ಸಾರಾಂಶ
ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ೨೦೨೪ - ೨೫ನೇ ಸಾಲಿನ ವಿದ್ಯಾರ್ಥಿ ವೇದಿಕೆ ಉದ್ಘಾಟನೆ - ಪ್ರತಿಭಾ ದಿನಾಚರಣೆ - ವಾರ್ಷಿಕ ಸಂಚಿಕೆ ಬಿಡುಗಡೆ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ಕಾಪು
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ೨೦೨೪ - ೨೫ನೇ ಸಾಲಿನ ವಿದ್ಯಾರ್ಥಿ ವೇದಿಕೆ ಉದ್ಘಾಟನೆ - ಪ್ರತಿಭಾ ದಿನಾಚರಣೆ - ವಾರ್ಷಿಕ ಸಂಚಿಕೆ ಬಿಡುಗಡೆ ಸಮಾರಂಭ ನಡೆಯಿತು.ಮಾಜಿ ಶಾಸಕ ಲಾಲಾಜಿ ಮೆಂಡನ್ ಕಾರ್ಯಕ್ರಮ ಉದ್ಘಾಟಿಸಿ, ಕಾಲೇಜು ಬೆಳೆದು ಬಂದ ಬಗೆಯನ್ನು ಸವಿಸ್ತಾರವಾಗಿ ವಿವರಿಸಿ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಬಳಸಿಕೊಂಡು ಕಾಲೇಜಿಗೆ ಕೀರ್ತಿ ತರುವಂತೆ ಕರೆ ನೀಡಿದರು.ಮುಖ್ಯ ಅತಿಥಿಯಾಗಿದ್ದ ಕಟೀಲು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಶೆಟ್ಟಿ, ವಾರ್ಷಿಕ ಸಂಚಿಕೆ ‘ಹೊಂಬೆಳಕು’ ಬಿಡುಗಡೆ ಮಾಡಿ, ವಿದ್ಯಾರ್ಥಿ ಸಮುದಾಯ ಸಾಹಿತ್ಯದಂತಹ ಚಟುವಟಿಕೆಗಳನ್ನು ತೊಡಗಿಕೊಂಡು ಮಾದಕ ವ್ಯಸನದಿಂದ ದೂರ ಇರುವಂತೆ ಕಿವಿಮಾತು ಹೇಳಿದರು.ಕಾಲೇಜಿನ ಹಳೆವಿದ್ಯಾರ್ಥಿ ಕಾಪು ಪುರಸಭೆಯ ಅಧ್ಯಕ್ಷೆ ಹರಿಣಾಕ್ಷಿ ಅವರನ್ನು ಸನ್ಮಾನಿಸಲಾಯಿತು. ಪುರಸಭೆ ಸದಸ್ಯ ನಾಗೇಶ್ ಉಪಸ್ಥಿತರಿದರು.ಕಾಲೇಜಿನ ಪ್ರಾಂಶುಪಾಲ ಡಾ. ಗೋಪಾಲಕೃಷ್ಣ ಎಂ. ಗಾಂವ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ನಯನ ಎಲ್.ಎಂ. ನೂತನ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ‘ಹೊಂಬೆಳಕು’ ಸಂಪಾದಕಿ ದೀಪಿಕಾ ಸುವರ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿಗಳಾದ ಗೌರವ್ ಮತ್ತು ದಿಶಾ ಅತಿಥಿಗಳನ್ನು ಪರಿಚಯಿಸಿದರು, ರಿಷಿಕಾ ಕಾರ್ಯಕ್ರಮ ನಿರೂಪಿಸಿದರು. ನವಮಿ ಸ್ವಾಗತಿಸಿದರು. ಕವಿತಾ ವಂದಿಸಿದರು. ನಂತರ ಸಹಾಯಕ ಪ್ರಾಧ್ಯಾಪಕಿ ಡಾ. ಅಶ್ವಿತಾ ಎನ್. ಕರ್ಕೇರ ಅವರ ಮಾರ್ಗದರ್ಶನದಲ್ಲಿ ಪ್ರತಿಭಾ ದಿನಾಚರಣೆ ಜರುಗಿತು.