ಪಕ್ಷಾತೀತವಾಗಿ ಜನರಿಗೆ ಆತ್ಮವಿಶ್ವಾಸ ತುಂಬಬೇಕು

| Published : Sep 17 2024, 12:45 AM IST

ಸಾರಾಂಶ

ಹಳೆ ಮೈಸೂರು ಭಾಗದಲ್ಲಷ್ಟೇ ಅಲ್ಲದೇ ರಾಜ್ಯದೆಲ್ಲೆಡೆ ಇರುವ ಒಕ್ಕಲಿಗರ ಅಭಿವೃದ್ಧಿ ಹಾಗೂ ಸಂಘಟನೆಗಾಗಿ ಸಂಘ ಅಸ್ತಿತ್ವಕ್ಕೆ

ಕನ್ನಡಪ್ರಭ ವಾರ್ತೆ ಮೈಸೂರು

ಸಮಾಜಕ್ಕೆ ಸಮಸ್ಯೆಗಳು ಬಂದಾಗ ರಾಜಕಾರಣಿಗಳು ಪಕ್ಷಾತೀತವಾಗಿ ಹೋರಾಟ ಮಾಡುವ ಮೂಲಕ ಜನರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದು ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್ ಕರೆ ನೀಡಿದರು.

ನಗರದ ಕಲಾಮಂದಿರದಲ್ಲಿ ಸೋಮವಾರ ನಡೆದ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷರು ಮತ್ತು ಪದಾಧಿಕಾರಿಗಳ, ಜಿಲ್ಲಾಧ್ಯಕ್ಷರ ಪದಗ್ರಹಣ, 515ನೇ ನಾಡಪ್ರಭು ಕೆಂಪೇಗೌಡರ ಜಯಂತಿ, ವಿವಿಧ ಕ್ಷೇತ್ರಗಳ ಸಾಧಕರಿಗೆ ಶ್ರೀ ಡಾ. ಬಾಲಗಂಗಾಧರನಾಥಸ್ವಾಮಿ ಸೇವಾರತ್ನ ಪ್ರಶಸ್ತಿ ಪ್ರದಾನ ಹಾಗೂ ಆದರ್ಶ ಒಕ್ಕಲಿಗ ದಂಪತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಸಮಾಜ ವಿಚಾರ ಬಂದಾಗ ಯಾವುದೇ ಕ್ಷುಲ್ಲಕ ವಿಚಾರಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದೇ ಜನರಿಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ರಾಜಕಾರಣಿಗಳು ಪಕ್ಷಾತೀತವಾಗಿ ಮಾಡಬೇಕು. ಸಂಘ ಹಾಗೂ ಸಂಸ್ಥೆಗಳು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಹಳೆ ಮೈಸೂರು ಭಾಗದಲ್ಲಷ್ಟೇ ಅಲ್ಲದೇ ರಾಜ್ಯದೆಲ್ಲೆಡೆ ಇರುವ ಒಕ್ಕಲಿಗರ ಅಭಿವೃದ್ಧಿ ಹಾಗೂ ಸಂಘಟನೆಗಾಗಿ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಪಕ್ಷಭೇದ ಮರೆತು, ಎಲ್ಲಾ ಭಿನ್ನಾಭಿಪ್ರಾಯಗಳನ್ನ ಬದಿಗಿರಿಸಿ, ಎಲ್ಲರೂ ಒಗ್ಗಟ್ಟಾಗಿ ಸಮುದಾಯದ ಏಳಿಗೆಗೆ ಶ್ರಮಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಎಲ್ಲಾ ಸಮಾಜಗಳನ್ನು ಒಂದಾಗಿ ಕಂಡು ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡರು ಆದರ್ಶವಾಗಬೇಕು. ಅವರಿಂದಲೇ ಬೆಂಗಳೂರು ನಗರವು ವಿಶ್ವವಿಖ್ಯಾತವಾಗಿದೆ. ಹಾಗೆಯೇ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಆದಿಚುಂಚನಗಿರಿ ಮಠದೊಂದಿಗೆ ಸಮಾಜವನ್ನು ಕಟ್ಟಿದರು ಎಂದು ಅವರು ಸ್ಮರಿಸಿದರು.

ಮೂಲ ಅಸ್ಮಿತೆ ಮರೆಯಬಾರದು

ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಒಕ್ಕಲಿಗ ಸಮುದಾಯವು ಒಳಪಂಗಡಗಳಲ್ಲಿ ಹರಿದು ಹಂಚಿಹೋಗಿದೆ. ಉಪ ಪಂಗಡಗಳಲ್ಲಿ ಗುರುತಿಸಿಕೊಂಡ ಕಾರಣಕ್ಕೆ ಮೂಲ ಅಸ್ಮಿತೆ ಮರೆಯಬಾರದು. ಸಂಘವು ಉಪ ಪಂಗಡಗಳನ್ನು ಸಂಘಟಿಸುತ್ತಿರುವುದು ಶ್ಲಾಘನಿಯ ಎಂದರು.

ಸಮುದಾಯದ ಹೆಣ್ಣು ಮಕ್ಕಳು ಲವ್ ಜಿಹಾದ್ ಗೆ ಬಲಿಯಾದಂತಹ ಕೆಟ್ಟ ಘಟನೆಗಳೂ ನಡೆದಿವೆ. ಪೊರಕೆ ಕಡ್ಡಿಗಳು ಒಗ್ಗಟ್ಟಾಗಿದ್ದರೆ ಕಸವನ್ನು ತೆಗೆಯಬಹುದು. ಬಿಡಿ ಬಿಡಿಯಾದರೆ ಸವಾಲು ಎದುರಿಸಬೇಕಾಗುತ್ತದೆ. ಸಮುದಾಯ ವ್ಯಕ್ತಿ ಬೆಳೆಯುತ್ತಿದ್ದರೆ ಏಣಿಯಾಗಬೇಕು ಹೊರತು ಕಾಲೆಳೆಯುವ ಏಡಿಗಳಾಗಬಾರದು ಎಂದು ಅವರು ಸಲಹೆ ನೀಡಿದರು.

ಒಟ್ಟಾಗಿ ಬದುಕಬೇಕು

ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಎಲ್ಲರೂ ದ್ವೇಷ ಭಾವನೆ ಬಿಟ್ಟು ಒಟ್ಟಾಗಿ ಬದುಕಬೇಕು. ಆದಿಚುಂಚನಗಿರಿ ಮಠವು ಮಾವಿನ ವೃಕ್ಷವಾಗಿ ಬೆಳೆದಿದೆ.ಸಮಾಜದ ಸುಧಾರಣೆಗೆ ಸಂಘವು ಕಂಕಣ ಬದ್ಧವಾಗಿ ದಿಟ್ಟತ್ವ ಹೆಜ್ಜೆ ಇರಿಸಿರುವುದು ಹೆಮ್ಮೆಯಾಗಿದೆ ಎಂದು ಶ್ಲಾಘಿಸಿದರು.

ಇದಕ್ಕೂ ಮುನ್ನ ನಗರದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಿಂದ ಕಲಾಮಂದಿರವರೆಗೆ ಜಾನಪದ ಕಲಾ ತಂಡಗಳೊಂದಿಗೆ ಬೆಳ್ಳಿರಥದಲ್ಲಿ ನಾಡಪ್ರಭು ಕೆಂಪೇಗೌಡರ ಮೂರ್ತಿ ಮೆರವಣಿಗೆ ಮಾಡಲಾಯಿತು.

ಇದೇ ವೇಳೆ ಸಮುದಾಯದ ಮಕ್ಕಳಿಗೆ ನಾಡಪ್ರಭು ಶ್ರೀಕೆಂಪೇಗೌಡರ ವೇಷಭೂಷಣ ಸ್ಪರ್ಧೆ, ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ಸಮುದಾಯದ ರೈತರಿಗೆ 1001 ತೆಂಗಿನ ಸಸಿ ವಿತರಿಸಲಾಯಿತು.

ಪ್ರಶಸ್ತಿ ಪ್ರದಾನ

ಪ್ರೊ.ಆರ್. ಅನುರಾಧ ಪಟೇಲ್, ಎಂ.ಪಿ. ರಂಗಸ್ವಾಮಿ, ಡಾ.ಸಿ.ಪಿ. ಕೃಷ್ಣಕುಮಾರ್, ಡಿ. ಮಾದೇಗೌಡ, ಡಾ. ಶುಶ್ರುತಗೌಡ, ಡಾ.ಈ.ಸಿ. ನಿಂಗರಾಜ್ ಗೌಡ, ಲಿಂಗಪ್ಪ, ಶೈಲಾ ರವಿಕುಮಾರ್, ಸಿ. ನಾರಾಯಣಗೌಡ, ದೇವೇಗೌಡ, ಡಾ. ವಸಂತಕುಮಾರ್ ತಿಮಕಾಪುರ, ಎಸ್.ಪಿ. ಶಂಕರೇಗೌಡ, ಎಸ್. ದತ್ತೇಶ್ ಕುಮಾರ್, ಗೋಪಾಲಸ್ವಾಮಿ, ವಿ.ಸಿ. ರವಿಕುಮಾರ್, ಕೆ. ದಿನೇಶ್, ರಾಜುಗೌಡ, ಚಲುವರಾಜು, ರವಿ ಪಾಂಡವಪುರ ಮತ್ತು ಚಿತ್ರಕಲಾ ನಾಗರಾಜು ಅವರಿಗೆ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಸೇವಾರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಹಾಗೆಯೇ, ಉಮಾರಾಣಿ- ಸಿ.ವೈ. ಶಿವೇಗೌಡ, ಡಾ. ಲತಾ ರಾಜಶೇಖರ್- ಡಾ. ರಾಜಶೇಖರ್, ಶಾಂತಕುಮಾರಿ- ಎಚ್.ಎನ್. ಶ್ರೀಕಂಠಯ್ಯ, ಜಯಮ್ಮ- ಗೋವಿಂದೇಗೌಡ, ವಿಜಯ- ಮಂಜುನಾಥ್ ಹಾಗೂ ಉಮಾದೇವಿ- ಶಿವಶಂಕರ್ ಅವರಿಗೆ ಆದರ್ಶ ಒಕ್ಕಲಿಗ ದಂಪತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಾಸಕರಾದ ಕೆ. ಹರೀಶ್ ಗೌಡ, ಡಾ.ಸಿ.ಎನ್. ಅಶ್ವತ್ಥನಾರಾಯಣ್, ಸಿ.ಎನ್. ಮಂಜೇಗೌಡ, ಸಿ.ಪಿ. ಯೋಗೇಶ್ವರ್, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕರಾದ ಆರ್. ನರೇಂದ್ರ, ಡಿ. ಮಾದೇಗೌಡ, ಐಪಿಎಸ್ಅಧಿಕಾರಿ ಡಾ.ಎ.ಎನ್. ಪ್ರಕಾಶ್ ಗೌಡ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಎಂ.ಬಿ. ಮಂಜೇಗೌಡ, ಸಂಘದ ರಾಜ್ಯಾಧ್ಯಕ್ಷ ಸಿ.ಜಿ. ಗಂಗಾಧರ್ ಹಾಗೂ ಪದಾಧಿಕಾರಿಗಳು ಇದ್ದರು.

-----

ಕೋಟ್...

ರೈತ ಆತ್ಮವಿಶ್ವಾಸ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕಿದೆ. ಹಿಂದೂ ಧರ್ಮ ವಟವೃಕ್ಷವಾದರೆ ಒಕ್ಕಲಿಗ, ಕುರುಬ, ಲಿಂಗಾಯತ ಸೇರಿದಂತೆ ಎಲ್ಲಾ ಸಮುದಾಯಗಳು ಬಿಳಲುಗಳು. ಜಾತಿ ಹೆಸರಿನಲ್ಲಿ ಬೈದಾಗ ಪ್ರತಿಕ್ರಿಯೆ ಕೊಡುತ್ತಾರೆ. ಆದರೆ, ಹಿಂದೂ ಧರ್ಮದ ವಿಷಯ ಬಂದಾಗ ಮೌನಿಗಳಾಗುತ್ತಾರೆ.

- ಸಿ.ಟಿ. ರವಿ, ವಿಧಾನಪರಿಷತ್ ಸದಸ್ಯರು

----

ರಾಷ್ಟ್ರಕವಿ ಕುವೆಂಪು ಅವರ ಶಿಕ್ಷಣ ಪ್ರೇರಣೆ, ಬಾಲಗಂಗಾಧರನಾಥ ಸ್ವಾಮೀಜಿ ಅವರ ಸಂಘಟನೆಯ ಶಕ್ತಿಯಿಂದಾಗಿ ಸಮಾಜದ ಜನರು ಎಲ್ಲಾ ರಂಗದಲ್ಲೂ ಛಾಪು ಮೂಡಿಸಿದ್ದಾರೆ. ಅನಕ್ಷರಸ್ಥರೆಲ್ಲ ವಿದ್ಯಾವಂತರಾಗಿ ಸಂಘಟಿತರಾಗಲು ಸಾಧ್ಯವಾಯಿತು.

- ಕೆ. ಹರೀಶ್ ಗೌಡ, ಶಾಸಕರು

----

ಶ್ರಮಜೀವಿಗಳಾದ ಸಮಾಜದ ಜನರಿಗೆ ಫಲ ಸಿಗಬೇಕು. ಯಾವುದೇ ಕ್ಷೇತ್ರದಲ್ಲಿದ್ದರೂ ಪರಿಣತಿಹೊಂದಬೇಕು. ಜ್ಞಾನ, ಕೌಶಲಕ್ಕೆ ಆದ್ಯತೆ ನೀಡಬೇಕು.

- ಡಾ.ಸಿ.ಎನ್. ಅಶ್ವತ್ಥನಾರಾಯಣ್, ಶಾಸಕರು