ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 26ನೇ ನೂತನ ಶಾಖೆ ಶ್ರೀ ಪಾಡಿ ಇಗ್ಗುತ್ತಪ್ಪನ ನೆಲೆಯಾದ ಕಕ್ಕಬ್ಬೆಯಲ್ಲಿ ಜನ ಸೇವೆಗೆ ಲೋಕಾರ್ಪಣೆಗೊಂಡಿದೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 26ನೇ ನೂತನ ಶಾಖೆ ಶ್ರೀ ಪಾಡಿ ಇಗ್ಗುತ್ತಪ್ಪನ ನೆಲೆಯಾದ ಕಕ್ಕಬ್ಬೆಯಲ್ಲಿ ಜನ ಸೇವೆಗೆ ಲೋಕಾರ್ಪಣೆಗೊಂಡಿದ್ದು ಕಕ್ಕಬೆ ವ್ಯಾಪ್ತಿಯ ಗ್ರಾಹಕರು ನೂತನ ಶಾಖೆಯ ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಗ್ರಾಹಕರ ಸಹಕಾರದಿಂದ ಕಕ್ಕಬೆ ಶಾಖೆಯು ಕೊಡಗು ಡಿ ಸಿ ಸಿ ಬ್ಯಾಂಕಿನ ಅತ್ಯುತ್ತಮ ಶಾಖೆಗಳಲ್ಲಿ ಒಂದಾಗಬೇಕಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ನ ನಿರ್ದೇಶಕ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಅಧ್ಯಕ್ಷರಾದ ಕೊಡಂದೇರ ಪಿ ಗಣಪತಿ ಹೇಳಿದರು.ಕಕ್ಕಬ್ಬೆಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಬ್ಯಾಂಕಿನ 26 ನೇ ನೂತನ ಶಾಖೆಯ ಕಟ್ಟಡವನ್ನು ಲೋಕಾರ್ಪಣೆ ಮಾಡಿದ ಬಳಿಕ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಫೆಬ್ರವರಿ 25 ರ ಮಹಾಶಿವರಾತ್ರಿಯ ಶುಭದಿನದಂದು ಬ್ಯಾಂಕಿನ ಕುಶಾಲನಗರ ಶಾಖೆಯ ನೂತನ ಸ್ವಂತ ಕಟ್ಟಡವನ್ನುಉದ್ಘಾಟಿಸಲಾಗುವುದು. ಮುಂದಿನ 6 ತಿಂಗಳ ಒಳಗೆ 27 ನೇ ಶಾಖೆಯನ್ನು ಕುಶಾಲನಗರ ತಾಲೂಕಿನ ಗುಡ್ಡೆಹೊಸೂರುವಿನಲ್ಲಿ ಪ್ರಾರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಪೊನ್ನಂಪೇಟೆ ತಾಲೂಕಿನ ಕಾನೂರು, ಕುಶಾಲನಗರ ತಾಲೂಕಿನ ಕೂಡುಮಗಳೂರು, ಚೆಟ್ಟಳ್ಳಿ, ಹಾಗೂ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ದಲ್ಲಿ ಮತ್ತಷ್ಟು ಶಾಖೆಗಳನ್ನು ತೆರೆಯಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನವನ್ನು ಕೈಗೊಂಡು ಅನುಮತಿಗಾಗಿ ಆರ್ ಬಿ ಐ ಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಈ ಮೂಲಕ ಜಿಲ್ಲಾ ಬ್ಯಾಂಕಿನ ಶಾಖೆಗಳನ್ನು ಜಿಲ್ಲೆಯಾದ್ಯಂತ ತೆರೆದು ಬ್ಯಾಂಕಿಂಗ್ ಸೇವೆಯನ್ನು ಜಿಲ್ಲೆಯ ಜನತೆಯ ಕೈಗೆಟುಕುವಂತೆ ಮಾಡಲಾಗುವುದು ಎಂದರು.ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ:
ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದ ಅಧ್ಯಕ್ಷ ಕಲ್ಯಾಟಂಡ ಎ. ತಮ್ಮಯ್ಯ ಮಾತನಾಡಿ, ಕಕ್ಕಬ್ಬೆಯಲ್ಲಿ ಬ್ಯಾಂಕಿನ ಶಾಖೆ ತೆರೆದಿರುವುದು ಈ ಭಾಗದ ಜನರಿಗೆ ಅನುಕೂಲವಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡು ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿಕೊಂಡರು.ನಬಾರ್ಡ್‌ನ ನಿವೃತ್ತ ಜಿಲ್ಲಾ ವ್ಯವಸ್ಥಾಪಕ ಮುಂಡಂಡ ಸಿ ನಾಣಯ್ಯ ಮಾತನಾಡಿ, ಕೊಡಗಿನಂತಹ ಚಿಕ್ಕ ಜಿಲ್ಲೆಯಲ್ಲಿ ಕೊಡಗು ಡಿಸಿಸಿ ಬ್ಯಾಂಕ್ ಅದ್ಬುತ ಸಾಧನೆ ಮಾಡಿದ್ದು, ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಮತ್ತು ಕೊಡಗಿನ ಗ್ರಾಹಕರೇ ಕಾರಣ ಎಂದರು.ಕೊಡಗು ಜಿಲ್ಲೆಯಲ್ಲಿ ಮೊದಲ ಬಾರಿಗೆ ಸೋಮವಾರಪೇಟೆ ತಾಲೂಕಿನ ತಲ್ತರೆಶೆಟ್ಟಳ್ಳಿಯಲ್ಲಿ ಮೊದಲ ಸಹಕಾರ ಸಂಘವನ್ನು ಶ್ರೀ.ಕುರಾದಗೌಡ್ನ ಮನೆ ಪಿ ದೊಡ್ಡಯ್ಯನವರು ಸ್ಥಾಪಿಸಿದ್ದು, ಇದರ ಸವಿ ನೆನಪಿಗಾಗಿ, ಅವರ ಭಾವಚಿತ್ರ ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು. ನಾಪೋಕ್ಲು ಕಕ್ಕಬ್ಬೆ ಮತ್ತು ನೆಲಜಿ ಸಹಕಾರ ಸಂಘಗಳಿಗೆ ಸಾಂಕೇತಿಕವಾಗಿ ವಿತರಿಸಲಾಯಿತು .ನೂತನ ಶಾಖೆಯ ಭದ್ರತಾ ಕೊಠಡಿಯನ್ನು ಉಪಾಧ್ಯಕ್ಷ ಕೆ. ಎಸ್. ಹರೀಶ್ ಪೂವಯ್ಯ ಉದ್ಘಾಟಿಸಿದರು. ನಗದು ಕೌಂಟರಿನ ಉದ್ಘಾಟನೆಯನ್ನು ಕಲ್ಯಾಟಂಡ ಮುತ್ತಪ್ಪ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಳೆಯಂಡ ಯು ರಾಬಿನ್ ದೇವಯ್ಯ ಮಾತನಾಡಿ ಶುಭ ಹಾರೈಸಿದರು, ಈ ಸಂದರ್ಭ ವಿವಿಧ ಸಹಕಾರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು , ಸಂಘ ಸಂಸ್ಥೆಗಳ ಪದಾಧಿಕಾರಿಗಳು ಚುನಾಯಿತ ಪ್ರತಿನಿಧಿಗಳು, ಸಂಸ್ಥೆಯ ಸಿಬ್ಬಂದಿ, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ನಗಿನ ಮತ್ತು ಗಾಯನ ಪ್ರಸ್ತಾಪಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಕೆ. ಎಸ್. ಹರೀಶ್ ಪೂವಯ್ಯ ಸ್ವಾಗತಿಸಿದರು. ಬ್ಯಾಂಕಿನ ನಿರ್ದೇಶಕರಾದ ಹೊಸೂರು ಜೆ. ಸತೀಶ್ ಕುಮಾರ್ ವಂದಿಸಿದರು.