ಸೇತುವೆ ಕಾಮಗಾರಿ ಪೂರ್ಣಗೊಂಡ ಹಲವು ವರ್ಷಗಳು ಮುಗಿದರೂ ಉದ್ಘಾಟನೆ ಮಾಡಿಲ್ಲ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಸೇತುವೆ ಬಳಿ ಕಿರಿದಾದ ರಸ್ತೆ ಇರುವುದರಿಂದ ವಾಹನಗಳು ಓಡಾಡಲು ಸಾಕಷ್ಟು ತೊಂದರೆಯಾಗುತ್ತಿದೆ. ಹಲವು ಅಪಘಾತಗಳು ಸಹ ಸಂಭವಿಸುತ್ತಿವೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಬನಘಟ್ಟ ಬಳಿ ಶ್ರೀರಂಗಪಟ್ಟಣ-ಜೇವರ್ಗಿ ಮುಖ್ಯರಸ್ತೆಗೆ ನಿರ್ಮಿಸಿ ಸೇತುವೆ ಉದ್ಘಾಟಿಸಬೇಕು, ಪಟ್ಟಣದ ಡಾ.ರಾಜ್ ಕುಮಾರ್ ವೃತ್ತದಲ್ಲಿ ಸೂಚನ ಫಲಕ ಅಳವಡಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಪಟ್ಟಣದ ಡಾ.ರಾಜ್ ಕುಮಾರ್ ವೃತ್ತದಲ್ಲಿ ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ನೇತೃತ್ವದಲ್ಲಿದ ಸೇರಿದ ಕಾರ್ಯಕರ್ತರು, ಸಾರ್ವಜನಿಕರು ಮುಖ್ಯ ರಸ್ತೆಯಲ್ಲಿಯೇ ನಿಂತು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪುರಸಭೆ ಮುಖ್ಯಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪ್ರತಿಭಟನೆ ನಡೆಸಿದರು.

ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ಮಾತನಾಡಿ, ಪಟ್ಟಣದ ಮೂಲಕ ಹಾದು ಹೋಗಿರುವ ಶ್ರೀರಂಗಪಟ್ಟಣ - ಜೇವರ್ಗಿ ಮುಖ್ಯ ರಸ್ತೆಗೆ ತಾಲೂಕಿನ ಬನಘಟ್ಟದ ಬಳಿ ನಿರ್ಮಾಣ ಮಾಡಲಾಗಿರುವ ಸೇತುವೆ ಕಾಮಗಾರಿ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೇತುವೆ ಕಾಮಗಾರಿ ಪೂರ್ಣಗೊಂಡ ಹಲವು ವರ್ಷಗಳು ಮುಗಿದರೂ ಉದ್ಘಾಟನೆ ಮಾಡಿಲ್ಲ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಸೇತುವೆ ಬಳಿ ಕಿರಿದಾದ ರಸ್ತೆ ಇರುವುದರಿಂದ ವಾಹನಗಳು ಓಡಾಡಲು ಸಾಕಷ್ಟು ತೊಂದರೆಯಾಗುತ್ತಿದೆ. ಹಲವು ಅಪಘಾತಗಳು ಸಹ ಸಂಭವಿಸುತ್ತಿವೆ ಎಂದು ಕಿಡಿಕಾರಿದರು.

ಸೇತುವೆ ಕಾಮಗಾರಿಯೂ ಗುಣಮಟ್ಟದಿಂದ ಕೂಡಿದೆಯೋ ಇಲ್ಲವೋ ಎನ್ನುವುದರ ಬಗ್ಗರ ಸ್ಪಷ್ಟವಾದ ಮಾಹಿತಿಯೇ ಇಲ್ಲ. ಅಧಿಕಾರಿಗಳು ಸ್ಪಷ್ಟವಾದ ಮಾಹಿತಿ ನೀಡಿ ಉದ್ಘಾಟನೆ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಪಟ್ಟಣದ ಡಾ.ರಾಜ್ ಕುಮಾರ್ ವೃತ್ತದಲ್ಲಿ ಜೇವರ್ಗಿ ಹೆದ್ದಾರೆ ಹೋಗುವ ರಸ್ತೆಗೆ ಸರಿಯಾದ ಸೂಚನ ನಾಮಫಲಕ ಅಳವಡಿಕೆ ಮಾಡದ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ವಾಹನ ಸವಾರರಿಗೆ ಸ್ಪಷ್ಟವಾದ ಮಾಹಿತಿ ಕೊರತೆಯಿಂದಾಗ ನೇರವಾಗಿ ಪಟ್ಟಣದ ಒಳಗೆ ಹೋಗಿ ಟ್ರಾಫಿಕ್ ಸಮಸ್ಯೆ ಉಂಟು ಮಾಡುತ್ತಿದೆ. ಹಾಗಾಗಿ ನಾಮಫಲಕ ಅಳವಡಿಕೆ ಮಾಡಬೇಕು. ಜೊತೆಗೆ ಬನಘಟ್ಟದಿಂದ ಕಿರಂಗೂರಿನವರೆಗೆ ನಡೆಯುತ್ತಿರುವ ಕಾಮಗಾರಿಯನ್ನೂ ಶೀಘ್ರವೇ ಮುಕ್ತಾಯ ಮಾಡಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಡಾ.ರಾಜ್ ಕುಮಾರ್ ವೃತ್ತದಲ್ಲಿ ಸೂಚನಾ ನಾಮಫಲಕವನ್ನು 15 ದಿನದೊಳಗೆ ಅಳವಡಿಸಿಕೊಡುವುದಾಗಿ ಭರವಸೆ ನೀಡಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಇಇಗಳಾದ ಸುಮಿತ, ಉಜ್ಜನ್ ಕೊಪ್ಪ ಅವರು ಆಗಮಿಸಿ ಬನಘಟ್ಟ ಬಳಿ ನಿರ್ಮಾಣ ಮಾಡಲಾಗಿರುವ ಸೇತುವೆಯನ್ನು ಶೀಘ್ರವೇ ಉದ್ಘಾಟಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಕುಮಾರಸ್ವಾಮಿ, ಬಿ.ಟಿ.ಶಿವಣ್ಣ, ಆನಂದ, ನರಸಿಂಹ, ಸ್ವಾಮಿ, ವಿಠಲ್, ಮಧು ಸೂದನ್ ಸೇರಿದಂತೆ ಹಲವರು ಹಾಜರಿದ್ದರು.