ಅಧಿಕಾರಿಗಳ ಮೇಲೆ ಜನರಿಗೆ ವಿಶ್ವಾಸವಿದೆ

| Published : Nov 26 2024, 12:49 AM IST

ಅಧಿಕಾರಿಗಳ ಮೇಲೆ ಜನರಿಗೆ ವಿಶ್ವಾಸವಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರಲ್ಲಿ ಅಧಿಕಾರಿಗಳ ಮೇಲೆ ಗೌರವ ಇದೆ. ಅದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರುರಾಜಕಾರಣಿಗಳಿಗಿಂತಲೂ ಅಧಿಕಾರಿಗಳ ಮೇಲೆ ಜನರು ಹೆಚ್ಚು ವಿಶ್ವಾಸ ಹೊಂದುವುದರಿಂದ ನಾವು ಪ್ರಾಮಾಣಿಕ ಮತ್ತು ಉತ್ತಮ ಆಡಳಿತ ನೀಡಬೇಕು ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಹೇಳಿದರು.ಕರ್ನಾಟಕ ರಾಜ್ಯ ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಸೋಮವಾರ ಮುಕ್ತ ವಿವಿಯ ಸ್ಪರ್ಧಾತ್ಮ ಪರೀಕ್ಷಾ ತರಬೇತಿ ಕೇಂದ್ರವು ಆಯೋಜಿಸಿದ್ದ ಕೆಎಎಸ್ ಪರೀಕ್ಷಾ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಸಾರ್ವಜನಿಕರಲ್ಲಿ ಅಧಿಕಾರಿಗಳ ಮೇಲೆ ಗೌರವ ಇದೆ. ಅದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ವ್ಯವಸ್ಥೆಯಿಂದ ಹೊರಗೆ ಇದ್ದಾಗ ನಾವು ಎಲ್ಲವನ್ನೂ ಟೀಕಿಸುತ್ತೇವೆ. ಕಸ ನೋಡಿ ಸ್ಥಳೀಯ ಸಂಸ್ಥೆಗಳನ್ನು ಬೈಯುತ್ತೇವೆ. ರಸ್ತೆ ಸರಿ ಇಲ್ಲ ಎಂದರೆ ಸರ್ಕಾರವನ್ನು ಟೀಕಿಸುತ್ತೇವೆ. ಆದರೆ ನಾವು ವ್ಯವಸ್ಥೆ ಒಳಗೆ ಬಂದಾಗ ನಮ್ಮ ಜವಾಬ್ದಾರಿಯನ್ನು ಮರೆಯಬಾರದು ಎಂದರು.ಎಲ್ಲರೂ ಅಂದುಕೊಳ್ಳುವುದೇನೆಂದರೆ ಎಸಿ ಕಾರಿನಲ್ಲಿ ಹೋಗುತ್ತಾರೆ ಅಂತ. ಆದರೆ ನಮಗಿರುವ ಒತ್ತಡದಲ್ಲಿ ಕೆಲಸ ಮಾಡುವುದು ಕಷ್ಟಸಾಧ್ಯ. ಚಾಮರಾಜನಗರ ಜಿಲ್ಲೆಯ ಮೂಲೆ ಮೂಲೆಯಿಂದ ಜನ ನಮ್ಮನ್ನು ನೋಡಲು ಬರುತ್ತಾರೆ. ಎಡಿಸಿ ಅವರನ್ನು ಭೇಟಿಯಾಗಿ ಮಾತನಾಡಿ ಎಂದರೂ ಕೂಡ ನನಗಾಗಿಯೇ ಕಾಯುತ್ತಾರೆ. ಆ ಗೌರವವನ್ನು ನಾವು ಉಳಿಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.ಅಧಿಕಾರ ದೊರಿದಾಕ್ಷಣ ನಾವು ಬದಲಾಗಬಾರದು. ಇಂದು ನಾವು ಹೇಗೆ ವರ್ತಿಸುತ್ತಿದ್ದೇವೋ ಹಾಗೆಯೇ ಅಧಿಕಾರಕ್ಕೆ ಬಂದ ಮೇಲೂ ನಮ್ಮ ವರ್ತನೆ ಇರಬೇಕಾಗುತ್ತದೆ. ನಮ್ಮ ನಡೆ ನುಡಿಯಲ್ಲಿ ನಮ್ಮ ವ್ಯಕ್ತಿತ್ವ ತೋರಿಸಬೇಕು. ವ್ಯವಸ್ಥೆನೆ ಹಾಗೆ ಇದೆ. ಎಷ್ಟೇ ಮಾಡಿದರೂ ಹಾಗೆಯೇ ಎಂದು ಅಂದುಕೊಂಡು ಬದಲಾಗಬಾರದು. ನಾನೂ ಕೂಡ ಸಾಧಾರಣ ಕುಟುಂಬದಿಂದ ಬಂದವಳು. ಈ ಸ್ಥಾನಕ್ಕೆ ಬರಲು ಅನೇಕರು ಸಹಾಯ ಮಾಡಿರುತ್ತಾರೆ. ಒಂದು ತಹಸೀಲ್ದಾರ್ಕಚೇರಿಗೆ ಹೋದಾಗ ಒಂದು ಪ್ರಮಾಣ ಪತ್ರ ನೀಡುವವರೂ ನೆರವಾಗುತ್ತಾರೆ. ನಾನು ಎಐಎಸ್ ಮಾಡುವಾಗ ತಹಸೀಲ್ದಾರ್ಪ್ರಮಾಣ ಪತ್ರ ಕೊಡುವಾಗ ನೀವು ಖಂಡಿತ ತೇರ್ಗಡೆ ಹೊಂದುತ್ತೀರಿ. ನಾನೇ ನಿಮ್ಮನ್ನು ಮೇಡಂ ಎಂದು ಕರೆಯಬೇಕಾಗುತ್ತದೆ ಎಂದಿದ್ದರು. ನಾನು ಅವರನ್ನು ಎಂದಿಗೂ ಮರೆಯುವುದಿಲ್ಲ ಎಂದು ನೆನಪು ಮಾಡಿಕೊಂಡರು.ಮೈಸೂರು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪರೀಕ್ಷಾ ಸಿದ್ಧತೆ ಕುರಿತು ಮಾಹಿತಿ ನೀಡಿದರು. ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಇದ್ದರು.