ಸಾರಾಂಶ
ಎನ್ಎಸ್ಎಸ್ ಉದ್ದೇಶವೇ ಸಮಾಜದ ಆಗುಹೋಗುಗಳಿಗೆ ತೊಡಗಿಸಿಕೊಳ್ಳುವುದು ಆಗಿದೆ
ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯಾರ್ಥಿಗಳು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ಬೀರಿಹುಂಡಿ ಬಸವಣ್ಣ ಕರೆ ನೀಡಿದರು.ಮೈಸೂರು ತಾಲೂಕು ಜಯಪುರ ಹೋಬಳಿ ಡಿ. ಸಾಲುಂಡಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಎಂಕೆ ಮತ್ತು ಎಸ್ ಡಿಎಂ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕವು ಆಯೋಜಿಸಿರುವ 7 ದಿನಗಳ ಎನ್ಎಸ್ಎಸ್ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ರಮದ ಜೀವನ ಮಾಡದೆ ಭೋಗ ಜೀವನ ಮಾಡುವುದನ್ನು ಹೋಗಲಾಡಿಸಲು ಯುವ ಪೀಳಿಗೆ ಪಾತ್ರ ಬಹಳ ಮುಖ್ಯ ಎಂದು ತಿಳಿಸಿದರು.ತಾಪಂ ಮಾಜಿ ಅಧ್ಯಕ್ಷ ಸಿ.ಎಂ. ಸಿದ್ಧರಾಮೇಗೌಡ ಮಾತನಾಡಿ, ಎನ್ಎಸ್ಎಸ್ ಉದ್ದೇಶವೇ ಸಮಾಜದ ಆಗುಹೋಗುಗಳಿಗೆ ತೊಡಗಿಸಿಕೊಳ್ಳುವುದು ಆಗಿದೆ. ಗ್ರಾಮದ ಜನತೆಗೆ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಿ, ತ್ಯಾಗ ಮನೋಭಾವನೆಯನ್ನು ಬೆಳೆಸಿಕೊಳ್ಳಿ ಎಂದರು.ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಗೀತಾ ಮಾತನಾಡಿ, ಎನ್ಎಸ್ಎಸ್ ಶಿಬಿರಗಳಲ್ಲಿ ಬೆಳೆಸಿಕೊಳ್ಳುವ ಸೇವಾ ಮನೋಭಾವವನ್ನು ಬದುಕಿನ ಅಳವಡಿಸಿಕೊಳ್ಳಬೇಕು. ನಿಜವಾಗಿ ಮನೆಯಿಂದಲೇ ಸೇವೆ ಆರಂಭವಾಗಬೇಕು. ಪರಿಸರದ ಬಗ್ಗೆ ಕಾಳಜಿ ಇರಬೇಕು. ಪರಿಸರವನ್ನು ಕಾಪಾಡುವಂತೆ ನಿಮ್ಮ ಸೇವೆ ಮುಂದುವರೆಯಲಿ. ಆರೋಗ್ಯದ ಕಡೆ ಗಮನವಹಿಸಿ ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಎಂಎಂಕೆ ಮತ್ತು ಎಸ್ ಡಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎನ್. ಭಾರತಿ ಮಾತನಾಡಿ, ಹಳ್ಳಿಯ ಅನುಭವ ಸಮಾಜ ಸೇವೆ ಮಾಡಲು, ಸಮಾಜಕ್ಕೆ ಕೊಡುಗೆ ನೀಡುವುದನ್ನು ನಿಮಗೆ ಕಲಿಸುವುದರ ಜೊತೆಗೆ ನಿಮ್ಮ ಸರ್ವತೋಮುಖ ಬೆಳವಣಿಗೆಗೆ ಇದು ಸಹಕಾರಿಯಾಗಿದೆ ಎಂದು ಹೇಳಿದರು.ಎನ್ಎಸ್ಎಸ್ ಸಂಯೋಜಕಿ ಅನಿತಾ ಪಿ. ಜಯರಾಮ್, ಸದಸ್ಯರಾದ ಡಾ.ಕೆ.ಎನ್. ಅರುಣ್ ಕುಮಾರ್, ಎಂ. ಪ್ರತಿಮಾ, ಭಾರ್ಗವಿ, ವಾಣಿ ಮೊದಲಾದವರು ಇದ್ದರು.