ಉಡುಪಿ: ಇಲ್ಲಿನ ಹಾವಂಜೆಯ ಭಾವನಾ ಪೌಂಡೇಶನ್, ಉಡುಪಿಯ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ, ವೆಂಟನಾ ಫೌಂಡೇಶನ್‌ಗಳ ಸಹಯೋಗದಲ್ಲಿ ಜನಪದ ದೇಶೀಯ ಕಲೆಗಳ ಕಾರ್‍ಯಾಗಾರವನ್ನು ಫೌಂಡೇಶನ್‌ನ ನಿರ್ದೇಶಕಿ ಶಿಲ್ಪಾ ಭಟ್‌ ಶನಿವಾರ ಉದ್ಘಾಟಿಸಿದರು.

ಉಡುಪಿ: ಇಲ್ಲಿನ ಹಾವಂಜೆಯ ಭಾವನಾ ಪೌಂಡೇಶನ್, ಉಡುಪಿಯ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ, ವೆಂಟನಾ ಫೌಂಡೇಶನ್‌ಗಳ ಸಹಯೋಗದಲ್ಲಿ ಜನಪದ ದೇಶೀಯ ಕಲೆಗಳ ಕಾರ್‍ಯಾಗಾರವನ್ನು ಫೌಂಡೇಶನ್‌ನ ನಿರ್ದೇಶಕಿ ಶಿಲ್ಪಾ ಭಟ್‌ ಶನಿವಾರ ಉದ್ಘಾಟಿಸಿದರು. ಕಲೆ, ಸಂಸ್ಕೃತಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ವಿವಿಧ ನೂತನ ಪ್ರಯೋಗ ಹಾಗೂ ಕಾರ್‍ಯಕ್ರಮಗಳಿಗೆ ವೆಂಟನಾ ಫೌಂಡೇಶನ್ ಸಹಕಾರ ನೀಡುತ್ತದೆ. ದೇಶೀಯ ಕಲೆಗಳು ಉಳಿಯುವಂತಾಗಲು ಈ ತೆರನಾದ ಕಾರ್‍ಯಾಗಾರಗಳು ಬಹು ಸಹಕಾರಿ. ಉಡುಪಿಯಂತಹ ಪುಟ್ಟ ಪಟ್ಟಣಕ್ಕೆ ರಾಷ್ಟ್ರ ಮಟ್ಟದಲ್ಲಿ ಮಾದರಿಯಾಗಬಹುದಾದ ಕಾರ್‍ಯಕ್ರಮ ಎಂದು ಅಭಿಪ್ರಾಯಪಟ್ಟರು. ಇನ್ನೊಬ್ಬ ಅತಿಥಿ ಕದಿಕೆ ಟ್ರಸ್ಟ್‌ನ ಸ್ಥಾಪಕ ನಿರ್ದೇಶಕಿ ಮಮತಾ ರೈ ಮಾತನಾಡಿ. ಬಟ್ಟೆ ಮೇಲಿನ ಮಾತಾ ನಿ ಪಚೇಡಿ ಶೋಷಣೆಗೊಳಪಟ್ಟ ಒಂದು ಸಮುದಾಯದ ನೋವೇ ಕಲೆಯಾಗಿ ಮಾರ್ಪಾಟಾದ ಹಿನ್ನೆಲೆಯುಳ್ಳದ್ದು. ನಮ್ಮಲ್ಲಿನ ವಿನ್ಯಾಸಗಾರಿಕೆಯ ಪದವಿ ಪಡೆಯುತ್ತಿರುವ ಯುವ ಸಮುದಾಯಕ್ಕೆ ಈ ಭಾರತೀಯ ಕಲೆಗಾರಿಕೆಯ ತಾಂತ್ರಿಕ ಅಂಶಗಳು ವಿನೂತನ ಪ್ರಯೋಗಕ್ಕೆ ಎಡೆಮಾಡಿಕೊಡಬಲ್ಲುದು. ಈ ತೆರನಾದ ಕಾರ್‍ಯಕ್ರಮ ಇನ್ನಷ್ಟು ನಡೆಯಲಿ ಎಂದು ಹಾರೈಸಿದರು. ಬಡಗುಪೇಟೆ ಗ್ಯಾಲರಿಯ ಸಂತೋಷ್ ಪೈ ಉಪಸ್ಥಿತರಿದ್ದರು. ಕಾರ್‍ಯಾಗಾರದ ಸಂಯೋಜಕ ಜನಾರ್ದನ ಹಾವಂಜೆ ಕಾರ್‍ಯಕ್ರಮ ನಿರ್ವಹಿಸಿದರು.

ಬಟ್ಟೆಗೆ ಅಳಲೇಕಾಯಿಯ ರಸವನ್ನು ಸವರಿ, ಬೆಲ್ಲ ಮತ್ತು ಕಬ್ಬಿಣದ ತುಕ್ಕನ್ನು ಕೊಳೆಸಿ ತಯಾರಿಸಿದ ದ್ರಾವಣದಿಂದ ಕಪ್ಪು ವರ್ಣವನ್ನು ಬರುವಂತೆ ಮಾಡಿಕೊಂಡು ಈ ಕಲಂಕಾರಿ ಕಲೆಯ ಚಿತ್ತಾರಗಳು ಬಟ್ಟೆಯ ಮೇಲೆಲ್ಲ ಹರಡಿಕೊಳ್ಳುತ್ತದೆ. ಈ ಕಲೆಯನ್ನು ಸುಮಾರು ನಾಲ್ಕು ದಶಕಗಳಿಗಿಂತಲೂ ಹೆಚ್ಚು ರಚಿಸುತ್ತಿರುವ ಜಗದೀಶ್ ಚಿತ್ತಾರ ಅವರು ಈ ಸರಣಿ ಕಲಾ ಕಾರ್‍ಯಾಗಾರದ ಭಾಗವಾಗಿ ಬಟ್ಟೆಯ ಮೇಲೆ ರಚಿಸಲಾಗುವ ಗುಜರಾತ್‌ನ ಕಲಂಕಾರಿ ಹಾಗೂ ಮಾತಾ ನಿ ಪಚೇಡಿಯನ್ನು ಈ ಬಾರಿ ಆಸಕ್ತರಿಗೆ ಕಲಿಸಿಕೊಡುತ್ತಿದ್ದಾರೆ.