ಸಾರಾಂಶ
ಉಡುಪಿ ಯಕ್ಷಗಾನ ಕಲಾರಂಗ ಸಂಸ್ಥೆ ಕಾರ್ಕಳದ ಕೆರ್ವಾಶೆಯಲ್ಲಿ ವಿದ್ಯಾಪೋಷಕ್ ವಿದ್ಯಾರ್ಥಿನಿ ಸಾಕ್ಷಿ ಶೆಟ್ಟಿಗೆ ಉಡುಪಿಯ ರಾಮಚಂದ್ರ ವಿ. ನಾಯಕ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ‘ಶ್ರೀರಾಮಚಂದ್ರ ನಿಲಯ’ ಮನೆಯನ್ನು ಉದ್ಘಾಟಿಸಲಾಯಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಉಡುಪಿ ಯಕ್ಷಗಾನ ಕಲಾರಂಗ ಸಂಸ್ಥೆ ೨೦೧೨ರಿಂದ ವಿದ್ಯಾಪೋಷಕ್ ವಿದ್ಯಾರ್ಥಿಗಳು ಮತ್ತು ಯಕ್ಷಗಾನ ಕಲಾವಿದರಿಗೆ ಮನೆ ನಿರ್ಮಿಸಿ ಕೊಡುತ್ತಾ ಬಂದಿದ್ದು, ಕಾರ್ಕಳದ ಕೆರ್ವಾಶೆಯಲ್ಲಿ ವಿದ್ಯಾಪೋಷಕ್ ವಿದ್ಯಾರ್ಥಿನಿ ಸಾಕ್ಷಿ ಶೆಟ್ಟಿಗೆ ಉಡುಪಿಯ ರಾಮಚಂದ್ರ ವಿ. ನಾಯಕ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ‘ಶ್ರೀರಾಮಚಂದ್ರ ನಿಲಯ’ ಮನೆಯನ್ನು ಉದ್ಘಾಟಿಸಲಾಯಿತು.ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರಾಣಪ್ರತಿಷ್ಠೆ ನಡೆಯುತ್ತಿರುವ ಸಂದರ್ಭದಲ್ಲಿ ಸಂಸ್ಥೆ ನಿರ್ಮಿಸಿದ ಈ ಮನೆಯನ್ನು ಕಾರ್ಕಳದ ಶಾಸಕ ಸುನಿಲ್ ಕುಮಾರ್ ಉದ್ಘಾಟಿಸಿ, ಈ ಪರ್ವ ಕಾಲದಲ್ಲಿ ಮನೆ ಹಸ್ತಾಂತರಿಸಿದ ಮನೆಯ ಪ್ರಾಯೋಜಕರು, ಯಕ್ಷಗಾನ ಕಲಾರಂಗದ ಅಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳು ಅಭಿನಂದನಾರ್ಹರು. ದೇಶದ ಎಲ್ಲಾ ಕಡೆ ಇಂತಹ ಪ್ರಯತ್ನ ನಡೆದಾಗ ರಾಮರಾಜ್ಯದ ಕನಸು ನನಸಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಬ್ಯಾಂಕ್ ಅಧಿಕಾರಿ ವೈಜಯಂತಿ ಕಾಮತ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಈ ಸಂದರ್ಭ ಹಿರಿಯರಾದ ಯು. ವಿಶ್ವನಾಥ ಶೆಣೈ, ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ.ಜಿ. ಶೆಟ್ಟಿ, ಪಂಚಾಯಿತಿ ಅಧ್ಯಕ್ಷೆ ಸುನೀತಾ, ಉಪಾಧ್ಯಕ್ಷರಾದ ಸುನಿಲ್ ಶೆಟ್ಟಿ, ಸಂಸ್ಥೆಯ ಸದಸ್ಯರಾದ ಅನಂತರಾಜ ಉಪಾಧ್ಯ, ಕೆ. ಅಜಿತ್ ಕುಮಾರ್, ಕಿಶೋರ್ ಉಪಸ್ಥಿತರಿದ್ದರು.ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಎಚ್.ಎನ್. ಶೃಂಗೇಶ್ವರ ಸಹಕರಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.
ಜಿಲ್ಲೆಯ ವಿವಿಧ ಕಡೆಗಳಲ್ಲಿ ವಿದ್ಯಾರ್ಥಿ ಪೋಷಕ್ ವಿದ್ಯಾರ್ಥಿಗಳಿಗಾಗಿ ದಾನಿಗಳ ನೆರವಿನಿಂದ ಇನ್ನೂ ೧೦ ಮನೆಗಳು ನಿರ್ಮಾಣ ಹಂತದಲ್ಲಿದ್ದು, ಇನ್ನೆರಡು ತಿಂಗಳಲ್ಲಿ ಹಸ್ತಾಂತರಗೊಳ್ಳಲಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.