ಅರಸೀಕೆರೆ: ತಾಲೂಕಿನ ಜಾಜೂರು ಗ್ರಾಮದ ಸಮೀಪದಲ್ಲಿನ ಶ್ರೀದಕ್ಷಿಣ ನಾಕೋಡ ಶ್ರೀಭೈರವ ಧಾಮ ಸುಕ್ಷೇತ್ರದಲ್ಲಿ ಯೋಗಿರಾಜ್ ಶ್ರೀವಿಜಯಶಾಂತಿ ಸೂರಿ ಗುರೂಜಿ, ಪದ್ಮಾವತಿ ದೇವಿ ಹಾಗೂ ಸರಸ್ವತಿ ದೇವಿ ಮಂದಿರಗಳ ಪ್ರತಿಷ್ಠಾಪನಾ ಮಹೋತ್ಸವ ಧಾರ್ಮಿಕ ಪೂಜಾ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ, ಶಾಸ್ತ್ರೋಕ್ತ ವಿಧಿ ವಿಧಾನಗಳೊಂದಿಗೆ ಲೋಕಾರ್ಪಣೆಗೊಂಡಿತು.

ನಾಲ್ಕು ದಿನಗಳ ಕಾಲ ನಡೆದ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ದೇವಾಲಯದ ಗೋಪುರ ಧ್ವಜಸ್ತಂಭಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಪೂಜೆ ಪೂರ್ಣಗೊಂಡ ಬಳಿಕ, ದೇವಾಲಯದ ಗೋಪುರದ ಮೇಲ್ಭಾಗಕ್ಕೆ ಹೆಲಿಕಾಪ್ಟರ್ ಮೂಲಕ ಮೂರು ಬಾರಿ ಪುಷ್ಪಾರ್ಚನೆ ಮಾಡಲಾಗಿದ್ದು, ಆ ಅಪೂರ್ವ ದೃಶ್ಯವನ್ನು ಕಣ್ಣಾರೆ ಕಂಡ ಭಕ್ತರು ಭಕ್ತಿಭಾವದಿಂದ ಧನ್ಯತೆಯನ್ನು ವ್ಯಕ್ತಪಡಿಸಿದರು.

ಈ ಧಾರ್ಮಿಕ ಕಾರ್ಯಕ್ರಮದ ಪೂಜಾ ವಿಧಿ ವಿಧಾನಗಳನ್ನು ಜೈನ ಧರ್ಮಾಚಾರ್ಯ ಶ್ರೀ ದೇವೇಂದ್ರ ಸಾಗರ್ ಗುರೂಜಿ ಅವರ ತಂಡ ಶ್ರದ್ಧಾಭಕ್ತಿಯಿಂದ ನೆರವೇರಿಸಿತು. ರಾಜ್ಯದ ವಿವಿಧ ಭಾಗಗಳಿಂದ ಜೈನ ಸಮಾಜದ ಮುಖಂಡರು, ಯುವಕ ಯುವತಿಯರು, ವಿವಿಧ ಸಮುದಾಯಗಳ ಪ್ರತಿನಿಧಿಗಳು ಹಾಗೂ ರಾಜಕೀಯ ನಾಯಕರೂ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನಾಲ್ಕು ದಿನಗಳ ಮಹೋತ್ಸವದಲ್ಲಿ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ, ತಿಪಟೂರು ಕ್ಷೇತ್ರದ ಶಾಸಕ ಷಡಕ್ಷರಿ, ಮಾಜಿ ಶಾಸಕರಾದ ಕೆ.ಪಿ. ಪ್ರಭುಕುಮಾರ್, ಜಿ.ಎಸ್. ಪರಮೇಶ್ವರಪ್ಪ, ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷರಾದ ವಿದ್ಯಾಧರ್ ಮತ್ತು ಗಿರೀಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಶ್ರೀಭೈರವ ಧಾಮ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಶೋಕ್ ಸುರಾನಾ, ಟ್ರಸ್ಟ್ ಅಧ್ಯಕ್ಷ ಸುರೇಶ್ ಮೆಹ್ತಾ, ಮಂಗಿಲಾಲ್ ಮೆಹ್ತಾ, ರಮೇಶ್ ಪರಮಾರ್, ಧೀರಜ್ ಜೈನ್ (ದುಬೈ), ಟ್ರಸ್ಟ್ ಸದಸ್ಯರಾದ ಪಾರಸ್ ಮಲ್ ಮೆಹ್ತಾ, ಮನೋಹರ್, ಜ್ಞಾನೇಶ್ ಮೆಹ್ತಾ, ಕಮಲೇಶ್ ಸುರಾನಾ, ಜೈನ ಸಮಾಜದ ಅಧ್ಯಕ್ಷ ಮಹಾವೀರ ಬೋಹರ, ಶಾಂತರಾಜು ಜೈನ್ ಹಾಗೂ ಜೈನ ಸಂಘಟನೆ ಅಧ್ಯಕ್ಷ ಚೇತನ್ ಜೈನ್ ಮತ್ತಿತರರು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.