ಚಿಕ್ಕಮಗಳೂರುಚಿಕ್ಕಮಗಳೂರು ನಗರದಲ್ಲಿ ₹7.49 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಅರಣ್ಯ ಭವನ ಸಂಕೀರ್ಣವನ್ನು ಅ. 27ರಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರಿಂದ ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.
- ಶಾಸಕ ಎಚ್.ಡಿ. ತಮ್ಮಯ್ಯ ಮಾಹಿತಿ । ಸಂಕೀರ್ಣಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಚಿಕ್ಕಮಗಳೂರು ನಗರದಲ್ಲಿ ₹7.49 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಅರಣ್ಯ ಭವನ ಸಂಕೀರ್ಣವನ್ನು ಅ. 27ರಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರಿಂದ ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.ಲೋಕಾರ್ಪಣೆ ಹಿನ್ನೆಲೆಯಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ, ವಿಧಾನ ಪರಿಷತ್ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭಾನುವಾರ ಸಂಕೀರ್ಣಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ತಮ್ಮಯ್ಯ, ಅರಣ್ಯ ಭವನ ಸಂಕೀರ್ಣ ನಿರ್ಮಾಣಕ್ಕೆ 2022ರಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತಿತ್ತು. ಅ. 29ರಂದು ಟೆಂಡರ್ ಪ್ರಕ್ರಿಯೆ ಹಾಗೂ ತಾಂತ್ರಿಕ ಅನುಮೋದನೆ ಪೂರ್ಣ ಗೊಂಡಿತ್ತು. 2023ರ ಅ. 20ರಂದು ಶಂಕುಸ್ಥಾಪನೆ ನೆರವೇರಿಸಿ, ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು ಎಂದರು.ಆರಂಭದಲ್ಲಿ ಅನುದಾನದ ಕೊರತೆಯಿಂದ ಕಾಮಗಾರಿಗೆ ಅಡ್ಡಿಯಾಗಿತ್ತು. ಬಳಿಕ ಅರಣ್ಯ ಸಚಿವರು ಹಾಗೂ ಹಿರಿಯ ಅಧಿ ಕಾರಿಗಳ ಸಹಕಾರದಿಂದ ಹಂತ ಹಂತವಾಗಿ ಅನುದಾನ ಬಿಡುಗಡೆಯಾಗಿ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ ಎಂದರು.2023-24ನೇ ಸಾಲಿನಲ್ಲಿ ₹93.19 ಲಕ್ಷ, 2024-25ನೇ ಸಾಲಿನಲ್ಲಿ ₹53 ಲಕ್ಷ, 2025-26ನೇ ಸಾಲಿನಲ್ಲಿ ₹453 ಲಕ್ಷ ಹಾಗೂ 2026-27ನೇ ಸಾಲಿನಲ್ಲಿ ₹308 ಲಕ್ಷ ಅನುದಾನ ಬಿಡುಗಡೆಯಾಗಿದೆ. ಜಿಎಸ್ಟಿ ಸೇರಿದಂತೆ ಒಟ್ಟು ₹908 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಜಿಎಸ್ಟಿ ಹೊರತುಪಡಿಸಿ ಕಾಮಗಾರಿ ಅಂದಾಜು ವೆಚ್ಚ ₹749.49 ಲಕ್ಷವಾಗಿದೆ ಎಂದು ವಿವರಿಸಿದರು.ಒಂದೇ ಸೂರಿನಡಿ ಅರಣ್ಯ ಇಲಾಖೆ ಕಚೇರಿಗಳು: ನಗರದ ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದ ಅರಣ್ಯ ಇಲಾಖೆ ಕಚೇರಿಗಳು ಒಂದೇ ಸಂಕೀರ್ಣದಡಿ ಕಾರ್ಯನಿರ್ವಹಿಸಲಿವೆ. ಇದರಿಂದ ಸಾರ್ವಜನಿಕರು ವಿವಿಧ ಅಧಿಕಾರಿಗಳನ್ನು ಭೇಟಿಯಾಗಲು ಬೇರೆ ಬೇರೆ ಸ್ಥಳಗಳಿಗೆ ಅಲೆದಾಡುವುದು ತಪ್ಪಲಿದೆ. ಅರಣ್ಯ ಇಲಾಖೆಗೆ ಸಂಬಂಧಿಸಿದ ಸೇವೆಗಳನ್ನು ಒಂದೇ ಸ್ಥಳದಲ್ಲಿ ಪಡೆಯಲು ಅನುಕೂಲವಾಗಲಿದೆ. ಕಟ್ಟಡ ಉತ್ತಮ ಗುಣಮಟ್ಟದಲ್ಲಿ ನಿರ್ಮಾಣಗೊಂಡಿದ್ದು, ಜಿಲ್ಲೆಯ ಅಭಿವೃದ್ಧಿಗೆ ಮತ್ತೊಂದು ಉತ್ತಮ ಕಟ್ಟಡ ಸೇರ್ಪಡೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.ಅ. 27ರಂದು ಉದ್ಘಾಟನಾ ಕಾರ್ಯಕ್ರಮದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ಹಾಗೂ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ. ಅ. 28ರಿಂದ ಸಂಕೀರ್ಣದಲ್ಲಿನ ಕಚೇರಿಗಳು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ, ಸಿಡಿಎ ಅಧ್ಯಕ್ಷ ಮಂಜೇಗೌಡ, ಸಿಸಿಎಫ್ ಯಶ್ ಪಾಲ್ ಕ್ಷೀರಸಾಗರ್, ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಪುಲಕಿತ್ ಮೀನಾ, ಡಿಸಿಎಫ್ ಕೆ.ಟಿ. ಬೋರಯ್ಯ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸಿ. ಆನಂದ್, ಎಸಿಎಫ್ ಚರಣ್ ಚಂಗಪ್ಪ, ಆರ್ಎಫ್ಒಗಳಾದ ಹರೀಶ್, ರಜಾಕ್ ನಡಪ್, ದೀಪಕ್ ಹಾಗೂ ಕಾಂಗ್ರೆಸ್ ಮುಖಂಡರಾದ ಪ್ರವೀಣ್ ಬೆಟಗೆರೆ, ಮಲ್ಲೇಶ್ ಸ್ವಾಮಿ, ಶಿವಕುಮಾರ್ ಉಪಸ್ಥಿತರಿದ್ದರು.