ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗ
ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಶುಕ್ರವಾರ ಸಂವಿಧಾನ ಜಾಗೃತಿ ಜಾಥಾದ ಸ್ತಬ್ಧಚಿತ್ರ ವಾಹನಕ್ಕೆ ಯೋಜನೆ ಮತ್ತು ಸಾಂಖ್ಯಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.ಭಾರತದ ಸಂವಿಧಾನ ಅಂಗೀಕರಿಸಿಕೊಂಡು 75 ವರ್ಷಗಳಾದ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಸಂವಿಧಾನ ಜಾಗೃತಿ ಜಾಥಾ ಎಂಬ ಶೀರ್ಷಿಕೆಯಡಿಯಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲಾಗಿದೆ.ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ, ನಗರ ಸ್ಥಳೀಯ ಸಂಸ್ಥೆಗಳಿಗೆ ಸಂವಿಧಾನ ಜಾಗೃತಿ ಸ್ತಬ್ಧಚಿತ್ರ ಮೆರವಣಿಗೆ ಸಂಚರಿಸಿ ಜಾಗೃತಿ ಮೂಡಿಸಲಿದೆ. ಫೆಬ್ರವರಿ 25ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ರಾಷ್ಟ್ರಮಟ್ಟದ ಬೃಹತ್ ಸಮಾವೇಶ ಕಾರ್ಯಕ್ರಮ ಆಯೋಜಿಸಲಾಗುವುದು. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಸಂವಿಧಾನ ಜಾಗೃತಿ ಸ್ಥಬ್ಧಚಿತ್ರ ಭಾಗವಹಿಸಲಿದೆ.
ರಾಷ್ಟ್ರಮಟ್ಟದ ಬೃಹತ್ ಸಮಾವೇಶಕಕ್ಕೂ ಮುನ್ನಾ ಜನವರಿ 26 ರಿಂದ ಫೆಬ್ರವರಿ 23 ರವರೆಗೆ ಜಿಲ್ಲೆಯ ಎಲ್ಲಾ 189 ಗ್ರಾಮ ಪಂಚಾಯಿತಿ, 7 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಯಲ್ಲಿ ಸ್ತಬ್ದ ಚಿತ್ರ ವಾಹನ ಸಂಚರಿಸಿ, ಸಂವಿಧಾನದ ಕುರಿತು ಜಾಗೃತಿ ಮೂಡಿಸಲಿದೆ. ಈ ಜಾಗೃತಿ ಜಾಥಾದಲ್ಲಿ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳು, ಮಹಿಳಾ ಸ್ವ-ಸಹಾಯ ಸಂಘಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸಚಿವ ಡಿ.ಸುಧಾಕರ್ ಕೋರಿದರು.ಸ್ಥಬ್ಧಚಿತ್ರಗಳ ಅಕ್ಕಪಕ್ಕದಲ್ಲಿ ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆದಿರುವ ಫಲಾನುಭವಿಗಳನ್ನು ಬಿಂಬಿಸುವ ಪ್ರತಿಕೃತಿ ರಚಿಸಲಾಗಿದೆ. ವಾಹನದಲ್ಲಿ ಪ್ರಮುಖವಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹ ಜ್ಯೋತಿ ಹಾಗೂ ಯುವನಿಧಿ ಯೋಜನೆಯ ಲಾಂಛನಗಳನ್ನು ಅಳವಡಿಸಲಾಗಿದೆ. ವಾಹನದ ಇಕ್ಕೆಲದಲ್ಲಿ ಚಿತ್ರದುರ್ಗ ನಗರದ ಐತಿಹಾಸಿಕ ಕೋಟೆಯ ಚಿತ್ರಣದ ಫೋಟೋಗಳನ್ನು ಅಳವಡಿಸಲಾಗಿದ್ದು ಸ್ತಬ್ಧಚಿತ್ರ ವಾಹನವನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ.
ಸ್ತಬ್ದಚಿತ್ರ ವಾಹನದಲ್ಲಿ ಅಳವಡಿಸಲಾಗಿರುವ ಎಲ್‍ಇಡಿ ಪರದೆ ಸಂವಿಧಾನ ಪೀಠಿಕೆ, ಸಂವಿಧಾನ ರಚನೆ ಹಾಗೂ ಸರ್ಕಾರ ಸಾಧನೆಯ ವಿಡಿಯೋ ತುಣುಕುಗಳ ಪ್ರಸಾರ ಮಾಡಲಾಗುತ್ತಿದೆ. ಸ್ತಬ್ಧಚಿತ್ರ ವಾಹನಕ್ಕೆ ಚಾಲನೆ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆ ಓದಲಾಯಿತು.ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಡಾ.ರಂಗಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.ಆಕರ್ಷಕ ಸ್ತಬ್ಧಚಿತ್ರಗಳು: ಜಿಲ್ಲೆಯ ಐತಿಹಾಸಿಕ ಮಹತ್ವ ಹಾಗೂ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ನಿಟ್ಟಿನಲ್ಲಿ ಸಂವಿಧಾನ ಜಾಗೃತಿ ಸ್ಥಬ್ಧಚಿತ್ರವನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ. ಸ್ತಬ್ಧಚಿತ್ರ ಜಾಥಾ ವಾಹನದ ಮುಂಭಾಗದಲ್ಲಿ ಸಂವಿಧಾನಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯನ್ನು ನಿರ್ಮಿಸಲಾಗಿದ್ದು, ವಾಹನದಲ್ಲಿ ಬುದ್ಧ, ಬಸವಣ್ಣನವರು ಹಾಗೂ ವೀರ ಮದಕರಿ ನಾಯಕರ ಭಾವಚಿತ್ರವನ್ನು ಅನಾವರಣಗೊಳಿಸಲಾಗಿದೆ. ವಾಹನದ ಮಧ್ಯಭಾಗದಲ್ಲಿ ವೀರವನಿತೆ ಒನಕೆ ಓಬವ್ವ ಪುತ್ಥಳಿ ಇದೆ.