ಸಾರಾಂಶ
ಹನೂರು: ತಾಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುದುರಾಮಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಆರ್.ನರೇಂದ್ರ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದರು.ನಂತರ ಮಾಜಿ ಶಾಸಕ ಆರ್ ನರೇಂದ್ರ ಮಾತನಾಡಿ, ಚಿಕ್ಕ ಗ್ರಾಮದಲ್ಲಿ ಅತೀ ದೊಡ್ಡದಾಗಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ನಿರ್ಮಾಣ ಮಾಡಿರುವುದು ಸಂತಸದ ವಿಚಾರ. ಯಾರನ್ನು ಅವಲಂಬಿಸದೆ ಕುಟುಂಬಸ್ಥರು ಹಾಗೂ ಕೆಲವು ದಾನಿಗಳ ಸಹಾಯದಿಂದ ಈ ಬೃಹತ್ ದೇವಸ್ಥಾನ ನಿರ್ಮಾಣ ಮಾಡಿರುವುದು ಶ್ಲಾಘನೀಯ ವಿಚಾರ. ಪ್ರತಿಯೊಬ್ಬರು ಮನಶಾಂತಿಗಾಗಿ ಹಾಗೂ ಕಷ್ಟ ಪರಿಹಾರಕ್ಕೆ ದೇವಸ್ಥಾನಕ್ಕೆ ಹೋಗುವುದು ವಾಡಿಕೆ. ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡುವುದು ತಪ್ಪಲ್ಲ, ಕ್ಷೇತ್ರದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ವಿದ್ಯಾವಂತರನ್ನಾಗಿ ಮಾಡಬೇಕು. ನೀವು ಅವರಿಗೆ ಯಾವುದೇ ಸಂಪಾದನೆ ಮಾಡದಿದ್ದರೂ ಶಿಕ್ಷಣ ಎಂಬ ಆಸ್ತಿಯನ್ನು ಅವರಿಗೆ ಕೊಡುಗೆಯಾಗಿ ನೀಡಬೇಕು. ಹಾಗಿದ್ದಾಗ ಅವರ ಜೀವನವನ್ನು ಅವರೇ ರೂಪಿಸಿಕೊಳ್ಳುತ್ತಾರೆ. ಇಲ್ಲದಿದ್ದರೆ ಕೂಲಿ ಕೆಲಸ ಮಾಡಿಕೊಂಡು ಕಷ್ಟದ ಪರಿಸ್ಥಿತಿ ಅನುಭವಿಸಬೇಕಾಗುತ್ತದೆ ಎಂದು ಸಲಹೆ ನೀಡಿದರು.
ವಿವಿಧ ದೇವಸ್ಥಾನಕ್ಕೆ ಭೇಟಿ:ತಾಲೂಕಿನ ಅಜ್ಜೀಪುರ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ಶನಿಮಹಾತ್ಮ ಹಾಗೂ ದೊಡ್ಡಿಂದುವಾಡಿ ಗ್ರಾಮದಲ್ಲಿ ನಿರ್ಮಾಣ ಮಾಡಿರುವ ವೆಂಕಟೇಶ್ವರ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಜಿಪಂ ಮಾಜಿ ಸದಸ್ಯ ಬಸವರಾಜು, ಹನೂರು ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ನಟರಾಜು, ಗುತ್ತಿಗೆದಾರ ನಾಗರಾಜು ಮುಖಂಡರಾದ ಮಣಿ, ಗ್ರಾಮಸ್ಥರು ಸೇರಿದಂತೆ ಇನ್ನಿತರರು ಗ್ರಾಮಸ್ಥರು ಹಾಜರಿದ್ದರು.