ಸಾರಾಂಶ
ಹಾಸನ : ಎತ್ತಿನಹೊಳೆ ಯೋಜನೆ ನೀರೆತ್ತುವ ಹಂತಕ್ಕೆ ಬಂದಿದ್ದು, ಉದ್ಘಾಟನೆಗೆ ಸಜ್ಜಾಗಿದೆ. ಇನ್ನು 10 ದಿನಗಳ ಒಳಗಾಗಿ ಕಾರ್ಯಕ್ರಮ ಮಾಡಲು ಮುಖ್ಯಮಂತ್ರಿ ಜತೆಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎತ್ತಿನಹೊಳೆ ಯೋಜನೆ ಅಡಿಯಲ್ಲಿ ಬರುವ ಕಿರು ಜಲಾಶಯಗಳಿಂದ ಮುಖ್ಯ ಜಲಸಂಗ್ರಹಾಗಾರಕ್ಕೆ ನೀರೆತ್ತುವ ಕಾರ್ಯಕ್ರಮಕ್ಕೆ ಬುಧವಾರ ಪರೀಕ್ಷಾರ್ಥ ಚಾಲನೆ ನೀಡಿದ್ದೇವೆ. ಎತ್ತಿನಹೊಳೆ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಸಾವಿರಾರು ಜನರನ್ನು ಸೇರಿಸಿ ಉದ್ಘಾಟನೆ ಮಾಡುತ್ತೇವೆ. ಒಂದೇ ಕಡೆ ಉದ್ಘಾಟನೆ ಮಾಡುವುದಿಲ್ಲ. ಸಂಬಂಧಪಟ್ಟವರು ಅಲ್ಲಲ್ಲೇ ಉದ್ಘಾಟನೆ ಮಾಡುತ್ತಾರೆ. ಅದರ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.
ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಕಾರ್ಯಕ್ರಮ ಎಲ್ಲಿ ಮಾಡಬೇಕೆಂದು ತೀರ್ಮಾನಿಸುತ್ತೇವೆ. ಪಕ್ಷಾತೀತವಾಗಿ ಸಹಕಾರ ನೀಡಿದ ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಸಂಸದರನ್ನು ಆಹ್ವಾನಿಸುತ್ತೆವೆ. ರಾಜ್ಯದ ಜನತೆಗೆ ಮಾತು ಕೊಟ್ಟಂತೆ ನಡೆದಿದ್ದೇವೆ. ಮಳೆ ಮುಗಿಯುವುದರೊಳಗೆ ನೀರು ಹರಿಸುತ್ತೇವೆ ಎಂದು ಹೇಳಿದರು.
ಎಚ್‌ಡಿಕೆಗೆ ಡಿಕೆಶಿ ತಿರುಗೇಟು: ಸಿದ್ದರಾಮಯ್ಯ ಪುತ್ರ ಡಿನೋಟಿಫಿಕೇಷನ್ ಮಾಡಿದ್ದಾರೆಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ನಾನು ಆ ನಕಲಿಗಳಿಗೆಲ್ಲಾ ಉತ್ತರ ಕೊಡಲ್ಲ. ಅಸಲಿಗಳಿಗೆ ಮಾತ್ರ ಉತ್ತರಿಸುವೆ ಎಂದು ಎಚ್‌ಡಿಕೆಗೆ ತಿರುಗೇಟು ನೀಡಿದರು.