ಅತ್ಯಾಡಿ: ‘ಪ್ರಣವ ಸೇತುವೆ’ ಲೋಕಾರ್ಪಣೆ

| Published : Aug 27 2024, 01:36 AM IST

ಸಾರಾಂಶ

ಪ್ರಣವ ಸೇತುವೆಯನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು. ಈ ಮೂಲಕ ಗ್ರಾಮಸ್ಥರ 30 ವರ್ಷಗಳ ಕನಸು ಸಾಕಾರಗೊಂಡಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಬೆಂಗಳೂರಿನ ಪ್ರಣವ್ ಫೌಂಡೇಶನ್, ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಯಾಡಿಯಲ್ಲಿ ನಿರ್ಮಿಸಿದ ‘ಪ್ರಣವ ಸೇತು’ ಸೇತುವೆಯನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು. ಈ ಮೂಲಕ ಗ್ರಾಮಸ್ಥರ 30 ವರ್ಷಗಳ ಕನಸು ಸಾಕಾರಗೊಂಡಿದೆ.

ಕೊಡಗು ಜಿಲ್ಲೆಯ, ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಯಾಡಿಯಲ್ಲಿ ಜೋರು ಮಳೆ ಬಂದರೆ ಉಂಬಾಳೆ ಹೊಳೆ ತುಂಬಿ ಹರಿದು ಇಡೀ ಗ್ರಾಮ ದ್ವೀಪವಾಗಿ ಬದಲಾಗುತ್ತದೆ. ಈ ಸಮಸ್ಯೆಯ ನಿವಾರಣೆಗೆ ಪ್ರಣವ್‌ ಫೌಂಡೇಶನ್‌ 2.50 ಲಕ್ಷ ರು. ವೆಚ್ಚದಲ್ಲಿ 24 ಮೀಟರ್ ಉದ್ದದ ಸೇತುವೆ ನಿರ್ಮಿಸಿದೆ. ತೂಗುಸೇತುವೆಗಳ ಸರದಾರ, ಪದ್ಮಶ್ರೀ ಗಿರೀಶ್‌ ಬಾರಧ್ವಾಜ್‌ ಅವರ ತಂಡ ಸೇತುವೆ ನಿರ್ಮಿಸಿದೆ.

ಕೊಡಗು ಜಿಲ್ಲೆಯ ಯಂಗ್‌ ಇಂಡಿಯನ್‌ ಫಾರ್ಮರ್ಸ್‌ ಅಸೋಸಿಯೇಶನ್‌, ಟೀಮ್‌ 12 ಆಫ್‌ ರೋಡರ್ಸ್‌ ಮತ್ತು ಮಲ್ನಾಡ್‌ ಯೂತ್‌ ಅಸೋಸಿಯೇಶನ್‌ನವರು ಸೇತುವೆ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಣವ್ ಫೌಂಡೇಶನ್ ಅಧ್ಯಕ್ಷ ರಾಕೇಶ್ ರೈ, ಕಾರ್ಯದರ್ಶಿ ನಾಗರಾಜ ಹೆಬ್ಬಾಳ್, ಟ್ರಸ್ಟಿಗಳಾದ ಎನ್.ನೇತ್ರ, ಮಹೇಶ್ ಕುಮಾರ್ ಮೇನಾಲ, ಮಂಜುನಾಥ ಭಟ್, ಕೆ.ಪಿ.ರಕ್ಷಿತ್, ಯೋಜನೆ ಸಂಯೋಜಕ ದೇವಿಪ್ರಸಾದ್ ಅತ್ಯಾಡಿ, ಯಂಗ್‌ ಇಂಡಿಯನ್‌ ಫಾರ್ಮರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಇದ್ದರು.

30 ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದೇವೆ. ಮಳೆಗಾಲದಲ್ಲಿ ಹೊಳೆ ದಾಟಲು ಬಹಳ ಕಷ್ಟವಾಗುತ್ತಿತ್ತು. ಬಿದಿರಿನ ಪಾಲವಿದ್ದರೂ, ಭಯದಿಂದ ಓಡಾಡಬೇಕಾಗಿತ್ತು. ಈಗ ಉಕ್ಕಿನ ಸೇತುವೆ ನಮಗೆ ದೊರೆತಿದೆ ಎಂದು ಸ್ಥಳೀಯ ಮಹಿಳೆ ಮನುಜ ತಿಳಿಸಿದರು.

ಮಳೆಗಾಲದಲ್ಲಿ ಬಿದಿರಿನ ಪಾಲ ಜಾರುತ್ತಿತ್ತು. ಉಕ್ಕಿನ ಸೇತುವೆಯಿಂದ ನಮ್ಮ ಗ್ರಾಮದ ವಿದ್ಯಾರ್ಥಿಗಳು, ಅಂಗವಿಕಲರು, ಹಿರಿಯ ನಾಗರಿಕರು ಓಡಾಡಲು ಅನುಕೂಲವಾಗಿದೆ ಎಂದು ವಿದ್ಯಾರ್ಥಿ ಸುತನ್ ತಿಳಿಸಿದರು.

ನಾನು ವಿಶೇಷಚೇತನ. ಈ ಹಿಂದೆ ಮರದ ದಿಮ್ಮಿಗಳ ಪಾಲ ಇದ್ದಾಗ ಓಡಾಡಲು ಕಷ್ಟವಾಗುತ್ತಿತ್ತು. ಉಕ್ಕಿನ ಗಟ್ಟಿ ಸೇತುವೆ ನಮಗೆ ದೊರೆತಿದೆ. ಇನ್ನು ಅಂಜಿಕೆ ಇಲ್ಲದೆ ಓಡಾಡಬಹುದು ಎಂದು ಸ್ಥಳೀಯ ನಿವಾಸಿ ನಿತ್ಯಾನಂದ ಹೇಳಿದರು.

ಪ್ರಣವ ಸೇತು ಬಗ್ಗೆ: ಅತ್ಯಾಡಿ ಗ್ರಾಮದಲ್ಲಿರುವ ಉಂಬಾಳೆ ಹೊಳೆಗೆ ಅಡ್ಡವಾಗಿ ಸೇತುವೆ ನಿರ್ಮಿಸಲಾಗಿದೆ.

ಉಕ್ಕಿನಿಂದ ಮಾಡಿರುವ ಸೇತುವೆ, ಉದ್ದ 24 ಮೀಟರ್‌, ಅಗಲ 0.75 ಮೀಟರ್‌, ಒಂದೇ ಬಾರಿಗೆ 10 ಜನರು ನಿಲ್ಲಬಹುದು, 5 ವರ್ಷ ಬಾಳಿಕೆ