ಪೆರಾಜೆ ಸಹಕಾರಿ ಸಂಘ ನೂತನ ಸಭಾಭವನ ಉದ್ಘಾಟನೆ

| Published : Sep 13 2024, 01:38 AM IST

ಸಾರಾಂಶ

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಸಭಾ ಭವನ ಮತ್ತು ಕಚೇರಿಗಳನ್ನು ಮಂಗಳವಾರ ಕೊಡಗು ಮೈಸೂರು ಸಂಸದ ಯದುವೀರ ಒಡೆಯರ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಂಕಷ್ಟ, ಸವಾಲುಗಳ ಮಧ್ಯೆ ಜನರಿಗೆ ಉತ್ತಮವಾದ ಸೇವೆ ನೀಡುತ್ತಾ ಬಂದಿರುವ ಕೊಡಗಿನ ಸಹಕಾರ ಸಂಘಗಳ ಕಾರ್ಯವೈಖರಿ ಶ್ಲಾಘನೀಯ. ಭಾರತದಲ್ಲಿ ಹುಟ್ಟಿಕೊಂಡ ಅತ್ಯದ್ಭುತ ವ್ಯವಸ್ಥೆ ಸಹಕಾರಿ ಸಂಘಗಳು ಜನರಿಗೆ ಕಷ್ಟಕಾಲದಲ್ಲಿ ಉತ್ತಮವಾದ ಸೇವೆ ನೀಡುವುದರ ಮೂಲಕ ಆರ್ಥಿಕ ಸ್ವಾವಲಂಬನೆ ಬದುಕು ನಡೆಸಲು ಸಾದ್ಯವಾಗಿದೆ ಎಂದು ಕೊಡಗು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ. ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಸಭಾ ಭವನ ಮತ್ತು ಕಚೇರಿಗಳನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ಕಲ್ಪನೆ ಸಾಕಾರಗೊಳ್ಳಲು ಜನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತಾಗಬೇಕು ಇನ್ನು ಕೆಲವು ತಿಂಗಳಲ್ಲಿ ಮಡಿಕೇರಿಯಲ್ಲಿ ಸಂಸದರ ಕಚೇರಿ ತೆರೆಯಲಿದ್ದು ಕಾಫಿ, ಅಡಕೆ ಹಾಗೂ ಇತರ ಕೃಷಿ ಬೆಳೆಗಳ ಹಾಗೂ ಇತರ ಯಾವುದೇ ಸಮಸ್ಯೆ ತಿಳಿಸಲು ಅವಕಾಶ ಇರುತ್ತದೆ ಎಂದರು.

ಮೈಸೂರು-ಕುಶಾಲನಗರ ಹೆದ್ದಾರಿ ಮತ್ತು ರೈಲೈ ಕಾಮಗಾರಿ ಮತ್ತು ಕೊಡಗು ವಿಶ್ವವಿದ್ಯಾನಿಲಯದ ಕೆಲಸಗಳನ್ನು ಮುಂದಿನ ದಿನಗಳಲ್ಲಿ ಪೂರೈಸುವ ಭರವಸೆ ನೀಡಿದರು. ನಂತರ ಗ್ರಾಮಸ್ಥರಿಂದ ಆಹವಾಲು ಸ್ವಿಕರಿಸಿ ಸಂವಾದ ನಡೆಸಿದರು.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ನೂತನ ಪ್ರವೇಶ ದ್ವಾರ ಉದ್ಘಾಟಿಸಿ ಮಾತನಾಡಿ, ಹಿರಿಯ ಸಹಕಾರಿಗಳ ದೂರದೃಷ್ಟಿಯ ಚಿಂತನೆಯಿಂದ ಇಂದು ಸಹಕಾರ ಸಂಘ ಬಲಿಷ್ಠವಾಗಿದೆ. ಸದಸ್ಯರು ಒಟ್ಟಾಗಿ ಸಹಕಾರ ಸಂಘದೊಂದಿಗೆ ಕೈ ಜೋಡಿಸಬೇಕು. ಬದ್ಧತೆ ಇರುವ ಆಡಳಿತ ಮಂಡಳಿ ಇದ್ದರೆ ಉತ್ತಮವಾದ ಸಹಕಾರ ಸಂಘ ರೂಪುಗೊಳ್ಳುತ್ತದೆ ಎಂದರು.ಮಾಜಿ ಸ್ಪೀಕರ್‌ ಕೆ.ಜಿ.ಬೋಪಯ್ಯ ಮಾತನಾಡಿ, ಇಲ್ಲಿನ ಆಡಳಿತ ಕ್ರಿಯಾಶೀಲತೆಯಿಂದ ಸಂಸ್ಥೆ ಗಟ್ಟಿಯಾಗಿ ಬೆಳೆದು ನಿಂತಿದೆ. ಸರ್ಕಾರದಿಂದ ಸಹಕಾರ ಸಂಘಗಳಿಗೆ ಸ್ವಾಯತ್ತತೆ ಕೊಡುವ ಕೆಲಸ ಆಗಬೇಕಿದೆ. ಸಹಕಾರ ಸಂಘಗಳು ಸುಲಭವಾಗಿ ರೈತರಿಗೆ ಸಾಲ ನೀಡುತ್ತಿದ್ದು ಸಹಕಾರ ಕ್ಷೇತ್ರ ಗಟ್ಟಿಯಾದರೆ ಮಾತ್ರ ಸದಸ್ಯರ ಬಾಳು ಸುಗಮವಾಗುತ್ತದೆ ಎಂದರು.

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅದ್ಯಕ್ಷ ನಾಗೇಶ್ ಕುಂದಲ್ಪಾಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಪಂಚಾಯಿತಿ ಅಧ್ಯಕ್ಷೆ ಚಂದ್ರಕಲ ಬಳ್ಳಡ್ಕ , ಪಯಸ್ವಿನಿ ಸಹಕಾರ ಸಂಘದ ಅಧ್ಯಕ್ಷ ಅನಂತ ಎನ್ ಸಿ, ಜಿಲ್ಲಾ ಬ್ಯಾಂಕಿನ ನಿರ್ದೇಶಕ ಕಾಂಗೀರ ಸತೀಶ್, ಪೆರಾಜೆ ಸೊಸೈಟಿ ಉಪಾಧ್ಯಕ್ಷ ಅಶೋಕ ಪೆರುಮಂಡ ಪಂಚಾಯಿತಿ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲೋಕೇಶ್ ಎಚ್‌.ಕೆ.ಮತ್ತಿತರರು ಇದ್ದರು.