ಸಾರಾಂಶ
ಉತ್ತಮ ವಕೀಲ, ಕಾನೂನು ಸಲಹೆಗಾರ ಆಗಬೇಕಾದರೇ ಎಲ್ಲರೊಂದಿಗೆ ಸಂವಹನ ನಡೆಸುವುದು,
ಕನ್ನಡಪ್ರಭ ವಾರ್ತೆ ಮೈಸೂರು
ಕಾನೂನು ವಿದ್ಯಾರ್ಥಿಗಳು ಉತ್ತಮ ವಕೀಲರಾಗಲು ಮಾತುಗಾರಿಕೆ ಹಾಗೂ ಸಂವಹನ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಸಲಹೆ ನೀಡಿದರು.ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನ 2024- 25ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ವಕೀಲ, ಕಾನೂನು ಸಲಹೆಗಾರ ಆಗಬೇಕಾದರೇ ಎಲ್ಲರೊಂದಿಗೆ ಸಂವಹನ ನಡೆಸುವುದು, ಅಬಾಲವೃದ್ಧರಾಗಿ ಎಲ್ಲರೊಂದಿಗೆ ಬೆರೆಯುವುದು ಬಹಳ ಮುಖ್ಯ. ಇದರೊಂದಿಗೆ ಮಾತುಗಾರಿಕೆಯೂ ಅಗತ್ಯ. ಈ ಗುಣಗಳನ್ನು ರೂಢಿಸಿಕೊಳ್ಳಬೇಕಾದರೆ ವಿದ್ಯಾರ್ಥಿ ಜೀವನದಲ್ಲೇ ಕಲಿಯುವಿಕೆ ಶುರು ಮಾಡಬೇಕು ಎಂದರು.ಮೊದಲಿಗೆ ಮನೆಯಲ್ಲಿ ಇರುವ ಹಿರಿಯರು, ಸಹೋದರ ಸಂಬಂಧಿಗಳ ಜೊತೆ, ಚಿಕ್ಕ ಮಕ್ಕಳ ಜೊತೆ ಮಾತನಾಡಿ, ಅವರೊಂದಿಗೆ ಹರಟೆ ಹೊಡೆಯರಿ. ಕಾರ್ಯಕ್ರಮ, ಸಮಾರಂಭಗಳಿಗೆ ಹೋದಾಗ ಅಲ್ಲಿ ಸಿಗುವ ನೆಂಟರು, ಬಂಧು- ಬಳಗದೊಂದಿಗೆ ಕೂಡಾ ಮಾತನಾಡಿ, ಪರಸ್ಪರ ಕಷ್ಟ- ಸುಖಗಳನ್ನು ಹಂಚಿಕೊಳ್ಳಿ. ಇದರಿಂದ ನಿಮಗೆ ಮಾತುಗಾರಿಕೆ ಹಾಗೂ ಸಂವಹನ ನಡೆಸುವ ಕೌಶಲ ವೃದ್ಧಿಸುತ್ತದೆ ಎಂದು ಅವರು ತಿಳಿಸಿದರು.ವಿದ್ಯಾರ್ಥಿಗಳು ನಿಯಮಿತವಾಗಿ ಗ್ರಂಥಾಲಯಕ್ಕೆ ಭೇಟಿ ನೀಡುವುದನ್ನು ರೂಢಿಸಿಕೊಳ್ಳಬೇಕು. ಕಾನೂನು ಪುಸಕ್ತಗಳನ್ನು ಅಧ್ಯಯನ ಮಾಡಬೇಕು. ಪ್ರತಿನಿತ್ಯ ಪತ್ರಿಕೆಗಳನ್ನು ಓದಬೇಕು. ಕನಿಷ್ಠ 2 ಪತ್ರಿಕೆಗಳಲ್ಲಿನ ಸಂಪಾದಕೀಯವನ್ನು ಕಡ್ಡಾಯವಾಗಿ ಓದಲೇಬೇಕು. ನಮ್ಮ ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಅರಿವು ಹಾಗೂ ಕುತೂಹಲವನ್ನು ಹೊಂದಿರಬೇಕು. ಸಹಪಾಠಿಗಳ ಜೊತೆ, ಅಧ್ಯಾಪಕರೊಂದಿಗೆ ಪ್ರಸ್ತುತ ವಿಷಯಗಳನ್ನು ಕುರಿತು ಚರ್ಚಿಸಬೇಕು. ಸಂವಾದ ಮಾಡಬೇಕು. ಕೋರ್ಟ್ ಗಳಲ್ಲಿ ನೀಡಿರುವ ತೀರ್ಪುಗಳ ಬಗ್ಗೆ ಗುಂಪು ಸಂವಾದಗಳನ್ನು ನಡೆಸಬೇಕು ಎಂದು ಅವರು ಹೇಳಿದರು.ಸಮಯ ಸಿಕ್ಕಾಗ ಹೈಕೋರ್ಟ್ ಗೆ ಭೇಟಿ ನೀಡಿ, ಅಲ್ಲಿ ಹಿರಿಯ ವಕೀಲರು ಹೇಗೆ ವಾದವನ್ನು ಮಂಡಿಸುತ್ತಾರೆ ಎನ್ನುವುದನ್ನು ಕಣ್ಣಾರೆ ನೋಡಿ. ಇದರಿಂದ ನಿಮಗೂ ಅನುಭವವಾಗುತ್ತದೆ. ಮುಂದೆ ವಕೀಲವೃತ್ತಿಗೆ ಪ್ರವೇಶ ಮಾಡಿದಾಗ ಉಪಯೋಗಕ್ಕೆ ಬರುತ್ತದೆ ಎಂದರು.ಕಾನೂನು ವಿದ್ಯಾರ್ಥಿಗಳು ನ್ಯಾಯಾಂಗ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಹಿಂದೆ ನಿರ್ವಹಿಸಿರುವಂತಹ ಮಹನೀಯರನ್ನು ಆದರ್ಶವಾಗಿ ಇಟ್ಟುಕೊಂಡು, ಅವರ ವೃತ್ತಿ ಕೌಶಲತೆಯನ್ನು ಸ್ಫೂರ್ತಿಯಾಗಿಸಿಕೊಂಡರೆ ವೃತಿಯಲ್ಲಿ ಪ್ರವರ್ಧಮಾನಕ್ಕೆ ಬರಬಹುದು ಎಂದು ಅವರು ತಿಳಿಸಿದರು.ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಕಾರ್ಯದರ್ಶಿ ಪಿ. ವಿಶ್ವನಾಥ್, ಕಾಲೇಜಿನ ಪ್ರಾಂಶುಪಾಲೆ ಡಾ.ಪಿ. ದೀಪು, ಸಂಯೋಜಕ ಎಚ್.ಎಸ್. ಶಿವಕುಮಾರ್ ಇದ್ದರು.----ಕೋಟ್...ಯಾವುದೇ ಕ್ಷೇತ್ರದಲ್ಲಿ ವೃತ್ತಿಪರರಾಗಿರುವವರೆಲ್ಲೂ ಆ ಕ್ಷೇತ್ರದಲ್ಲಿ ಪರಿಣತರೆನ್ನಲ್ಲ. ಕಾನೂನು ಕ್ಷೇತ್ರವೂ ಇದಕ್ಕೆ ಹೊರತಲ್ಲ. ವಿದ್ಯಾರ್ಥಿಗಳು ನನಗೆ ರ್ಯಾಂಕ್ ಬಂದಿದೆ, ನಾನು ಬೇರೆಯವರನ್ನು ಕೇಳಿದರೆ ಎಲ್ಲಿ ಅವಮಾನವಾಗಿ ಬಿಡುತ್ತದೋ ಎನ್ನುವ ಆಲೋಚನೆಯನ್ನು ಮನಸ್ಸಿನಿಂದ ಮೊದಲು ತಗೆದು ಹಾಕಬೇಕು. ಏಕೆಂದರೆ ಜ್ಞಾನ ಎನ್ನುವುದರ ವ್ಯಾಪ್ತಿ ದೊಡ್ಡದು. ಹೀಗಾಗಿ, ಒಬ್ಬರಿಗೊಬ್ಬರು ವಿಷಯಗಳನ್ನು ಕೇಳಿ ತಿಳಿದುಕೊಳ್ಳಬೇಕು.- ಇ.ಎಸ್. ಇಂದಿರೇಶ್, ಹೈಕೋರ್ಟ್ ನ್ಯಾಯಮೂರ್ತಿ