ಸಾರಾಂಶ
ಮೈಸೂರು :ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ 2167 ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಖಾಲಿಯಿದ್ದು, ಭರ್ತಿಗೆ ಕ್ರಮ ವಹಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿರುವುದಾಗಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಉಪಾಧ್ಯಕ್ಷ ಪ್ರೊ.ಎಸ್.ಆರ್. ನಿರಂಜನ ತಿಳಿಸಿದರು.
ನಗರದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ಜರುಗಿದ ಮೈಸೂರು ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘದ 2025ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಎಷ್ಟು ಹುದ್ದೆಗಳಿಗೆ ನೇಮಕಾತಿ ಆಗಬೇಕು, ಅದಕ್ಕೆ ಎಷ್ಟು ಹಣ ಹೊಂದಿಸಬೇಕೆಂಬುದನ್ನು ಸರ್ಕಾರ ಲೆಕ್ಕಾಚಾರ ಹಾಕುತ್ತಿದೆ. ಈ ಬಜೆಟ್ ನಲ್ಲಿ ಘೋಷಣೆ ಮಾಡುವರೇ ಎಂಬುದನ್ನು ಕಾದು ನೋಡಬೇಕಿದೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 5 ಸಾವಿರ ಸರ್ಕಾರಿ ಹುದ್ದೆಗಳನ್ನು ನೇಮಕಾತಿ ಮಾಡಲಾಗುವುದು ಎಂದಿದ್ದಾರೆ. ಅದರಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳೂ ಸೇರಿವೆ. ಹೀಗಾಗಿ, ಸಮಸ್ಯೆ ಈ ವರ್ಷದಲ್ಲೇ ಬಗೆಹರಿಯಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಮೈಸೂರು ವಿವಿಯಲ್ಲಿ ಶೇ.34 ರಷ್ಟು ಮಾತ್ರ ಪ್ರಾಧ್ಯಾಪಕರಿದ್ದು, ಹೆಚ್ಚುವರಿ ಕರ್ತವ್ಯ ಹೊರೆ ಅವರ ಮೇಲಿದೆ. ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲು ಖಾಲಿ ಇರುವ ಹುದ್ದೆ ಭರ್ತಿಗೆ ರಾಜ್ಯ ಸರ್ಕಾರವು ಕ್ರಮ ವಹಿಸಬೇಕಿದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿದರೆ, ಮೈಸೂರು ವಿವಿ ಹಳೆಯ ವೈಭವಕ್ಕೆ ಮರಳಲಿದೆ. ಸಂಶೋಧನೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ವಿವಿ ಮತ್ತಷ್ಟು ಪ್ರಗತಿ ಸಾಧಿಸಲಿದೆ ಎಂದು ತಿಳಿಸಿದರು.
ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ, ಕುಲಸಚಿವೆ ಎಂ.ಕೆ. ಸವಿತಾ, ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಸದಸ್ಯ ಪ್ರೊ.ಟಿ.ಡಿ. ಕೆಂಪರಾಜು, ಮೈಸೂರು ವಿವಿ ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಎಂ.ಪಿ. ಸದಾಶಿವ, ಉಪಾಧ್ಯಕ್ಷರಾದ ಪ್ರೊ. ರಾಜ್ ಕುಮಾರ್ ಎಚ್. ಗಾರಂಪಳ್ಳಿ, ಪ್ರೊ.ಆರ್. ಶೇಖರ ನಾಯ್ಕ್, ಜಂಟಿ ಕಾರ್ಯದರ್ಶಿ ಪ್ರೊ. ನವಿತಾ ತಿಮ್ಮಯ್ಯ, ಖಜಾಂಚಿ ಪ್ರೊ.ಎಚ್.ಪಿ. ಜ್ಯೋತಿ ಹಾಗೂ ನಿರ್ದೇಶಕರು ಇದ್ದರು.