ಸಾರಾಂಶ
ಮೈಸೂರಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ಗ್ರಾಮಾಂತರ ಬುದ್ಧಿ ಜೀವಿಗಳ ಬಳಗ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆರು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ರಾಜ್ಯ .ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ, ಹಿರಿಯ ಕವಿ ಡಾ.ಸಿಪಿಕೆ, ಡಾ. ಲತಾ ರಾಜಶೇಖರ್, ಡಾ.ಎಚ್.ಎ. ಪಾರ್ಶ್ವನಾಥ್, ಡಾ.ಜೆ. ಲೋಹಿತ್, ಅಂಶಿ ಪ್ರಸನ್ನಕುಮಾರ್, ಎ. ಪುಷ್ಪಾ ಅಯ್ಯಂಗಾರ್, ರೇವಣ್ಣ ಬಳ್ಳಾರಿ, ಭೇರ್ಯ ರಾಮಕುಮಾರ್, ಡಾ. ಸೌಜನ್ಯ ಶರತ್, ಸರಗೂರು ನಟರಾಜ್‌ಇದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರುಕುವೆಂಪು ಹಾಗೂ ದ.ರಾ. ಬೇಂದ್ರೆ ಅವರು ಕನ್ನಡ ಸಾಹಿತ್ಯದ ಎರಡು ಕಣ್ಣುಗಳು’ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಹೇಳಿದರು.
ಗ್ರಾಮಾಂತರ ಬುದ್ಧಿಜೀವಿಗಳ ಬಳಗ, ಅಖಿಲ ಭಾರತೀಯ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್‌ಸಹಯೋಗದಲ್ಲಿ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಬಳಗದ 40ನೇ ವಾರ್ಷಿಕೋತ್ಸವ ಮತ್ತು ರಾಷ್ಟ್ರಕವಿ ಕುವೆಂಪು ಸಾಹಿತ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು,‘ಕುವೆಂಪು ಕಾಯಕದ ಕವಿ. ಜಾತಿ ನಿಂದನೆಯನ್ನು ಕಟುವಾಗಿ ಖಂಡಿಸಿದವರು. ಮೂಢನಂಬಿಕೆ ಧಿಕ್ಕರಿಸಿದವರು ಹಾಗೂ ಸಮಾನತೆಯನ್ನು ಸಾರಿದವರು. ವಿಶ್ವಮಾನವತೆಯ ಸಂದೇಶ ಸಾರಿದ ಜಗದ ಕವಿ. ಯುಗದ ಕವಿಯೂ ಹೌದು. ಅಧ್ಯಾತ್ಮ ಹಾಗೂ ವೈಚಾರಿಕತೆಯ ಸಮನ್ವಯ ಕಾಪಾಡಿದವರು’ ಎಂದರು.
‘ಆಗ ರಾಜಕೀಯ ವ್ಯಕ್ತಿಗಳು ಮತ್ತು ಸಾಹಿತಿಗಳ ನಡುವೆ ಒಳ್ಳೆಯ ಒಡನಾಟ ಇತ್ತು. ಭಿನ್ನಾಭಿಪ್ರಾಯಗಳ ನಡುವೆಯೂ ಮಧುರತೆ ಇತ್ತು. ಇದಕ್ಕೆ ಕುವೆಂಪು- ಕೆಂಗಲ್ ಹನುಮಂತಯ್ಯ ನಿದರ್ಶನವಾಗಿದ್ದಾರೆ’ ಎಂದು ಅವರು ಹೇಳಿದರು.‘ಬುದ್ಧಿಜೀವಿಗಳೆಂದರೆ ಬೆಂಗಳೂರು ಅಥವಾ ದೊಡ್ಡ ನಗರಗಳಿಗೆ ಕೇಂದ್ರೀಕೃತ ಎಂಬ ಮಾತಿದೆ. ಗ್ರಾಮಾಂತರದಲ್ಲೂ ಇದ್ದಾರೆ ಎಂಬುದನ್ನು ಗ್ರಾಮಾಂತರ ಬುದ್ಧಿಜೀವಿಗಳ ಬಳಗವು ನಾಲ್ಕು ದಶಕಗಳಿಂದಲೂ ನಿರೂಪಿಸಿದೆ’ ಎಂದು ಅವರು ಶ್ಲಾಘಿಸಿದರು.
ಪುಣ್ಯ ಮಾಡಿದವರು ಕರ್ನಾಟಕದಲ್ಲಿ ಹುಟ್ಟುತ್ತಾರೆ. ಇನ್ನೂ ಪುಣ್ಯ ಮಾಡಿದವರ ಮಾತೃಭಾಷೆ ಕನ್ನಡ ಆಗಿರುತ್ತದೆ ಎಂದ ಅವರು,‘ಕನ್ನಡದ ಪರಿಚಾರಕನಾಗಿ ನಾನು ಕನ್ನಡದ ಕರ್ಮ ಹಾಗೂ ಅದರ ಧರ್ಮಕ್ಕೆ ಸದಾ ಸಿದ್ಧವಿರುತ್ತೇನೆ’ ಎಂದು ಹೇಳಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಲೇಖಕಿ ಸೌಜನ್ಯ ಶರತ್, ಮುಖ್ಯಅತಿಥಿಗಳಾಗಿದ್ದರು. ಬಳಗದ ಅಧ್ಯಕ್ಷ ಭೇರ್ಯ ರಾಮಕುಮಾರ್ ಸ್ವಾಗತಿಸಿದರು.ರಾಷ್ಟ್ರಕವಿ ಕುವೆಂಪು ಅವರನ್ನು ಕುರಿತಂತೆ ರಾಜ್ಯ ಪ. ವರ್ಗಗಳ ಕಲ್ಯಾಣ ಇಲಾಖೆಯ ರಾಜ್ಯ ಅಧಿಕಾರಿ ಡಿ. ಜಿ. ಗುರುಶಾಂತಪ್ಪ ಉಪನ್ಯಾಸ ನೀಡಿದರು.
ಸಾಮೂಹಿಕ ನೇತ್ರದಾನ ಕಾರ್ಯಕ್ರಮ ವೈದ್ಯರಾದ ಡಾ.ಕೆ.ಆರ್. ಗೌತಮ್ ಉದ್ಘಾಟಿಸಿದರು. ಪರಿಸರ ಜಾಗೃತಿ ಕಾರ್ಯಕ್ರಮವನ್ನು ರೈತ ಮುಖಂಡ ಸರಗೂರು ನಟರಾಜ್ ಉದ್ಘಾಟಿಸಿದರು.--- ಬಾಕ್ಸ್---- ಆರು ಕೃತಿಗಳ ಬಿಡುಗಡೆ--ಕೊಡಗಿನ ಕವಿ ಎಂ.ಡಿ. ಅಯ್ಯಪ್ಪ ಅವರ ಹೃದಯರಾಗ ಕೃತಿಯನ್ನು ಹಿರಿಯ ಸಾಹಿತಿ ಡಾ. ಸಿಪಿಕೆ, ಪುಣೆಯ ಲೇಖಕಿ ಹೇಮಮಳಗಿ ಅವರ ಹೃದಯ ಕಾದಂಬರಿಯನ್ನು ಕವಯತ್ರಿ ಡಾ. ಲತಾ ರಾಜಶೇಖರ್, ರತ್ನ ಚಂದ್ರಶೇಖರ್ ಅವರ ಕಾವ್ಯ ಲಹರಿ ಕೃತಿಯನ್ನು ರಂಗ ಕರ್ಮಿ ಡಾ. ಎಚ್.ಎ. ಪಾರ್ಶ್ವನಾಥ, ವಕೀಲರಾದ ಬಿ.ಕೆ. ನೂತನ ಕುಮಾರ್ ಅವರ ಮೊದಲ ತೊದಲು ಕೃತಿಯನ್ನು ನ್ಯಾಯವಾದಿ ರೇವಣ್ಣ ಬಳ್ಳಾರಿ, ಪುಣೆಯ ಹೇಮಾ ಮಳಗಿ ಅವರ ಕವನ ಸಂಗಮ ಕೃತಿಯನ್ನು ಸಾಹಿತಿ ಪುಷ್ಪಾ ಅಯ್ಯಂಗಾರ್, ಕಾವ್ಯ ಧಾರೆ ಕೃತಿಯನ್ನು ಸಾಹಿತಿ ಡಾ. ಜೆ.ಲೋಹಿತ್ ಬಿಡುಗಡೆ ಮಾಡಿದರು.
-----