ಸಾರಾಂಶ
ಧರ್ಮಸ್ಥಳಕ್ಕೆ ಬಂದ ಗಣ್ಯರನ್ನು ಉಜಿರೆಯಲ್ಲಿರುವ ಸಿದ್ಧವನ ಗುರುಕುಲ ಮತ್ತು ರತ್ನಮಾನಸಕ್ಕೆ ವೀಕ್ಷಣೆಗೆ ಕಳುಹಿಸಿ ಎಲ್ಲರೂ ಬಾಲಕರ ಚಟುವಟಿಕೆಗಳನ್ನು ಕಂಡು ಶ್ಲಾಘಿಸಿದ್ದಾರೆ ಎಂದರು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಜೀವನಶಿಕ್ಷಣ ನೀಡುವ ಉಜಿರೆಯ ರತ್ನಮಾನಸ ವಿದ್ಯಾರ್ಥಿನಿಲಯದ ಪ್ರವೇಶದ್ವಾರವನ್ನು ಬುಧವಾರ ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರ ಕುಮಾರ್ ಉದ್ಘಾಟಿಸಿ ಶುಭ ಹಾರೈಸಿದರು.ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, ರತ್ನಮಾನಸ ವಿದ್ಯಾರ್ಥಿನಿಲಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣದ ಜೊತೆಗೆ ಕೃಷಿ, ಹೈನುಗಾರಿಕೆ, ಅಡುಗೆ ಮಾಡುವುದು, ತರಕಾರಿ ಬೆಳೆಸುವುದು, ಲೆಕ್ಕಪತ್ರ ನಿರ್ವಹಣೆ, ಕ್ಷೌರ ಮಾಡುವುದು, ನಾಯಕತ್ವ, ಸಮಾಜಸೇವೆ ಇತ್ಯಾದಿ ವಿಷಯಗಳಲ್ಲಿ ಸೂಕ್ತ ಮಾಹಿತಿ, ಮಾರ್ಗದರ್ಶನ, ಪ್ರಾತ್ಯಕ್ಷಿಕೆ ಹಾಗೂ ತರಬೇತಿ ನೀಡಲಾಗುತ್ತದೆ. ತನ್ಮೂಲಕ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹ ನೀಡಲಾಗುತ್ತದೆ ಎಂದರು.
ಧರ್ಮಸ್ಥಳಕ್ಕೆ ಬಂದ ಗಣ್ಯರನ್ನು ಉಜಿರೆಯಲ್ಲಿರುವ ಸಿದ್ಧವನ ಗುರುಕುಲ ಮತ್ತು ರತ್ನಮಾನಸಕ್ಕೆ ವೀಕ್ಷಣೆಗೆ ಕಳುಹಿಸಿ ಎಲ್ಲರೂ ಬಾಲಕರ ಚಟುವಟಿಕೆಗಳನ್ನು ಕಂಡು ಶ್ಲಾಘಿಸಿದ್ದಾರೆ ಎಂದರು.ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆಸಲ್ಪಡುವ ಎಲ್ಲ ಪ್ರೌಢಶಾಲೆಗಳು ಶೇ. ನೂರು ಫಲಿತಾಂಶ ಪಡೆದ ಬಗ್ಗೆ ಅವರು ವಿಶೇಷ ಅಭಿನಂದನೆ ಸಲ್ಲಿಸಿದರು. ಸುಪ್ರಿಯಾ ಹರ್ಷೇಂದ್ರ ಕುಮಾರ್ ಶುಭ ಹಾರೈಸಿದರು.
ಅಖಿಲ ಭಾರತ ಮಟ್ಟದಲ್ಲಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ರತ್ನಮಾನಸದ ಹಿರಿಯ ವಿದ್ಯಾರ್ಥಿ ಶ್ಯಾಂ ಪ್ರಸಾದ್ ಅವರನ್ನು ಗೌರವಿಸಲಾಯಿತು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್. ಸತೀಶ್ಚಂದ್ರ, ಐ.ಟಿ. ವಿಭಾಗದ ಸಿ.ಇ.ಒ. ಪೂರನ್ ವರ್ಮ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರೀತಂ ಸ್ವಾಗತಿಸಿದರು. ನಿಶಿತ್ ವಂದಿಸಿದರು. ಹಿರಿಯ ವಿದ್ಯಾರ್ಥಿ ಶ್ಯಾಂ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.