ಸಾರಾಂಶ
-ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ ನೇತೃತ್ವದಲ್ಲಿ ಪ್ರತಿಭಟನೆ, ಎಚ್ಚೆತ್ತ ಅಧಿಕಾರಿಗಳು
-----ಕನ್ನಡಪ್ರಭ ವಾರ್ತೆ ಯಾದಗಿರಿ
ಯಾದಗಿರಿಯ ನೂತನ ನಗರ ಪೊಲೀಸ್ ಠಾಣೆ ಉದ್ಘಾಟನೆ ಭಾಗ್ಯ ಕರುಣಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಹೋರಾಟಕ್ಕೆ ಮಣಿದ ರಾಜ್ಯ ಗೃಹ ಇಲಾಖೆ ನೂತನ ಪೊಲೀಸ್ ಠಾಣೆ ಉದ್ಘಾಟನೆಗೆ ಸಜ್ಜಾಗಿದೆ. ಡಿ. 4 ರಂದು ಗೃಹ ಸಚಿವ ಜಿ. ಪರಮೇಶ್ವರ ಅವರು ಉದ್ಘಾಟನೆ ಮಾಡಲಿದ್ದಾರೆಂಬ ಮಾಹಿತಿ ದೊರೆತಿದೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಸ್ಪಂದನೆಗೆ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ ಹರ್ಷ ವ್ಯಕ್ತಪಡಿಸಿದ್ದಾರೆ.ಈ ವೇಳೆ ಮಾತನಾಡಿದ ಅವರು, ಇದರಂತೆ ಇನ್ನು ಹಲವು ಕಟ್ಟಡಗಳು ಕೋಟ್ಯಂತರ ವೆಚ್ಚದಲ್ಲಿ ನಿರ್ಮಾಣಗೊಂಡು ಅನೈತಿಕ ಚಟುವಟಿಕೆ ತಾಣವಾಗಿ ನಿಂತಿವೆ. ನಗರಸಭೆ ಕಚೇರಿ, ರಾಚೋಟಿ ವೀರಣ್ಣ ದೇವಸ್ಥಾನದ ಬಳಿಯ ಯಾತ್ರಿ ನಿವಾಸ ಸೇರಿ ಸರ್ಕಿಟ್ ಹೌಸ ಬಳಿಯ ಸರ್ಕಾರಿ ವಸತಿ ನಿಲಯವು ಉದ್ಘಾಟನೆ ಆಗಿಲ್ಲ. ಸಾಕಷ್ಟು ಅನುದಾನ ಖರ್ಚು ಮಾಡಿ ಕಟ್ಟಿರುವ ಕಟ್ಟಡ ಉದ್ಘಾಟನೆ ಆಗದೆ ಇರೋದು ಶೋಚನೀಯ ಸಂಗತಿ ಎಂದರು.
ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಕಟ್ಟಿರುವ ಕಟ್ಟಡದಲ್ಲಿ ಕಚೇರಿ ಮಾಡುವ ಬಯಕೆ ಇಲ್ಲದಿದ್ದರೆ, ಬಾಡಿಗೆಗಾದ್ರೂ ನೀಡಿದರೆ ಸರ್ಕಾರದ ಬೊಕ್ಕಸಕ್ಕೆ ಹಣವಾದರೂ ಬರುತ್ತದೆ. ಆದರೆ, ಜಿಲ್ಲಾಡಳಿತ ಹಾಗೂ ಇಲ್ಲಿನ ಜನಪ್ರತಿನಿಧಿಗಳ ನಿಷ್ಕಾಳಜಿಯಿಂದ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡ ಹಾಳು ಬಿದ್ದಿವೆ. ಇತ್ತ ವಸತಿ ಶಾಲಾ ವಿದ್ಯಾರ್ಥಿಗಳು ಕೊರೆಯುವ ಚಳಿಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳುತ್ತಿದ್ದಾರೆ. ಶೀಘ್ರ ವಸತಿ ನಿಲಯ ಉದ್ಘಾಟಿಸಿದರೆ ಗ್ರಾಮೀಣ ಮಕ್ಕಳು ಸೇರಿ ಸಾರ್ವಜನಿಕರಿಗೆ ಅನುಕೂಲ ಆಗಲಿದೆ ಎಂದರು.ಸರ್ಕಾರದ ಖಜಾನೆ ಲೂಟಿ ಮಾಡಿ ಕಟ್ಟಿರುವ ಕಟ್ಟಡಗಳನ್ನ ಶೀಘ್ರ ಉದ್ಘಾಟಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ನೂತನ ಕಟ್ಟಡಗಳು ಉದ್ಘಾಟನೆಯಾದರೆ ವಿದ್ಯಾರ್ಥಿಗಳು, ಸಾರ್ವಜನಿಕರು ಅಧಿಕಾರಿಗಳಿಗೆ ಅನುಕೂಲವಾಗಲಿದೆ ಎಂದರು.
--29ವೈಡಿಆರ್2: ಯಾದಗಿರಿಯ ನೂತನ ನಗರ ಪೊಲೀಸ್ ಠಾಣೆ ಉದ್ಘಾಟಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ನಡೆಸಿದರು.
---000---