ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಕೆಎಲ್‌ಇ ಸಂಸ್ಥೆಯ ಕ್ಯಾನ್ಸರ್ ಆಸ್ಪತ್ರೆಯ ಲೋಕಾರ್ಪಣೆ ಕಾರ್ಯಕ್ರಮ ಡಿ.30ರಂದು ಸಂಜೆ 4 ಗಂಟೆಗೆ ನಡೆಯಲಿದ್ದು, ರಾಷ್ಟ್ರಪತಿ ದ್ರೌಪತಿ ಮುರ್ಮು ಆಸ್ಪತ್ರೆಯನ್ನು ಜನ ಸೇವೆಗೆ ಅರ್ಪಿಸಲಿದ್ದಾರೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ತಿಳಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 300 ಹಾಸಿಗೆಗಳ ಸೌಲಭ್ಯವುಳ್ಳ 1 ಲಕ್ಷ 75 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಪ್ರತ್ಯೇಕವಾದ ಕ್ಯಾನ್ಸರ್ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗಿದೆ. ಈ ಭಾಗದ ಜನರಿಗೆ ಕ್ಯಾನ್ಸರ್ ಸಂಬಂಧಿತ ಕಾಯಿಲೆಗಳಿಗೆ ವಿಶ್ವ ಗುಣಮಟ್ಟದ ಸಮಗ್ರ ಚಿಕಿತ್ಸೆ ನೀಡುವ ಮಹದಾಸೆ ಈಗ ಪೂರ್ಣಗೊಳ್ಳುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬೃಹತ್ ಕ್ಯಾನ್ಸರ್ ಆಸ್ಪತ್ರೆ ತಲೆ ಎತ್ತಿ ನಿಂತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದ ಕೆಎಲ್‌ಇ ಸಂಸ್ಥೆ ಆರೋಗ್ಯ ಕ್ಷೇತ್ರದಲ್ಲಿ ಉತ್ತರ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಜನರಿಗೆ ವರದಾನವಾಗಿ ಪರಿಣಮಿಸಿದೆ ಎಂದು ಹೇಳಿದರು.
ಗೌರವ ಅತಿಥಿಗಳಾಗಿ ಗೌರವಾನ್ವಿತ ರಾಜ್ಯಪಾಲ ಥಾವರಚಂದ ಗೆಹ್ಲೋತ, ಕೇಂದ್ರದ ಗ್ರಾಹಕ ಸೇವೆ, ಆಹಾರ ಮತ್ತು ನರ್ರಿರೀಕ ಪೂರೈಕೆ, ನೂತನ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ ಜೋಷಿ, ರಾಜ್ಯದ ವೈದ್ಯಕೀಯ ಶಿಕ್ಷಣ ಮತ್ತು ಕೌಶಾಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ, ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಂಸದ ಜಗದೀಶ ಶೆಟ್ಟರ, ಶಾಸಕರಾದ ಆಸೀಫ್ ಸೇಠ್, ಅಭಯ ಪಾಟೀಲ ಮತ್ತು ಕಾಹೇರನ ಉಪಕುಲಪತಿ ಡಾ.ನಿತಿನ ಗಂಗಾಣೆ, ದಾನಿಗಳಾದ ಡಾ.ಸಂಪತ್‌ಕುಮಾರ ಶಿವಾನಗಿ ಹಾಗೂ ಡಾ.ಉದಯಾ ಶಿವಾನಗಿ ಉಪಸ್ಥಿತರಿರಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ವಹಿಸಲಿದ್ದಾರೆ.ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಸಹಯಾರ್ತವಾಗಿ ದಾನ ನೀಡಿದ ಡಾ.ಸಂಪತ್‌ಕುಮಾರ್ ಎಸ್.ಶಿವಾನಗಿ ಹಾಗೂ ಡಾ.ಉದಯಾ ಶಿವಾನಗಿ ಅವರ ಹೆಸರನ್ನು ಆಸ್ಪತ್ರೆಗೆ ಇಡಲಾಗಿದೆ. ಕ್ಯಾನ್ಸರ್ ಸಂಬಂಧಿತ ಕಾಯಿಲೆಗಳಿಗೆ ಒಂದೇ ಸೂರಿನಡಿ ಚಿಕಿತ್ಸೆ ಹಾಗೂ ಎಲ್ಲ ಪ್ರಕ್ರಿಯೆ ಮಾಡಬೇಕೆನ್ನುವ ಕನಸು ಈಗ ನನಸಾಗಿದೆ. ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಿಂಭಾಗದಲ್ಲಿ ಸುಸಜ್ಜಿತವಾದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಕ್ಯಾನ್ಸರ್ ಆಸ್ಪತ್ರೆ ಅತ್ಯಾಧುನಿಕ ವೈದ್ಯಕೀಯ ಯಂತ್ರೋಪಕರಣ ಹೊಂದಿದೆ ಎಂದು ಹೇಳಿದರು.
ಕ್ಯಾನ್ಸರ್ ಚಿಕಿತ್ಸೆಗಾಗಿ ಬೇರೆ ಬೇರೆ ನಗರಗಳಿಗೆ ಅಲೆಯವುದನ್ನು ತಪ್ಪಿಸಿ ಬಹುವಿಧ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಾಗಿರುವ ಇಲ್ಲಿ ಕ್ಯಾನ್ಸರ್ ಸಂಬಂಧಿತ ಎಲ್ಲ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶಸ್ತ್ರಚಿಕಿತ್ಸೆಯಿಂದ ಹಿಡಿದು, ಕೀಮೋಥೆರಪಿ, ರೆಡಿಯೋಥೆರಪಿ ಸೇರಿದಂತೆ ಎಲ್ಲ ರೀತಿಯ ಚಿಕಿತ್ಸೆ ಲಭ್ಯವಿದೆ.ರೊಬೊಟಿಕ್ ಶಸ್ತ್ರಚಿಕಿತ್ಸೆ: ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಶಸ್ತ್ರಚಿಕಿತ್ಸೆಗಾಗಿ ರೋಬೊಟಿಕ್ ಅಳವಡಿಸಿಕೊಂಡು ಅತ್ಯಂತ ಕಡಿಮೆ ಅವಧಿಯಲ್ಲಿ ರೋಗಿಗಳನ್ನು ಗುಣಮುಖಗೊಳಿಸುವಲ್ಲಿ ಸಹಕಾರಿಯಾಗಿದೆ. ಅತ್ಯಂತ ಸಂಕೀರ್ಣವಾದ ಶಸ್ತ್ರಚಿಕಿತ್ಸಾ ವಿಧಾನಗಳನ್ನು ನಿರ್ವಹಿಸುವುದು ಸೇರಿದಂತೆ ಅನೇಕ ಕಾರ್ಯ ನಿರ್ವಹಿಸುತ್ತದೆ. ರೊಬೊಟಿಕ್ ಸಹಕಾರದಿಂದ ನೆರವೇರಿಸುವ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಅತ್ಯಂತ ಪರಿಣಾಮಕಾರಿ ಎಂದು ಕಂಡು ಬಂದಿದೆ.
ತೀವ್ರ ನಿಗಾ ಘಟಕ: 300 ಹಾಸಿಗೆಗಳ ಆಸ್ಪತ್ರೆಯಲ್ಲಿ ಗಂಭೀರ ಪರಿಸ್ಥಿಯಲ್ಲಿ ಚಿಕಿತ್ಸೆ ನೀಡಲು ಅಗತ್ಯವಿರುವ ತೀವ್ರ ನಿಗಾ ಘಟಕವನ್ನು ತೆರೆಯಲಾಗಿದ್ದು, ಅತ್ಯಾಧುನಿಕ ವೈದ್ಯಕೀಯ ಸಲಕರಣೆ ಒಳಗೊಂಡಿದೆ. 35 ಹಾಸಿಗೆಗಳ ತೀವ್ರ ನಿಗಾ ಘಟಕವಿದ್ದು, ಅತ್ಯಾಧುನಿಕವಾದ 5 ಶಸ್ತ್ರ ಚಿಕಿತ್ಸಾ ಕೊಠಡಿ ನಿರ್ಮಿಸಲಾಗಿದೆ.ರೆಡಿಯೇಶನ್ ಥೆರಪಿ: ರೆಡಿಯೇಶನ್ ಚಿಕಿತ್ಸೆಯ ಆವಿಷ್ಕಾರ ಕ್ಯಾನ್ಸರ್ ಚಿಕಿತ್ಸೆಯಲ್ಲಿ ವಿಶ್ವವನ್ನೇ ಶಾಶ್ವತವಾಗಿ ಬದಲಾಯಿಸಿ ಬಿಟ್ಟಿತು. ಇಂದು, ಕ್ಯಾನ್ಸರ್ ರೋಗಿಗಳಲ್ಲಿ ನಾಲ್ಕನೇ ಮೂರು ಭಾಗದಷ್ಟು ಜನರು ಕೆಲವು ರೀತಿಯ ರೇಡಿಯೊಥೆರಪಿಯಿಂದ ಗುಣಮುಖರಾಗುತ್ತಿದ್ದಾರೆ. ರೆಡಿಯೇಶನ್ ಆಂಕೊಲಾಜಿ ವಿಭಾಗ ರೇಡಿಯಂ ಮತ್ತು ಕೋಬಾಲ್ಟ್ ಚಿಕಿತ್ಸೆಯಿಂದ ಹೆಚ್ಚಿನ ಶಕ್ತಿಯ ಎಕ್ಸ್-ರೇ ಲೀನಿಯರ್ ವೇಗವರ್ಧಕ ಚಿಕಿತ್ಸೆಯವರೆಗೆ ಬಹಳ ದೂರ ಸಾಗಿದೆ. ಸಿಟಿ, ಎಂಆರ್‌ಐ ಮತ್ತು ಪೆಟ್ ಸಿಟಿಯಂತಹ ಸುಧಾರಿತ ಇಮೇಜಿಂಗ್ ವಿಧಾನಗಳು ಗೆಡ್ಡೆಗಳನ್ನು ನಿಖರವಾಗಿ ಗುರುತಿಸುತ್ತವೆ. ಇಂಟೆನ್ಸಿಟಿ ಮಾಡ್ಯುಲೇಟೆಡ್ ರೇಡಿಯೊಥೆರಪಿ (ಐಎಂಆರ್ಟಿ), ವಾಲ್ಯೂಮೆಟ್ರಿಕ್ ಮಾಡ್ಯುಲೇಟೆಡ್ ಆರ್ಕ್ ಥೆರಪಿ (ವಿಎಂಎಟಿ), ಇಮೇಜ್ ಗೈಡೆಡ್ ರೇಡಿಯೊಥೆರಪಿ (ಐಜಿಆರ್ಟಿ), 4ಡಿ ರೆಸ್ಪಿರೇಟರಿ ಗೇಟೆಡ್ ಥೆರಪಿ ಮತ್ತು ಸ್ಟೀರಿಯೊಟಾಕ್ಟಿಕ್ ರೇಡಿಯೊಥೆರಪಿಯಂತಹ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿಖರವಾದ ಚಿಕಿತ್ಸೆಯು ವೇಗವಾಗಿ ಮತ್ತು ಕಡಿಮೆ ಸಮಯದಲ್ಲಿ ಸಾಧ್ಯವಾಗಿಸಿದೆ.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ಡಾ.ವಿ.ಎಸ್. ಸಾಧುನವರ, ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಎನ್. ಎಸ್. ಮಹಾಂತಶೆಟ್ಟಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಎಂ.ವಿ. ಜಾಲಿ, ತಜ್ಞವೈದ್ಯರಾದ ಡಾ.ಕುಮಾರ ವಿಂಚುರಕರ, ಡಾ.ಇಮ್ತಿಯಾಜ್, ಡಾ.ರಾಜೇಂದ್ರ ಮೆಟಗುಡಮಠ, ಡಾ.ರೋಹನ ಭಿಸೆ, ಡಾ.ಅಭಿಲಾಷಾ ಸಂಪಗಾರ ಮತ್ತಿತರರು ಉಪಸ್ಥಿತರಿದ್ದರು.ವಿಶ್ವದರ್ಜೆಯ ಗುಣಮಟ್ಟದ ಅತ್ಯಂತ ಸುಧಾರಿತ ಅತ್ಯಾಧುನಿಕ ಕೌಶಲ್ಯವುಳ್ಳ ರೇಡಿಯೇಶನ್ ಚಿಕಿತ್ಸಾ ವ್ಯವಸ್ಥೆಯನ್ನು ಕಲ್ಪಿಸಿದ್ದು, ಭಾರತದಲ್ಲಿಯೇ ಪ್ರಥಮವಾಗಿ ಎಸ್.ಆರ್.ಎಸ್ ಕೋನ್ಸ್, ಮೊಬಿಯಸ್ 3ಡಿ ವೆಲೊಸಿಟಿ ವೇಗದ ಸಮಗ್ರ ವೈಶಿಷ್ಟ್ಯಗಳೊಂದಿಗೆ ಪ್ರೀಮಿಯಂ ಆ್ಯಂಡ್ ಹೈಪರ್‌ಆರ್ಕ್ ಟ್ರೂಬೀಮ್ ಹೊಂದಿದೆ. ಸ್ಟೀರಿಯೊಟಾಕ್ಟಿಕ್ ಆರ್ಟಿ-ನಿರ್ಣಾಯಕ ಸ್ಥಳಗಳಲ್ಲಿ ನಿಖರವಾದ ಚಿಕಿತ್ಸೆ. ವೇಗವಾದ ಚಿಕಿತ್ಸೆಯ ಸಮಯ. ಉಸಿರಾಟದ ಚಲನೆಯ ನಿರ್ವಹಣೆ, ಚಲಿಸುವ ಗೆಡ್ಡೆಗಳನ್ನು ಗುರಿಯಾಗಿಸುವುದು, ಜ್ಞಾನ ಆಧಾರಿತ ಯೋಜನೆಯು ದೋಷವನ್ನು ಕಡಿಮೆ ಮಾಡುತ್ತದೆ. ರೋಗಿಯ ನಿರ್ದಿಷ್ಟ ಗುಣಮಟ್ಟದ ಭರವಸೆಯೊಂದಿಗೆ ನಿಖರವಾದ ಡೋಸ್ ನೀಡಲು ಸಹಕರಿಸುತ್ತದೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯ ಸರ್ಕಾರಗಳ ಯೋಜನೆಗಳಡಿಯಲ್ಲೂ ಚಿಕಿತ್ಸೆ ನೀಡಲಾಗುತ್ತದೆ.
-ಡಾ. ಪ್ರಭಾಕರ ಕೋರೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ