ಗದಗದಲ್ಲಿ ಧರ್ಮಸ್ಥಳ ಸಿರಿ ಮಿಲೆಟ್ ಹೌಸ್ ಉದ್ಘಾಟನೆ

| Published : Jun 29 2024, 12:40 AM IST

ಗದಗದಲ್ಲಿ ಧರ್ಮಸ್ಥಳ ಸಿರಿ ಮಿಲೆಟ್ ಹೌಸ್ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ನಗರದ ಹಾತಲಗೇರಿ ರಸ್ತೆಯಲ್ಲಿ ಧರ್ಮಸ್ಥಳ ಸಿರಿ ಮಿಲೆಟ್ ಹೌಸ್ ಆರಂಭಿಸಲಾಗಿದೆ. ಮಿಲೆಟ್‌ ಹೌಸ್‌ ಉದ್ಘಾಟಿಸಿದ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು, ಸಿರಿಧಾನ್ಯಗಳು ಭವಿಷ್ಯದ ಆಹಾರವಾದಲ್ಲಿ ಮಾತ್ರ ಸದೃಢ ದೇಶ ಕಟ್ಟಲು ಸಾಧ್ಯ ಎಂದರು.

ಗದಗ: ಸಿರಿಧಾನ್ಯಗಳು ಭವಿಷ್ಯದ ಆಹಾರವಾದಲ್ಲಿ ಮಾತ್ರ ಸದೃಢ ದೇಶ ಕಟ್ಟಲು ಸಾಧ್ಯ. ಈ ನೆಲೆಯಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ಯೋಜನೆಯ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಿ ಸಿರಿಧಾನ್ಯಗಳನ್ನು ಬೆಳೆಸಿ ಆಹಾರವಾಗಿ ನೀಡುವ ಕಾರ್ಯ ಶ್ಲಾಘನೀಯ ಎಂದು ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಅವರು ಗದಗ ನಗರದ ಹಾತಲಗೇರಿ ರಸ್ತೆಯಲ್ಲಿ ಧರ್ಮಸ್ಥಳ ಸಿರಿ ಮಿಲೆಟ್ ಹೌಸ್ ಉದ್ಘಾಟಿಸಿ ಮಾತನಾಡಿದರು. ಅದರಕ್ಕೆ ಸಿಹಿ ಆಗಿರುವುದು ಉದಾರಕ್ಕೆ ಕಹಿ, ಅದರಕ್ಕೆ ಕಹಿ ಆಗಿರುವುದು ಉದರಕ್ಕೆ ಸಿಹಿ. ನಾವು ಈಗ ಸೇವಿಸುವ ಆಹಾರ ಗುಣಮಟ್ಟದಿಂದ ಕೂಡಿಲ್ಲ. ಹಿಂದಿನ ಸಾಂಪ್ರದಾಯಕ ಆಹಾರ ಬಳಸುವ ಅವಶ್ಯಕತೆ ಇದೆ. ಅದರಲ್ಲಿ ಸಿರಿಧಾನ್ಯವೇ ಪ್ರಮುಖವಾದದ್ದು ಎಂದರು.

ಸಿರಿ ಮಿಲೆಟ್ ನಿರ್ದೇಶಕ ದಿನೇಶ್ ಎಂ. ಮಾತನಾಡಿ, ಡಾ. ಹೆಗ್ಗಡೆ ಹಾಗೂ ಮಾತೃಶ್ರೀ ಅಮ್ಮನವರ ಆಶಯ ಪೌಷ್ಟಿಕಾಂಶಭರಿತ ಸಿರಿಧಾನ್ಯಗಳನ್ನು ರೈತರಲ್ಲಿ ಬೆಳೆಸುವಲ್ಲಿ ಪ್ರೋತ್ಸಾಹ ನೀಡುವುದು, ರೈತರಿಗೆ ಯೋಗ್ಯ ಬೆಲೆ ಒದಗಿಸುವುದು, ಸಮಾಜಕ್ಕೆ ಪೌಷ್ಟಿಕಯುತ ಆಹಾರ ಒದಗಿಸುವ ಮೂಲಕ ಆರೋಗ್ಯ ಭದ್ರತೆ ಒದಗಿಸುವುದಾಗಿದೆ ಎಂದರು.

ರೋಟರಿ ಸೋಶಿಯಲ್ ಕಲ್ಚರ್ ಅಧ್ಯಕ್ಷ ವಿ.ಕೆ. ಗುರುಮಠ ಮಾತನಾಡಿ, ಸಿರಿಧಾನ್ಯ ಬಳಕೆಯಿಂದ ರೋಗದಿಂದ ಮುಕ್ತರಾಗಬಹುದು. ಈ ಕಾರ್ಯಕ್ರಮ ಮಾನವರಿಗೆ ಬೇಕಾಗಿದೆ. ಇದೊಂದು ಭವಿಷ್ಯದ ಆಹಾರ ಎಂದು ನಾವೆಲ್ಲರೂ ಪ್ರತಿದಿನ ಸಿರಿಧಾನ್ಯ ಬಳಕೆ ಮಾಡಬೇಕು ಎಂದು ಹೇಳಿದರು.

ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಜೆ. ಮಾತನಾಡಿ, ಸಿರಿಧಾನ್ಯ ಉತ್ಪನ್ನ ಬಳಕೆ ಮಾಡಿ, ಮಕ್ಕಳ ಭವಿಷ್ಯ ರೂಪಿಸಿ, ಪಂಚ ಸಿರಿಧಾನ್ಯ ಬಳಕೆ ಮಾಡಿ, ನಿಮ್ಮ ಮನೆ ಬಾಗಿಲಿಗೆ ಮುಟ್ಟಿಸುವ ಕಾರ್ಯಕ್ರಮ ಸಿರಿಮನೆಯಿಂದ ಆಗುತ್ತಿದೆ ಎಂದು ಹೇಳಿದರು.

ಜಿಲ್ಲಾ ನಿರ್ದೇಶಕ ಯೋಗೀಶ ಎ., ಯೋಜನಾಧಿಕಾರಿ ಸುರೇಂದ್ರ ನಾಯ್ಕ, ಮಾಲತೇಶ, ಸಿದ್ದರಾಮಪ್ಪ ಮಡಿವಾಳರ, ಸಿರಿ ಮಿಲೆಟ್ ಹೌಸ್ ಮಾಲೀಕರಾದ ಶರಣಪ್ಪ, ಮಂಜುಳಾ ಉಪಸ್ಥಿತರಿದ್ದರು. ಸಿರಿ ಮಿಲೆಟ್ ಮಾರುಕಟ್ಟೆ ಮೇಲ್ವಿಚಾರಕ ಶರಣಪ್ಪ, ವಲಯ ಮೇಲ್ವಿಚಾರಕಿ ಶಿಲ್ಪಾ ಮತ್ತು ಸೇವಾಪ್ರತಿನಿಧಿಯವರು ಉಪಸ್ಥಿತರಿದ್ದರು.