ಸಾರಾಂಶ
ನಗರದ ಹೊರವಲಯದಲ್ಲಿರುವ ಕೆಂಚಟ್ಟಹಳಿಯಲ್ಲಿ ನಿರ್ಮಿಸಲಾಗಿರುವ ನಿವೃತ್ತ ಅರೆಸೇನಾ ಪಡೆ ಯೋಧರ ಭವನದ ಉದ್ಘಾಟನಾ ಸಮಾರಂಭವು ಫೆ.15ರಂದು ಬೆಳಿಗ್ಗೆ ೧೦:೩೦ಕ್ಕೆ ನೆರವೇರಲಿದೆ ಎಂದು ಅರೆಸೇನಾ ಪಡೆಯ ಸಂಘದ ಅಧ್ಯಕ್ಷ ಪಿ.ವಿ. ನಾಗೇಶ್, ಉಪಾಧ್ಯಕ್ಷ ಎಂ.ಜಿ. ರಮೇಶ್ ತಿಳಿಸಿದರು.
ಕನ್ನಡಪ್ರಭ ವಾರ್ತೆ, ಹಾಸನ
ನಗರದ ಹೊರವಲಯದಲ್ಲಿರುವ ಕೆಂಚಟ್ಟಹಳಿಯಲ್ಲಿ ನಿರ್ಮಿಸಲಾಗಿರುವ ನಿವೃತ್ತ ಅರೆಸೇನಾ ಪಡೆ ಯೋಧರ ಭವನದ ಉದ್ಘಾಟನಾ ಸಮಾರಂಭವು ಫೆ.15ರಂದು ಬೆಳಿಗ್ಗೆ ೧೦:೩೦ಕ್ಕೆ ನೆರವೇರಲಿದೆ ಎಂದು ಅರೆಸೇನಾ ಪಡೆಯ ಸಂಘದ ಅಧ್ಯಕ್ಷ ಪಿ.ವಿ. ನಾಗೇಶ್, ಉಪಾಧ್ಯಕ್ಷ ಎಂ.ಜಿ. ರಮೇಶ್ ತಿಳಿಸಿದರು. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಗುರುವಾರ ಸಂಜೆ ೬:೩೦ಕ್ಕೆ ಗಣಪತಿ ಪೂಜೆ, ಸ್ವಸ್ತ ಪುಣ್ಯಾಹ ವಾಚನ, ನವಗ್ರಹ ಪೂಜೆ, ಗಣಪತಿ ಹೋಮ, ನವಗ್ರಹ ಹೋಮ, ವಾಸ್ತು ಹೋಮ, ಅಘೋರ ಹೋಮ, ರಾಕ್ಷೆಗ್ನ ಹೋಮ ನಡೆಯಲಿದೆ. ಫೆ. ೧೪ರಂದು ಬೆಳಿಗ್ಗೆ ೬ ರಿಂದ ೭ ಗಂಟೆಯವರೆಗೂ ಕುಂಭ ಲಗ್ನದಲ್ಲಿ ಗೃಹಪ್ರವೇಶ, ಗಂಗೆ ಪೂಜೆ ಹಾಗೂ ಲಕ್ಷ್ಮೀ ಪೂಜೆ ನೆರವೇರಲಿದೆ. ಫೆ. ೧೫ರಂದು ಬೆಳಿಗ್ಗೆ ೧೦:೩೦ಕ್ಕೆ ಹಾಸನ ಜಿಲ್ಲಾ ಅರಸೇನಾ ಪಡೆ ನಿವೃತ್ತ ಯೋಧರ ನೂತನ ಭವನದ ಉದ್ಘಾಟನೆಯ ಸಮಾರಂಭ ಜರುಗಲಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭಾಗವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಸಂಸದ ಶ್ರೇಯಸ್ ಎಂ. ಪಟೇಲ್, ಶಾಸಕರಾದ ಎಚ್.ಡಿ. ರೇವಣ್ಣ, ಎಚ್.ಪಿ. ಸ್ವರೂಪ್, ಕೆ.ಎಂ. ಶಿವಲಿಂಗೇಗೌಡ, ಸಿ.ಎನ್. ಬಾಲಕೃಷ್ಣ, ಸಿಮೆಂಟ್ ಮಂಜು, ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ, ಎ. ಮಂಜು, ಎಚ್.ಕೆ. ಸುರೇಶ್, ಮಾಜಿ ಶಾಸಕ ಪ್ರೀತಂ ಜೆ. ಗೌಡ ಭಾಗವಹಿಸುವುದಾಗಿ ಹೇಳಿದರು.ಹಾಸನ ಜಿಲ್ಲಾ ಅರಸೇನಾ ಪಡೆ ನಿವೃತ್ತ ಯೋಧರ ಒಕ್ಕೂಟವು ನೋಂದಣಿ ಮಾಡಿಕೊಂಡು ಸಂಘವನ್ನು ಸ್ಥಾಪಿಸಲಾಯಿತು, ಈ ಜಿಲ್ಲಾ ಅರಸೇನಾ ಪಡೆಯಲ್ಲಿ ಬಿ.ಎಸ್.ಎಫ್. ಸಿ.ಆರ್.ಪಿ.ಎಫ್, ಸಿ.ಐ.ಎಸ್.ಎಫ್., ಐಟಿಬಿಪಿ, ಎಸ್.ಎಸ್.ಬಿ. ಅಸ್ಸಾಂ ರೈಫಲ್ ಎಲ್ಲಾ ನಿವೃತ್ತ ಯೋಧರು ಮತ್ತು ಕಾರ್ಯನಿರತ ಯೋಧರನ್ನೂಳಗೊಂಡ ಸಂಘವಾಗಿದೆ. ಸಂಘದಲ್ಲಿ ೭೫೦ ರಿಂದ ೮೦೦ ಯೋಧರು ಸದಸ್ಯತ್ವ ಹೊಂದಿದ್ದಾರೆ. ಎಲ್ಲಾ ರಕ್ಷಣಾ ಪಡೆಗಳು ಮಿನಿಸ್ಟರಿ ಆಫ್ ಹೋಮ್ ಅಫೇರ್ಸ್ ಅಧೀನದಲ್ಲಿ ಕೆಲಸ ಮಾಡುತ್ತವೆ. ಇವುಗಳ ಕರ್ತವ್ಯ ಬೇರೆ ಬೇರೆ ರೀತಿಯಲ್ಲಿ ಇರುತ್ತದೆ.ಭಾರತಾದಾದ್ಯಂತ ಎಲ್ಲಾ ರಾಜ್ಯದಲ್ಲೂ ಅರಸೇನಾ ಪಡೆಯ ಒಕ್ಕೂಟವನ್ನು ಸ್ಥಾಪಿಸಲಾಗಿದ್ದು, ಅವುಗಳಲ್ಲೆಲ್ಲಾ ನಮ್ಮ ರಾಜ್ಯದ ಹಾಸನ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಸಂಘದ್ದೇ ಆದ ಸ್ವಂತ ಕಟ್ಟಡವನ್ನು ಕಟ್ಟಲಾಗಿದೆ. ಸಮಾಜಮುಖಿಯಾಗಿ ಸಮಾಜಕ್ಕೆ ಮತ್ತು ನಿವೃತ್ತ ಹಾಗೂ ಹಾಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಶ್ರಮಿಸುವುದು ಹಾಗೂ ಸೇವಾನಿರತ ಯೋಧರಿಗೆ ಹೆಮ್ಮೆಯಿಂದ ದೇಶ ಸೆವೆ ಮಾಡಲು ಪ್ರೋತ್ಸಾಹಿಸುವುದು ಹಾಗೂ ಅವರ ಕುಟುಂಬದ ಸದಸ್ಯರ ಜೊತೆ ಅವರ ಕಷ್ಟ ಸುಖಕ್ಕೆ ಭಾಗಿಯಾಗಿದೆ ಎಂದರು.ಭಾರತೀಯ ಸೇನೆಯ ಯೋಧರಿಗೆ ನೀಡಿರುವ ಸೌಲಭ್ಯದಂತೆ ಅರಸೇನಾ ಪಡೆಗೂ ನೀಡಬೇಕೆಂದು ಮಾಡಿರುವ ಭಾರತ ಸರ್ಕಾರದ ಆದೇಶದ ಪ್ರಕಾರ ಕರ್ನಾಟಕ ಸರ್ಕಾರವು ಸಹ ಸೌಲಭ್ಯಗಳನ್ನು ನೀಡಬೇಕು. ಕ್ಯಾಂಟೀನ್‌ಗೆ ಭಾರತ ಸರ್ಕಾರ ನೀಡಿರುವ ಶೇ. ೫೦ ರಿಯಾಯಿತಿ ಪ್ರಕಾರ ಕರ್ನಾಟಕ ಸರ್ಕಾರವು ಕೊಡಬೇಕು, ಜಮೀನು ಮತ್ತು ಸೈಟುಗಳನ್ನು ನಮಗೂ ಮಂಜೂರು ಮಾಡಬೇಕು. ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆಯಲ್ಲಿ ನಮಗೂ ಸಹ ಮೀಸಲಾತಿ ನೀಡಬೇಕು. ಇನ್ನೂ ಇತರ ಸೌಲಭ್ಯಗಳನ್ನು ಸೇನಾ ಪಡೆಗಳಿಗೆ ದೊರಕುವ ರೀತಿಯಲ್ಲಿ ನಮಗೂ ವಿಸ್ತರಿಸಬೇಕು. ಅರಸೇನಾಪಡೆಯ ಸೈನಿಕ ಕಲ್ಯಾಣ ಬೋರ್ಡ್ ಘಟಿತವಾಗಬೇಕು. ದೇಶದಲ್ಲಿ ನಡೆಯುವ ಚುನಾವಣೆಯ ಸಂದರ್ಭದಲ್ಲಿ ಸುರಕ್ಷತೆ ಒದಗಿಸಬೇಕು ಎಂದು ಹೇಳಿದರು. ಅರೆಸೇನಾ ಪಡೆಯ ಸಂಘದ ಗೌರವಾಧ್ಯಕ್ಷ ನವಾಬ್ ಖಾನ್, ಉಪಾಧ್ಯಕ್ಷ ಎಂ.ಜಿ. ರಮೇಶ್, ನಾಗಪ್ಪ, ಯು. ನಾರಾಯಣಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ವಿಜಯಕುಮಾರ್ ಉಪಸ್ಥಿತರಿದ್ದರು.