯ ನಿಯಮಗಳ ಬಗ್ಗೆ ಮಕ್ಕಳಿಗೆ ವಿವರವಾದ ಮಾಹಿತಿಯನ್ನು ನೀಡಿ ಶುಭ ಹಾರೈಸಿದರು.ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ, ವಿಶ್ರಾಂತ ಪ್ರಾಚಾರ್ಯ ಡಾ. ಎಚ್. ಮಾಧವ ಭಟ್ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ.ಎಸ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.