ಸಿದ್ದಾಪುರ ತಾಲೂಕಿನ ಕಾನಸೂರಿನ ಶ್ರೀ ರುದ್ರಾಂಜನೇಯ ದೇವಸ್ಥಾನದ ಸುಂದರ ಮಹಾದ್ವಾರವನ್ನು ಕರ್ಕಿ ದೈವಜ್ಞ ಮಠದ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಶ್ರೀ ಮತ್ತು ಶ್ರೀಮನ್ನೆಲೆಮಾವು ಮಠದ ಮಾಧವಾನಂದ ಭಾರತಿ ಶ್ರೀಗಳು ಉದ್ಘಾಟಿಸಿದರು.

ಸಿದ್ದಾಪುರ: ತಾಲೂಕಿನ ಕಾನಸೂರಿನ ಶ್ರೀ ರುದ್ರಾಂಜನೇಯ ದೇವಸ್ಥಾನದ ಸುಂದರ ಮಹಾದ್ವಾರವನ್ನು ಕರ್ಕಿ ದೈವಜ್ಞ ಮಠದ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಶ್ರೀ ಮತ್ತು ಶ್ರೀಮನ್ನೆಲೆಮಾವು ಮಠದ ಮಾಧವಾನಂದ ಭಾರತಿ ಶ್ರೀಗಳು ಉದ್ಘಾಟಿಸಿದರು.

ನಂತರ ದೇವರ ದರ್ಶನ ಮಾಡಿ ವೇದಿಕೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಸಚ್ಚಿದಾನಂದ ಶ್ರೀಗಳು, ಮಹಾದ್ವಾರ ಪರಮಾತ್ಮನ ದರ್ಶನಕ್ಕೆ ಹಾಗೂ ವಿಶೇಷವಾಗಿ ದೈವ ಚಿಂತನೆ ಮಾಡಿ ದೇವರಿಗೆ ಹತ್ತಿರವಾಗುವ ಮಹಾನ್ ಮಾರ್ಗ. ಪರಮಾತ್ಮ ಅಗಣಿತ ಮಹಿಮಾ, ಲೀಲಾಮಯ. ಈ ಕಾರ್ಯಕ್ಕೆ ಮುಂದಾದ ಸಾವಿತ್ರಮ್ಮ ಅವರ ಅವಿರತ ಪ್ರಯತ್ನದ ಫಲ ಕಾನಸೂರು ದೇವಸ್ಥಾನ ಅಭಿವೃದ್ಧಿಯಾಗುತ್ತಿದೆ ಎಂದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಮಾಧವಾನಂದ ಶ್ರೀಗಳು, ಧರ್ಮಧ್ವಜ ಸ್ತಂಭದಂತೆ ಗಟ್ಟಿಯಾಗಿ ನಿಲ್ಲಬೇಕು. ಧರ್ಮದ ಹಾದಿಯಲ್ಲಿ ಇರುವವರಿಗೆ ಮುಂದಿನ ದಾರಿ ಸುಗಮವಾಗುತ್ತದೆ. ಶ್ರದ್ಧಾಭಕ್ತಿಯ ಕೇಂದ್ರವಾದ ಕಾನಸೂರು ದೇವಸ್ಥಾನ ಇಷ್ಟೊಂದು ಅಭಿವೃದ್ಧಿ ಹೊಂದಿರುವುದು ಸಾವಿತ್ರಮ್ಮನವರ ನಿಸ್ವಾರ್ಥ ಸೇವೆಯ ಫಲ ಎಂದರು.

ಸಾವಿತ್ರಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಶಿಕ್ಷಕ ಕೆ.ಆರ್. ಹೆಗಡೆ ಸ್ವಾಗತಿಸಿದರು.

ಕೇಶವ ಶೇಟ್ ದಂಪತಿ ಮತ್ತು ಸಾಯಿಕುಮಾರ್ ಹಾಗೂ ಶಿರಸಿ ಸುವರ್ಣ ಸೊಸೈಟಿ ಅವರು ಶ್ರೀಗಳವರಿಗೆ ಫಲ ಸಮರ್ಪಣೆ ಮಾಡಿದರು. ಈಶ್ವರೀಯ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಅರುಣಾ ಮಾತನಾಡಿದರು. ಸ್ತುತಿ ಹೆಗಡೆ ಪ್ರಾರ್ಥಿಸಿದರು. ಪತ್ರಕರ್ತ ಉದಯ ಕುಮಾರ ಕಾನಳ್ಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಆರಂಭದಲ್ಲಿ ಗುರುಗಳು ಶ್ರೀ ಆಂಜನೇಯ ಹಾಗೂ ಶ್ರೀ ರಾಮೇಶ್ವರ ದೇವರ ದರ್ಶನ ಮಾಡಿ ಆನಂತರ ಅಲ್ಲಿ ನಡೆದ ವಿಶೇಷ ಹವನದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ದಾನಿಗಳಾದ ಗಣಪತಿ ಜೋಗ್ಲೇಕರ್, ಉಲ್ಲಾಸ ನಾಯ್ಕ ಕುಮಟಾ ದಂಪತಿ ಹಾಗೂ ವೈದಿಕರಾದ ವೇ. ರವಿ ಭಟ್, ವೇ. ವಿನಾಯಕ ಭಟ್ ಅವರನ್ನು ಸನ್ಮಾನಿಸಲಾಯಿತು.