ಪೀಣ್ಯ ದಾಸರಹಳ್ಳಿ ಎಂಟನೇ ಮೈಲಿಯ ಪ್ರಕ್ರಿಯಾ ಹಾಸ್ಪಿಟಲ್ಸ್, ತನ್ನ ಸಮಗ್ರ ಕ್ಯಾನ್ಸರ್ ಕೇಂದ್ರವಾದ ‘ಪ್ರಕ್ರಿಯಾ ಕ್ಯಾನ್ಸರ್ ಕೇರ್’ ಮತ್ತು ವಿಕಿರಣ ಚಿಕಿತ್ಸಾ (ರೇಡಿಯೋಥೆರಪಿ) ವಿಭಾಗವನ್ನು ಉದ್ಘಾಟಿಸುವ ಮೂಲಕ ಆರೋಗ್ಯ ಸೇವೆಯಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ ಪೀಣ್ಯ ದಾಸರಹಳ್ಳಿ ಎಂಟನೇ ಮೈಲಿಯ ಪ್ರಕ್ರಿಯಾ ಹಾಸ್ಪಿಟಲ್ಸ್, ತನ್ನ ಸಮಗ್ರ ಕ್ಯಾನ್ಸರ್ ಕೇಂದ್ರವಾದ ‘ಪ್ರಕ್ರಿಯಾ ಕ್ಯಾನ್ಸರ್ ಕೇರ್’ ಮತ್ತು ವಿಕಿರಣ ಚಿಕಿತ್ಸಾ (ರೇಡಿಯೋಥೆರಪಿ) ವಿಭಾಗವನ್ನು ಉದ್ಘಾಟಿಸುವ ಮೂಲಕ ಆರೋಗ್ಯ ಸೇವೆಯಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ. ಸುಧಾರಿತ ಮತ್ತು ಕರುಣಾಭರಿತ ಕ್ಯಾನ್ಸರ್ ಚಿಕಿತ್ಸೆಯನ್ನು ಒಂದೇ ಸೂರಿನಡಿ ಒದಗಿಸುವ ನಿಟ್ಟಿನಲ್ಲಿ ಈ ನೂತನ ಕೇಂದ್ರವನ್ನು ವಿನ್ಯಾಸಗೊಳಿಸಲಾಗಿದೆ.ಈ ವೇಳೆ ಮಾತನಾಡಿದ ಶಾಸಕ ಎಸ್‌ ಮುನಿರಾಜು, ಇಂತಹ ಸಮಗ್ರ ಕ್ಯಾನ್ಸರ್ ಕೇರ್ ಸೌಲಭ್ಯದ ಪ್ರಾರಂಭವು ವಿಶೇಷ ಆರೋಗ್ಯ ಸೇವೆಯ ಲಭ್ಯತೆಯನ್ನು ಬಲಪಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಸುಧಾರಿತ ಮತ್ತು ರೋಗಿ-ಕೇಂದ್ರಿತ ಸಮಗ್ರ ಕ್ಯಾನ್ಸರ್ ಚಿಕಿತ್ಸಾ ಸೇವೆಗಳ ಅಗತ್ಯತೆಯನ್ನು ಇದು ಪ್ರತಿಬಿಂಬಿಸುತ್ತದೆ. ಈ ಅರ್ಥಪೂರ್ಣ ಉಪಕ್ರಮಕ್ಕಾಗಿ ನಾನು ಪ್ರಕ್ರಿಯಾ ಹಾಸ್ಪಿಟಲ್ಸ್ ಅನ್ನು ಅಭಿನಂದಿಸುತ್ತೇನೆ'''''''' ಎಂದರು.

ಪ್ರಕ್ರಿಯಾ ಹಾಸ್ಪಿಟಲ್ಸ್‌ನ ಸಿಇಒ ಮತ್ತು ಮೂಳೆರೋಗ ಆಂಕೊಸರ್ಜನ್ ಡಾ.ಶ್ರೀನಿವಾಸ್ ಚಿರಕುರಿ ಮಾತನಾಡಿ, ವಾಯವ್ಯ ಬೆಂಗಳೂರಿನಲ್ಲಿ ಸ್ಥಾಪಿಸಲಾದ ಮೊದಲ ಸಮಗ್ರ ಕ್ಯಾನ್ಸರ್ ಕೇರ್ ಸೆಂಟರ್ ಇದಾಗಿದೆ. ದೀರ್ಘಕಾಲದಿಂದ ಕ್ಯಾನ್ಸರ್ ಚಿಕಿತ್ಸೆಯಿಂದ ವಂಚಿತರಾಗಿದ್ದ ಕರ್ನಾಟಕದ ನೆರೆಯ ಜಿಲ್ಲೆಗಳ ರೋಗಿಗಳಿಗೆ ಇದು ವರದಾನವಾಗಲಿದೆ. ಪ್ರತಿದಿನ ನೂರಾರು ರೋಗಿಗಳು ರೇಡಿಯೋಥೆರಪಿ, ಕಿಮೋಥೆರಪಿ ಮತ್ತು ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಪ್ರಕ್ರಿಯಾ ಕ್ಯಾನ್ಸರ್ ಕೇರ್ ಈ ರೋಗಿಗಳ ಪ್ರಯಾಣದ ಸಮಯ ಮತ್ತು ಒಟ್ಟಾರೆ ಚಿಕಿತ್ಸಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ಇತರ ಕೇಂದ್ರಗಳಿಗಿಂತ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆಯನ್ನು ನಾವು ನೀಡುತ್ತಿದ್ದೇವೆ ಎಂದು ಹೇಳಿದರು.

ಈ ವೇಳೆ ಸಿನಿಮಾ ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ಈ ಕೃಷ್ಣಪ್ಪ , ಮಾಜಿ ಶಾಸಕ ಶ್ರೀನಿವಾಸ್ ಮೂರ್ತಿ ಪ್ರಕ್ರಿಯ ಆಸ್ಪತ್ರೆಯ ಸಿಇಒ ಶ್ರೀನಿವಾಸ್ ಚಿರುಕುರಿ, ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್ ಜೆಡಿಎಸ್ ಮುಖಂಡ ಮುನೇಗೌಡ ಎಂ. ಮತ್ತಿತರರಿದ್ದರು.