‘ಸ್ವಾಸ್ಥ್ಯ ಸಂಪದ-2025’ ಔಷಧೀಯ ಸಸ್ಯಗಳ ಬಗ್ಗೆ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಶುಕ್ರವಾರ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.
ಮಂಗಳೂರು ವಿವಿಯಲ್ಲಿ ‘ಸ್ವಾಸ್ಥ್ಯ ಸಂಪದ-2025’ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ
ಉಳ್ಳಾಲ: ಸಾಂಪ್ರದಾಯಿಕವಾದ ಔಷಧ ಪದ್ದತಿ, ಔಷಧೀಯ ಸಸ್ಯಗಳ ಕುರಿತು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಅಧ್ಯಯನಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಅನೇಕ ಔಷಧೀಯ ಸಸ್ಯಗಳು ಸಮೃದ್ಧವಾಗಿದ್ದು, ಗಿಡ ಮೂಲಿಕೆಗಳು, ಔಷಧಿ ಸಸ್ಯಗಳ ಮೂಲಕ ಆರೋಗ್ಯ ನಿರ್ಮಾಣಕ್ಕೆ ಪಶ್ಚಿಮ ಘಟ್ಟಗಳ ಪಾತ್ರ ಮಹತ್ವದ್ದಾಗಿದೆ ಎಂದು ಕರ್ನಾಟಕ ಸ್ಟೇಟ್ ಸ್ಯಾಂಡಲ್ ವುಡ್ ಆಂಡ್ ವನಕೃಷಿ ಗ್ರೋವರ್ಸ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ ಅಮರ್ ನಾರಾಯಣ್ ಹೇಳಿದ್ದಾರೆ.ಮಂಗಳೂರು ವಿಶ್ವ ವಿದ್ಯಾನಿಲಯದ ಸೂಕ್ಷ್ಮಾಣುಜೀವ ವಿಜ್ಞಾನ ವಿಭಾಗದ ವತಿಯಿಂದ ಆಳ್ವಾಸ್ ಪಾರಂಪರಿಕ ಔಷಧೀಯ ಸಂಶೋಧನಾ ಕೇಂದ್ರ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮೂಡುಬಿದಿರೆ ಇದರ ಸಹಯೋಗದೊಂದಿಗೆ ‘ಸ್ವಾಸ್ಥ್ಯ ಸಂಪದ-2025’ ಔಷಧೀಯ ಸಸ್ಯಗಳ ಬಗ್ಗೆ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಶುಕ್ರವಾರ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.ಬೆಂಗಳೂರಿನ ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರದ ಸೀನಿಯರ್ ಔಷಧೀಯ ಸಸ್ಯ ತಜ್ಞ ಡಾ. ಎಂ.ಜೆ.ಪ್ರಭು ಮಾತನಾಡಿ, ಆಯುರ್ವೇದ, ಯೋಗ, ಸಸ್ಯ ಮೂಲಗಳಿಂದ ಬೇರ್ಪಡಿಸುವ ರಾಸಾಯನಿಕ ವಸ್ತುಗಳು, ಸಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳು, ಹೊಸ ರೀತಿಯ ವೈದ್ಯಕೀಯ ಔಷಧಗಳ ತಯಾರಿಕೆಗಳು, ಔಷಧೀಯ ಸಸ್ಯಗಳ ಮಹತ್ವಗಳು ಸೇರಿದಂತೆ ಅನೇಕ ವಿಷಯಗಳ ಕುರಿತು ಈ ರಾಷ್ಟ್ರೀಯ ಸಮ್ಮೇಳನವು ಬೆಳಕು ಚೆಲ್ಲಲಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಮಾತನಾಡಿ, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧಗಳನ್ನು ಅರ್ಥೈಸಿಕೊಳ್ಳಬೇಕು. ಇಂದಿನ ಆಧುನಿಕತೆಯ ಹೆಸರಿನಲ್ಲಿ ಅರಣ್ಯ ಸೇರಿದಂತೆ ಪ್ರಾಕೃತಿಕ ಸಂಪತ್ತು ನಾಶವಾಗುತ್ತಿವೆ. ಇದರ ಪರಿಣಾಮ ಹವಮಾನ ವೈಪರೀತ್ಯಗಳುಂಟಾಗುತ್ತಿವೆ ಎಂದರು.ಹಿರಿಯ ವಿಜ್ಞಾನಿ ಡಾ.ಸುಲೈಮಾನ್ ಸಿ.ಟಿ, ಆಳ್ವಾಸ್ ಪಾರಂಪರಿಕ ಔಷಧೀಯ ಸಂಶೋಧನಾ ಕೇಂದ್ರದ ನಿರ್ದೆಶಕ ಡಾ. ಸುಬ್ರಹ್ಮಣ್ಯ ಪದ್ಯಾಣ, ಆರ್ಯುವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಸುಶೀಲ್ ಶೆಟ್ಟಿ, ಜೀವ ವಿಜ್ಞಾನ ವಿಭಾಗದ ಅಧ್ಯಕ್ಷ ಪ್ರೊ.ತಾರಾವತಿ ಮತ್ತಿತರರಿದ್ದರು.ಮಂಗಳೂರು ವಿವಿ ಸೂಕ್ಷ್ಮಾಣುಜೀವ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಪ್ರೊ.ಎಂ.ಜಯಶಂಕರ್ ಸ್ವಾಗತಿಸಿದರು.ಮಂಗಳೂರು ವಿವಿ ಉಪನ್ಯಾಸಕ ಡಾ. ಶರತ್ ಚಂದ್ರ ವಂದಿಸಿದರು. ಶ್ರೇಯಸ್ ನಿರೂಪಿಸಿದರು.ಸ್ವಾಸ್ಥ್ಯ ಆರೋಗ್ಯಕ್ಕಾಗಿ ಪೂರಕವಾದ ಜೈವಿಕ ಮಜ್ಜಿಗೆ ಕುಡಿಯುವ ಬಗ್ಗೆ ಜಾಗೃತಿ, ಔಷಧೀಯ ಸಸ್ಯಗಳ ಪ್ರದರ್ಶನ ಏರ್ಪಡಿಸಲಾಗಿದೆ.
