ಬಂಡ್ರಾಳು ಗ್ರಾಮದಲ್ಲಿ ಪೊಂಪಯ್ಯತಾತ ಪಿರಮಿಡ್ ಕೇಂದ್ರ ಉದ್ಘಾಟನೆ

| Published : Apr 05 2024, 01:07 AM IST

ಸಾರಾಂಶ

ಬಂಡ್ರಾಳ್ ಮಠದ ಪೊಂಪಯ್ಯ ತಾತನವರ 32ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಪೊಂಪಯ್ಯ ತಾತ ಪಿರಾಮಿಡ್ ಕೇಂದ್ರ ಉದ್ಘಾಟನಾ ಸಮಾರಂಭ, ಧರ್ಮಸಭೆ, ಸಂಗೀತ, ನೃತ್ಯ, ಧ್ಯಾನ ಕಾರ್ಯಕ್ರಮ ಹಾಗೂ ಸಸ್ಯಾಹಾರ ಜಾಥಾ ನಡೆಯಿತು.

ಬಳ್ಳಾರಿ: ಸಿರುಗುಪ್ಪ ತಾಲೂಕಿನ ಬಂಡ್ರಾಳ್ ಗ್ರಾಮದ ಪೊಂಪಯ್ಯ ತಾತನವರ ಮಠದಲ್ಲಿ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು, ಶ್ರೀ ಪುಟ್ಟರಾಜ ಕವಿಗವಾಯಿಗಳು ಹಾಗೂ ಬಂಡ್ರಾಳ್ ಮಠದ ಪೊಂಪಯ್ಯ ತಾತನವರ 32ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಪೊಂಪಯ್ಯ ತಾತ ಪಿರಾಮಿಡ್ ಕೇಂದ್ರ ಉದ್ಘಾಟನಾ ಸಮಾರಂಭ, ಧರ್ಮಸಭೆ, ಸಂಗೀತ, ನೃತ್ಯ, ಧ್ಯಾನ ಕಾರ್ಯಕ್ರಮ ಹಾಗೂ ಸಸ್ಯಾಹಾರ ಜಾಥಾ ನಡೆಯಿತು.

ಸಮಾರಂಭದ ಸಾನಿಧ್ಯ ವಹಿಸಿದ್ದ ಸಿರುಗುಪ್ಪದ ಶ್ರೀ ಬಸವಭೂಷಣ ಸ್ವಾಮಿ ಮಾತನಾಡಿ, ಶ್ರೀ ಸಿದ್ಧಲಿಂಗ ಜಗದ್ಗುರುಗಳು, ಶ್ರೀ ಪುಟ್ಟರಾಜ ಕವಿಗವಾಯಿಗಳು ಹಾಗೂ ಪೊಂಪಯ್ಯ ತಾತನವರು ಸಮಾಜಮುಖಿಯಾಗಿ ಬದುಕಿದವರು. ಲೋಕದ ಹಿತದಲ್ಲಿ ತಮ್ಮ ಹಿತ ಕಂಡುಕೊಂಡವರು ಎಂದರು.

ಇಂತಹವರ ಹೆಸರಿನಲ್ಲಿ ಧ್ಯಾನ ಸಾಧನೆಗಾಗಿ ಪಿರಮಿಡ್ ನಿರ್ಮಿಸಿರುವುದು ಸಾರ್ಥಕದ ಕೆಲಸ ಎಂದರಲ್ಲದೆ, ಪೂಜ್ಯರ ಆದರ್ಶದಂತೆ ಪ್ರತಿಯೊಬ್ಬರು ಧರ್ಮವಂತರಾಗಿ ಧರ್ಮಮಾರ್ಗದಲ್ಲಿ ನಡೆಯಬೇಕೆಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ.ಎಚ್.ಎಂ. ಬಸವರಾಜ್, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು-ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಬೇಕು. ಪುಸ್ತಕ ಓದುವ ಸಂಸ್ಕೃತಿ ಬೆಳೆಸಬೇಕು. ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸನ್ಮಾರ್ಗ ಹಾದಿಯಲ್ಲಿ ನಡೆಯಬೇಕು ಎಂದು ಹೇಳಿದರು.

ಸಸ್ಯಾಹಾರ ಜಾಥಾವನ್ನು ಬಳ್ಳಾರಿಯ ಪಿರಾಮಿಡ್ ಮಾಸ್ಟರ್ ರಾಜೇಶ್ವರಿ ಅವರು ಚಾಲನೆ ನೀಡಿ ಮಾತನಾಡಿದರು. ಶ್ರೀ ಪುಟ್ಟರಾಜ ಕವಿ ಗವಾಯಿಗಳ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಟ್ರಸ್ಟ್ ನ ಬಂಡ್ರಾಳು ಮೃತ್ಯುಂಜಯಸ್ವಾಮಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೀರಶೈವ ಸಮಾಜದ ಗಣ್ಯರಾದ ಜಾಲಿಹಾಳ್ ಶ್ರೀಧರ್‌ಗೌಡ, ಎಚ್‌.ಕೆ.ಗೌರಿಶಂಕರಸ್ವಾಮಿ, ಕೋಳೂರು ಚಂದ್ರಶೇಖರ ಗೌಡ, ಎರ‍್ರಿಸ್ವಾಮಿ ಬೂದಿಹಾಳ ಮಠ, ಯೋಗ ಸಾಧಕರಾದ ವಿಜಯಲಕ್ಷ್ಮಿ, ಗೀತಾ ಯಾದವ್ ಉಪಸ್ಥಿತರಿದ್ದರು.

ಬಂಡ್ರಾಳು ಜಿ.ಮಲ್ಲನಗೌಡ ಗವಾಯಿ ಹಾಗೂ ಎಂ.ನಾಗಭೂಷಣ ಗವಾಯಿಗಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸಾನ್ವಿ ಕುರುಗೋಡು ಹಾಗೂ ಪಾವನಿ ಕುರುಗೋಡು ಅವರು ನೃತ್ಯ ಪ್ರದರ್ಶನ ನೀಡಿದರು. ಡಿ.ವಿರುಪಾಕ್ಷಪ್ಪ ದೇವಲಾಪುರ ತಬಲಾ ಸಾಥ್ ನೀಡಿದರು.

ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಚನ್ನಬಸವನಗೌಡ, ಟಿಎಚ್‌ಎಂ ಬಸವರಾಜ್, ಪಿರಾಮಿಡ್ ನಿರ್ಮಾಣ ಕಾರ್ಯದಲ್ಲಿ ಸೇವೆ ಸಲ್ಲಿಸಿದ ತಮಿಳುನಾಡಿನ ನಾಗರಾಜ್ ಹಾಗೂ ಚನ್ನಪ್ಪ ದಂಪತಿಯನ್ನು ಸನ್ಮಾನಿಸಲಾಯಿತು.

ಶಿಲ್ಪ ಜಡೇಶ್ ಕಾರ್ಯಕ್ರಮ ನಿರ್ವಹಿಸಿದರು.