ಕನ್ನಡಪ್ರಭ ವಾರ್ತೆ ಪಾಂಡವಪುರ
ಲೋಕೋಪಯೋಗಿ ಇಲಾಖೆಯಿಂದ ಪಟ್ಟಣದ ಬಸ್ ನಿಲ್ದಾಣದಿಂದ ಹಾರೋಹಳ್ಳಿ ಕೆಎಚ್‌ಬಿ ಕಾಲೋನಿವರೆಗೆ ಅಳವಡಿಸಲಾಗಿರುವ ಅಲಂಕಾರಿಕ ವಿದ್ಯುತ್ ಬೀದಿ ದೀಪಗಳ ಸ್ಥಂಭಗಳನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಬಿಜಿಎಸ್ ಶಾಲೆ ಮುಂಭಾಗ ಲೋಕಾರ್ಪಣೆಗೊಳಿಸಿದರು.ಬಳಿಕ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಸುಮಾರು 1.52 ಕೋಟಿ ರು. ವೆಚ್ಚದಲ್ಲಿ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ರಸ್ತೆ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ನವೀನ ಮಾದರಿಯ ಒಟ್ಟು 106 ವಿದ್ಯುತ್ ದೀಪದ ಕಂಬಗಳನ್ನು ಅಳವಡಿಸಲಾಗಿದೆ ಎಂದರು.
ಈ ಭಾಗದಲ್ಲಿ ರಾತ್ರಿ ವೇಳೆ ಹೆಚ್ಚಿನ ಕತ್ತಲೆ ಆವರಿಸಿದ್ದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಬಹಳ ತೊಂದರೆ ಉಂಟಾಗುತ್ತಿತ್ತು. ಹಲವು ದಿನಗಳ ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿ ಇದೀಗ ಅಲಂಕಾರಿಕ ಬೀದಿ ದೀಪಗಳ ವ್ಯವಸ್ಥೆ ತುರ್ತಾಗಿ ಪೂರ್ಣಗೊಳಿಸಿ ಚಾಲನೆ ನೀಡಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಜಾಯ್ ಕುಮಾರ್, ಪುರಸಭೆ ನಾಮ ನಿರ್ದೇಶನ ಸದಸ್ಯರಾದ ಎಂ.ಮುರುಳೀಧರ್, ಪಟೇಲ್ ರಮೇಶ್, ಮಹಮದ್ ಹನೀಫ್, ಹಾರೋಹಳ್ಳಿ ಲಕ್ಷ್ಮೇಗೌಡ, ಮಾಜಿ ಅಧ್ಯಕ್ಷ ಡಿ.ಹುಚ್ಚೇಗೌಡ, ರೈತ ಸಂಘದ ತಾಲೂಕು ಅಧ್ಯಕ್ಷ ಎಣ್ಣೆಹೊಳೆಕೊಪ್ಪಲು ಮಂಜುನಾಥ್, ಪುರಸಭಾ ಮಾಜಿ ಸದಸ್ಯರಾದ ಬಂಕ್ ಶ್ರೀನಿವಾಸ್, ಕೆ.ಉಮಾಶಂಕರ್, ಮಹಿಳಾ ಹೋರಾಟಗಾರ್ತಿ ಅರಳಕುಪ್ಪೆ ರೂಪಾ, ರೈತಸಂಘದ ಮುಖಂಡರಾದ ಗರಡಿಮನೆ ಚಂದ್ರಶೇಖರ್, ರಾಮಕೃಷ್ಣ, ಅರಗಪ್ಪರ ರಮೇಶ್, ಚಿಕ್ಕಣ್ಣ, ಕೊನಾರಿ ಮಂಜು, ಬೇವಿನಕುಪ್ಪೆ ಅನಿಲ್, ಕಾಂಗ್ರೆಸ್ ಮುಖಂಡರಾದ ಬಿ.ಜೆ.ಸ್ವಾಮಿ, ಕಣಿವೆ ರಾಮು ಸೇರಿದಂತೆ ಅನೇಕ ರೈತ ಮುಖಂಡರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.