ಸಾರಾಂಶ
ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಕಟ್ಟಡ ಕಾರ್ಮಿಕರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಡಾ.ಬಿ.ಆರ್.ಅಂಬೇಡ್ಕರ್ ಕಟ್ಟಡ ಕಾರ್ಮಿಕರ ಭವನ ಹಾಗೂ ಅಂಬೇಡ್ಕರ್ ಸಮುದಾಯ ಭವನದ ಅಡುಗೆ ಮನೆ, ಭೋಜನಾಲಯ ಮಾಡಿಸಿಕೊಡುವುದಾಗಿ ಶಾಸಕ ಸಿ. ಪುಟ್ಟರಂಗಶೆಟ್ಟಿ ಭರವಸೆ ನೀಡಿದರು.ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಭವನ ಮುಂಭಾಗದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಕಟ್ಟಡ ಕಾರ್ಮಿಕರ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರದಲ್ಲಿ ಜಾಗ ಇರುವ ಕಡೆಯಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ನಿಮ್ಮ ಬೇಡಿಕೆಯಂತೆ ಗ್ರಾಮದ ಬಿ.ಆರ್. ಅಂಬೇಡ್ಕರ್ ಕಟ್ಟಡ ಕಾರ್ಮಿಕರ ಭವನ ಹಾಗೂ ಅಂಬೇಡ್ಕರ್ ಸಮುದಾಯ ಭವನದ ಅಡುಗೆಮನೆ, ಭೋಜನಾಲಯ ಮಾಡಿಸಿಕೊಡುವುದಾಗಿ ತಿಳಿಸಿದರು.ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದೇ ಸಂಘಟನೆಗಳು. ಸಂಘ- ಸಂಸ್ಥೆಗಳು ಬೇಕೇಬೇಕು. ಕಾರ್ಮಿಕ ಇಲಾಖೆಯವರು ಇಲಾಖೆಯಲ್ಲಿ ಬರುವ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಇಲಾಖಾಧಿಕಾರಿಗಳು ಮಾಡುವ ಮೂಲಕ ಪ್ರತಿ ಕಾರ್ಮಿಕರಿಗೆ ಸರ್ಕಾರ ಸೌಲಭ್ಯವನ್ನು ತಲುಪಿಸಬೇಕು. ಈ ಸಂಘ ಉತ್ತುಂಗಕ್ಕೆ ಬೆಳೆಯಲಿ ಎಂದು ಆಶಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಕಟ್ಟಡ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿಕೊಂಡು ಇಲಾಖೆಯಲ್ಲಿ ಬರುವ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದರು. ತಿ.ನರಸೀಪುರ ನಳಂದ ಬುದ್ಧ ವಿಹಾರದ ಭೋಧಿರತ್ನ ಬಂತೇಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ಸಂವಿಧಾನ ಬದ್ಧ ಅವಕಾಶಗಳಿವೆ. ಸರ್ಕಾರಗಳು ಕೂಡ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದ್ದಾರೆ. ಅದನ್ನು ಉಪಯೋಗಿಸಿಕೊಳ್ಳುವ ನಿಟ್ಟಿನಲ್ಲಿ ನೀವು ಜಾಗೃತರಾಗಬೇಕು. ಮದ್ಯಪಾನ, ಮೌಢ್ಯವನ್ನು ತ್ಯಜಿಸಬೇಕು ಎಂದರು. ಜಿಲ್ಲಾ ಅಂಬೇಡ್ಕರ್ ಸಂಘದ ಅಧ್ಯಕ್ಷ ಪಿ.ಸಂಘಸೇನ ಮುಖ್ಯ ಭಾಷಣ ಮಾಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ.ಎಂ. ಸವಿತ, ತಾಪಂ ಮಾಜಿ ಸದಸ್ಯ ಆರ್.ಮಹದೇವು, ಸಿ.ಶಂಕರ್‌ಅಂಕಶೆಟ್ಟಿಪುರ, ಕನಿಷ್ಠ ವೇತನ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಎಸ್‌ಪಿಕೆ, ಕಾಂಗ್ರೆಸ್ ಮುಖಂಡ ಡಿ.ಎನ್.ನಟರಾಜು, ಗುತ್ತಿಗೆದಾರ ಎಂ.ಎಸ್.ಮಹದೇವಯ್ಯ, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಮಧುಸೂದನ್ ಹೊಸಹಳ್ಳಿ, ಗ್ರಾಪಂ ಸದಸ್ಯರ ಮಹಾಒಕ್ಕೂಟದ ಜಿಲ್ಲಾಧ್ಯಕ್ಷ ಕೆಂಪರಾಜು ಹೆಗ್ಗವಾಡಿ, ಗ್ರಾಪಂ ಅಧ್ಯಕ್ಷೆ ಆರ್.ಅಂಬಿಕ, ನಾಗಮ್ಮ, ಬಸವರಾಜು ಅಂಚೆ ವಕೀಲರಾದ ಹೆಚ್.ಎಂ.ಮಹೇಶ್, ಇಲಾಖೆ ಹೆಚ್.ಎನ್.ಕವಿತ, ರೈತ ಮುಖಂಡ ಬಸವರಾಜು ಆಣಗಳ್ಳಿ, ಶಿಕ್ಷಕರಾದ ಹೆಚ್.ಆರ್.ಲೋಕೇಶ್, ಎಚ್.ಎಸ್.ಮಹೇಶ್, ಬಿಎಸ್‌ಪಿ ಜಿಲ್ಲಾ ಉಪಾಧ್ಯಕ್ಷ ಬ್ಯಾಡಮೂಡು ಬಸವಣ್ಣ, ಗ್ರಾಪಂ ಮಾಜಿ ಸದಸ್ಯರಾದ ಸಿ.ಕುಮಾರ್, ರಾಮಯ್ಯ, ಡಾ.ಬಿ.ಆರ್.ಅಂಬೇಡ್ಕರ್ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ರಾಮಚಂದ್ರ, ಉಪಾಧ್ಯಕ್ಷ ಹೆಚ್.ಸಿ.ಗಂಗಾಧರ್, ದೇವರಾಜು ಇತರರು ಹಾಜರಿದ್ದರು.