ನೀರೆ ಗ್ರಾಮ ಪಂಚಾಯಿತಿಯ ನೂತನ ಕಚೇರಿ ಕಟ್ಟಡ, ಸಭಾಭವನ ಉದ್ಘಾಟನೆ

| Published : Sep 13 2025, 02:06 AM IST

ನೀರೆ ಗ್ರಾಮ ಪಂಚಾಯಿತಿಯ ನೂತನ ಕಚೇರಿ ಕಟ್ಟಡ, ಸಭಾಭವನ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಕಳ ತಾಲೂಕು ನೀರೆ ಗ್ರಾಮ ಪಂಚಾಯಿತಿಯ ನೂತನ ಕಚೇರಿ ಕಟ್ಟಡ, ಸಭಾಭವನ, ಸಂಜೀವಿನಿ ಸಭಾಭವನ ಹಾಗೂ ಗ್ರಾಮ ಆಡಳಿತ ಅಧಿಕಾರಿ ಕಚೇರಿಗಳನ್ನು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಿದರು.

ಕಾರ್ಕಳ: ಉಡುಪಿ‌ ಜಿಲ್ಲೆ ರಾಜ್ಯದ ಸಾಂಸ್ಕೃತಿಕ ರಾಯಭಾರಿಯಾಗಿ ಗುರುತಿಸಿಕೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.ಕಾರ್ಕಳ ತಾಲೂಕು ನೀರೆ ಗ್ರಾಮ ಪಂಚಾಯಿತಿಯ ನೂತನ ಕಚೇರಿ ಕಟ್ಟಡ, ಸಭಾಭವನ, ಸಂಜೀವಿನಿ ಸಭಾಭವನ ಹಾಗೂ ಗ್ರಾಮ ಆಡಳಿತ ಅಧಿಕಾರಿ ಕಚೇರಿಗಳನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.ಭಾರತ ಹಳ್ಳಿಗಳ ದೇಶವಾಗಿದ್ದು, ಗಾಂಧೀಜಿ ಕಲ್ಪನೆ ಗ್ರಾಮ‌ ಸ್ವರಾಜ್ಯ ಕನಸು ನನಸಾಗಿಸುವಂತೆ ಮಾಡಿದೆ. ನೀರೆ ಗ್ರಾಮ ಮಹಿಳಾ ಸ್ನೇಹಿ ಗ್ರಾಮ ಪಂಚಾಯಿತಿಯಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯಾಗಿದೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಗ್ರಾಮಿಣ ಭಾಗದ ಜನರು 9/11 ಸಮಸ್ಯೆ ಎದುರಿಸುತ್ತಿದ್ದು ಇದರ ಬಗ್ಗೆ ಬಗ್ಗೆ ಜಿಲ್ಲಾಧಿಕಾರಿ, ಸಚಿವರ ಜೊತೆ ಚರ್ಚಿಸಿ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು. ಕಾರ್ಕಳ ವಿಧಾನಸಭಾ ವ್ಯಾಪ್ತಿಯ ರಸ್ತೆ ಅಭಿವೃದ್ದಿಗೆ 25 ಕೋಟಿ ರು. ಅನುದಾನ ನೀಡಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಸರ್ಕಾರಿ ಕಚೇರಿಗಳು ಗ್ರಾಮಸ್ಥರಿಗೆ ಪರಿಹಾರ ನೀಡುವ ಕಟ್ಟಡಗಳಾಗಬೇಕು. ತಾಲೂಕಿನ ಎಲ್ಲಾ ‌ಸರ್ಕಾರಿ ಕಟ್ಟಡಗಳು ಪುನರುಜ್ಜಿವನಗೊಂಡಿವೆ. ಸರ್ಕಾರದ ಜೊತೆ ಸ್ಥಳಿಯ ಉದ್ಯಮಗಳ ಸಿಎಸ್‌ಆರ್‌ ಫಂಡ್‌ ಬಳಸಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಆಡಳಿತ ಯಂತ್ರ ಸುಲಲಿತವಾಗಿದೆ. ದಾನಿಗಳ ಸಹಕಾರವೆ ಹೆಚ್ಚಾಗಿದೆ ಎಂದರು.

ಬೆಂಗಳೂರು ಕೇಂದ್ರೀಕೃತವಾಗಿ ಕಾನುನು ರೂಪಿತವಾದ ಕಾರಣ ಕರಾವಳಿ ಭಾಗದಲ್ಲಿ ಹೊಸ ಮನೆಗಳು ಕಟ್ಟಲು‌ ಸಾಧ್ಯವಾಗುತಿಲ್ಲ‌, 9/11 ಸಮಸ್ಯೆಯಿಂದಾಗಿ 4500 ಅರ್ಜಿಗಳು‌ ಬಾಕಿ ಉಳಿದಿವೆ. ಕರಾವಳಿ ಭಾಗದಲ್ಲಿ ಕೆಂಪುಕಲ್ಲಿನ ಸಮಸ್ಯೆಯಿಂದ ಲಕ್ಷಾಂತರ ಕಟ್ಟಡ ಕೂಲಿ ಕಾರ್ಮಿಕರು,ಹಾಗು ಲಾರಿ‌ಮಾಲಿಕರು ಚಾಲಕರು ಕೆಲಸವಿಲ್ಲದೆ ಬಯಲಿಗೆ ಬಂದಿದ್ದಾರೆ . ಅದಕ್ಕಾಗಿ ಸರ್ಕಾರ ನಿಯಮ ಸಡಿಲಿಸಿ ಮೂರು ಜಿಲ್ಲೆಗಳಿಗೆ ಅನುಕೂಲವಾಗುವಂತೆ ವಿಶೇಷ ಮಾನ್ಯತೆ ನೀಡಬೇಕು ಎಂದರು.20 ವರ್ಷಗಳಿಗಿಂತ ಈ ಬಾರಿ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಸುರಿದಿದ್ದು ಮಳೆಯಿಂದಾಗಿ ರಸ್ತೆಗಳು ಹಾಳಾಗಿವೆ. ಗುಂಡಿ‌ಮುಚ್ಚಲು‌ ಅನುದಾನ ನೀಡಿ ಎಂದು ಸಚಿವರನ್ನು ಒತ್ತಾಯಿಸಿದರು.

ಸಂಸದ ಕೋಟ ಶ್ರಿನಿವಾಸ ಪೂಜಾರಿ ಮಾತನಾಡಿ, ರಾಜ್ಯದ 5950 ಗ್ರಾಮ ಪಂಚಾಯಿತಿಗಳ ಪೈಕಿ ನೀರೆ ಗ್ರಾಮ ಪಂಚಾಯಿತಿ ಕನಸುಗಳನ್ನು ಹೊತ್ತ ಕಟ್ಟಡವಾಗಿ ರಾಜ್ಯಕ್ಕೆ ಮಾದರಿಯಾದೆ. ಗ್ರಾಮ ಪಂಚಾಯಿತಿಗಳು ಅಧಿಕಾರ ವಿಕೇಂದ್ರೀಕರಣದ ಮೂಲಕ ಗ್ರಾಮ ಸರ್ಕಾರದಂತೆ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಪಂಚಾಯಿತಿ ವ್ಯಾಪ್ತಿಯಲ್ಲಿ 29 ಇಲಾಖೆ ಸೇವೆಗಳು ಲಭ್ಯವಾಗುತ್ತಿವೆ ಎಂದರು.ವಿಧಾನ ಪರಿಷತ್ ನ ಕಿಶೋರ್ ಕುಮಾರ್ ಪುತ್ತೂರು, ನೀರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಚ್ಚಿದಾನಂದ ಎಸ್.ಪ್ರಭು, ಉದಯ ಕುಮಾರ್ ಶೆಟ್ಟಿ ಮಾತನಾಡಿದರು.

ಕಾರ್ಕಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ, ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿ.ಪಂ. ಉಪಕಾರ್ಯದರ್ಶಿ ಎಸ್.ಎಸ್‌. ಕಾದ್ರೋಳ್ಳಿ, ಉಡುಪಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಹಾಗೂ ಕಾರ್ಕಳ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಸುಬ್ರಹ್ಮಣ್ಯ ಶೆಟ್ಟಿ, ಕಾರ್ಕಳ ತಹಸೀಲ್ದಾರ್ ಪ್ರದೀಪ್ ಆರ್‌., ಕಾರ್ಕಳ ತಾಲೂಕು ಪಂಚಾಯಿತಿ ಇಒ ಪ್ರಶಾಂತ್ ರಾವ್, ಉದ್ಯಮಿ ದಾಮೋದರ ಕಾಮತ್, ಸಂತೋಷ್ ವಾಗ್ಳೆ, ಕಡಾರಿ ರವೀಂದ್ರ ಪ್ರಭು,ಉಡುಪಿ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಮತ್ತಿತರರಿದ್ದರು.ಪೋಷಣ್ ಅಬಿಯಾನದ ಮೂಲಕ ಐವರು ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು.

ತಾ.ಪಂ. ಮಾಜಿ ಅಧ್ಯಕ್ಷ ವಿಕ್ರಂ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಕಿತಾ ನಾಯಕ್ ಸ್ವಾಗತಿಸಿದರು. ರಮೇಶ್ ಕಲ್ಲೊಟ್ಟೆ ನಿರೂಪಿಸಿದರು.