ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ
ಮಕ್ಕಳಲ್ಲಿ ಹುದುಗಿರುವ ಸೂಕ್ತ ಪ್ರತಿಭೆ ಬೆಳಕಿಗೆ ತರುವ ಪ್ರಯತ್ನಗಳಿಗೆ ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆಯಾಗಿದೆ. ಪ್ರತಿಭಾ ಕಾರಂಜಿ ಮೂಲಕ ಶಿಕ್ಷಣ ಹಾಗೂ ಪ್ರತಿಭೆಯೊಂದಿಗೆ ಉತ್ತಮ ನಾಗರಿಕರಾಗಿ ಹೊರಹೊಮ್ಮಲು ಅವಕಾಶವಾಗಿದೆ ಎಂದು ಸಂತ ಮೇರಿ ಶಾಲೆ ಮುಖ್ಯೋಪಾಧ್ಯಾಯ ಸೆಲ್ವರಾಜ್ ಹೇಳಿದ್ದಾರೆ.ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮಲ್ಲಿ ಹುದುಗಿರುವ ಸುಪ್ತ ಪ್ರತಿಭೆಗೆ ಪ್ರತಿಭಾ ಕಾರಂಜಿ ವೇದಿಕೆ ಬಳಸಬೇಕು ಎಂದು ಕಿವಿಮಾತು ಹೇಳಿದರು.ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ಸವಲತ್ತು ನೀಡುತ್ತಿದ್ದು, ಕೆಲವು ಸಂದರ್ಭಗಳಲ್ಲಿ ಅದು ವ್ಯರ್ಥವಾಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿರುವುದು ವಿಷಾದನೀಯ ಎಂದರು.ಕೆಲವು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳು ಶಾಲೆಯಿಂದ ದೂರ ಉಳಿದಿದ್ದು, ಶಿಕ್ಷಕರು ಅವರನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಇದೆ ಎಂದು ಸುನಿಲ್ ಕುಮಾರ್ ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಸಂತ ಮೇರಿ ಆಂಗ್ಲ ಮಾದ್ಯಮ ಶಾಲೆ ವ್ಯವಸ್ಥಾಪಕ ರೆ.ಫಾ.ವಿಜಯಕುಮಾರ್ ಮಾತನಾಡಿ, ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಪೋಷಕರು ಮತ್ತು ಶಿಕ್ಷಕರು ಪೂರ್ವ ಸಿದ್ಧತೆಯೊಂದಿಗೆ ಗುರುತಿಸಿ ಮಕ್ಕಳಿಗೆ ಪ್ರೋತ್ಸಾಹ ಮತ್ತು ಉತ್ತೇಜನ ನೀಡುವಂತಾಗಬೇಕು ಎಂದರು.
ಯಾವುದೇ ವಿದ್ಯಾರ್ಥಿ, ವಿದ್ಯಾರ್ಥಿನಿಯನ್ನು ಪೂರ್ವಾಗ್ರಹಪೀಡಿತರಾಗಿ ಕಾಣದೆ ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಬೇಕು ಎಂದು ಅವರು ಹೇಳಿದರು.ಗ್ರಾ.ಪಂ.ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯರಾದ ರಫೀಕ್ ಖಾನ್, ಪಿ.ಎಫ್. ಸಬಾಸ್ಟೀನ್, ವಸಂತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಶಿಕ್ಷಕಿ ಭಾಗೀರಥಿ, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಶೈಲಜಾ ಪ್ರೇಮ್ ಕುಮಾರ್, ಕ್ಲಸ್ಟರ್ ಅಧಿಕಾರಿ ಸೀಮಾ ಇದ್ದರು.