ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕರ ನಿಧಿ 10 ಲಕ್ಷ ಅನುದಾನದಲ್ಲಿ ನಿರ್ಮಾಣವಾಗಿರುವ ಕಾಂಕ್ರೀಟ್ ರಸ್ತೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಉದ್ಘಾಟಿಸಿದರು. ಸುರಿಯುವ ಮಳೆಯ ನಡುವೆಯೇ ರಸ್ತೆ ಉದ್ಘಾಟಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ಪರಿಶಿಷ್ಟ ಜಾತಿ, ಪಂಗಡ, ಬುಡಕಟ್ಟು ಜನರು ವಾಸವಾಗಿರುವ ಈ ಪ್ರದೇಶದಲ್ಲಿ ಬಹಳಷ್ಟು ವರ್ಷಗಳಿಂದ ರಸ್ತೆ ನಿರ್ಮಾಣದ ಬೇಡಿಕೆ ಈಡೇರಿರಲಿಲ್ಲ. ಇದನ್ನು ಪರಿಗಣಿಸಿ ಸ್ಥಳೀಯ ಜನರಿಗೆ ಅನುಕೂಲವಾಗುವಂತೆ ಗುಣಮಟ್ಟದ ರಸ್ತೆ ನಿರ್ಮಿಸಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಪಿ. ಸಿ. ಸುಬ್ಬ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹಾಗೂ ಬಿಪಿಎಲ್ ಕುಟುಂಬಗಳಿಗೆ ಸರ್ಕಾರದಿಂದ ಮನೆ ನಿರ್ಮಾಣಕ್ಕೆ ಈಗಿರುವ 1.20 ಲಕ್ಷ ರು. ಅನುದಾನದಲ್ಲಿ ಮನೆ ಸಾಮಗ್ರಿಗಳು, ಕಾಮಗಾರಿ ವೆಚ್ಚಗಳು ಏರಿಕೆಯಾಗಿರುವುದರಿಂದ ಮನೆ ನಿರ್ಮಾಣ ಸಾಧ್ಯವಿಲ್ಲ. ಆದ್ದರಿಂದ ಈ ಅನುದಾನವನ್ನು ಹೆಚ್ಚಿಸಬೇಕೆಂದು ಶಾಸಕರಿಗೆ ಬೇಡಿಕೆ ಸಲ್ಲಿಸಿದರು. ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ಹೆಚ್ಚಿನ ಅನುದಾನ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಭರವಸೆ ನೀಡಿದರು. ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮುಕ್ಕಾಟೀರ ಶಿವು ಮಾದಪ್ಪ ಮಾತನಾಡಿ ಕುಟ್ಟದಿಂದ 2 ಕಿ.ಮೀ. ಅಂತರದಲ್ಲಿರುವ ಕೇರಳ ರಾಜ್ಯದಲ್ಲಿ ಮನೆ ನಿರ್ಮಾಣಕ್ಕೆ 3.40 ಲಕ್ಷ ಹಾಗೂ ಇನ್ನೊಂದು ಯೋಜನೆಯಲ್ಲಿ 6 ಲಕ್ಷ ರು. ಅನುದಾನವನ್ನು ಮನೆ ನಿರ್ಮಾಣಕ್ಕಾಗಿ ಸರ್ಕಾರ ನೀಡುತ್ತಿದೆ. ಆದರೆ ನಮ್ಮ ರಾಜ್ಯ ಕೇವಲ 1.20 ಲಕ್ಷ ನೀಡುತ್ತಿದೆ. ಈ ಮೊತ್ತವನ್ನು ಹೆಚ್ಚಿಸಬೇಕಾಗಿದೆ ಎಂದು ಮನವಿ ಮಾಡಿದರು. ವಲಯ ಕಾಂಗ್ರೆಸ್ ಅಧ್ಯಕ್ಷ ಎಚ್.ವೈ. ರಾಮಕೃಷ್ಣ ಮಾತನಾಡಿ, 10 ವರ್ಷಗಳ ಹಿಂದೆ ಕುಟ್ಟ ಸಿಂಕೋನ ಕಾಲೋನಿ ಸಮೀಪ ಸಮುದಾಯ ಭವನ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿದ್ದು ಇದನ್ನು ಅನುದಾನ ನೀಡಿ ಪೂರ್ಣಗೊಳಿಸಿದರೆ ಸ್ಥಳೀಯರಿಗೆ ಸಣ್ಣಪುಟ್ಟ ಕಾರ್ಯಕ್ರಮ ನಡೆಸಲು ಸಭಾಂಗಣ ದೊರೆಯುತ್ತದೆ. ಈ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಶಾಸಕರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಮುಕ್ಕಾಟೀರ ನವೀನ್ ಅಯ್ಯಪ್ಪ, ತಾ.ಪಂ. ಮಾಜಿ ಸದಸ್ಯ ಪಲ್ವಿನ್ ಪೂಣಚ್ಚ, ಮುಕ್ಕಾಟೀರ ಸಂದೀಪ್, ಕುಪ್ಪಣಮಾಡ ಪ್ರೀತಮ್, ಗ್ರಾ.ಪಂ. ಸದಸ್ಯರಾದ ಪಿ.ಸಿ. ಸುಬ್ಬ, ರುಮ್ಲಾ, ಬಿ.ಕೆ. ಪ್ರೇಮಾ,, ವಿ.ಕೆ. ಗೋಪಾಲಕೃಷ್ಣ, ಸುರೇಶ್ ಮತ್ತಿತರರು ಹಾಜರಿದ್ದರು.