ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸರ್ಕಾರದಿಂದ ಪೂರೈಕೆಯಾದ ಅಲ್ಟ್ರಾ ಸೌಂಡ್, ಸ್ಕ್ಯಾನಿಂಗ್ ಯಂತ್ರ, ಹ್ಯಾಂಡ್ ಹೆಲ್ಡ್ ಕ್ಷಕಿರಣ ಯಂತ್ರ, ಕೆರಟೋಮೀಟರ್ ಹಾಗೂ ಒಟೊ ಅಕೌಷ್ಟಿಕ್ ಎಮಿಷನ್ ಯಂತ್ರಗಳನ್ನು ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ನೂತನ ಆಧುನಿಕ ಉಪಕರಣಗಳ ಸೇವಾ ಸೌಲಭ್ಯಗಳನ್ನು ಆದ್ಯತೆ ಆಧಾರದ ಮೇಲೆ ಸಾರ್ವಜನಿಕರು ಪಡೆಯಬೇಕು ಎಂದರು.
ನಂತರ ಮುಖ್ಯ ವೈದ್ಯಾಧಿಕಾರಿ ಡಾ.ಸಿ.ಎಂ.ಶ್ರೀಧರ್ ಮಾತನಾಡಿ, ಈ ಮೊದಲು ಗರ್ಭಿಣಿಯರನ್ನು ಸ್ಕ್ಯಾನಿಂಗ್ ಪರೀಕ್ಷೆಗಾಗಿ ಖಾಸಗಿ ಲ್ಯಾಬ್‌ಗಳಿಗೆ ಕಳುಹಿಸಲಾಗುತ್ತಿತ್ತು. ಈಗ ಸರ್ಕಾರದಿಂದ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಯಂತ್ರ ನೀಡಿದೆ. ರೆಡಿಯಾಲಜಿಸ್ಟ್ ಕೂಡ ಇರುವುದರಿಂದ ಎಲ್ಲಾ ವರ್ಗದ ಗರ್ಭಿಣಿಯರು ಹಾಗೂ ಇತರ ರೋಗಿಗಳಿಗೆ ಉಚಿತವಾಗಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡಲಾಗುವುದು. ಕೆರಟೋಮೀಟರ್ ಯಂತ್ರದಿಂದ ಕಣ್ಣಿನ ದೋಷಗಳ ಪರೀಕ್ಷೆ ಸುಗಮವಾಗಲಿದೆ ಎಂದರು.ಒಟೊ ಅಕೌಸ್ಟಿಕ್ ಎಮಿಷನ್ ಯಂತ್ರದಿಂದ ಹುಟ್ಟಿದ ಮಕ್ಕಳಲ್ಲಿ ಕಂಡುಬರುವ ಕಿವುಡುತನವನ್ನು ಪ್ರಾರಂಭದಲ್ಲಿ ಪತ್ತೆ ಹಚ್ಚಬಹುದಾಗಿದೆ. ಸಾರ್ವಜನಿಕರು ಈ ಎಲ್ಲಾ ಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಪ್ರಭಾರ ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಎನ್.ಆಶಾಲತಾ ಮಾತನಾಡಿ, 100 ದಿನಗಳ ಕ್ಷಯ ಮುಕ್ತ ಅಭಿಯಾನದಡಿ ತಾಲೂಕಿಗೆ ಒಂದು ಹ್ಯಾಂಡ್ ಹೆಲ್ಡ್ ಎಕ್ಸ್ ರೇ ಮಷಿನ್ ನೀಡಲಾಗಿದೆ. ತಾಲೂಕಿನ ಎಲ್ಲಾ ಆಯ್ದ ಗ್ರಾಮಗಳಲ್ಲಿ 30 ವರ್ಷ ಮೇಲ್ಪಟ್ಟ ಎಲ್ಲಾ ಶಂಕಿತರಿಗೆ ಹ್ಯಾಂಡ್ ಹೆಲ್ಡ್ ಕ್ಷ ಕಿರಣ ಯಂತ್ರದಿಂದ ಎದೆಯ ಕ್ಷ ಕಿರಣ ಪರೀಕ್ಷೆಯನ್ನು ತಮ್ಮ ತಮ್ಮ ಮನೆ ಬಳಿಯೇ ಮಾಡಬಹುದು ಎಂದರು.
ತಾಲೂಕಿನಲ್ಲಿ ಒಟ್ಟು 2,258 ಮಂದಿಗೆ ಈಗಾಗಗಲೇ ಎದೆಯ ಕ್ಷ ಕಿರಣ ಪರೀಕ್ಷೆ ನಡೆಸಲಾಗಿದೆ. ಅಸಾಧಾರಣ ವರದಿ ಬಂದವರಿಗೆ ಕಫ ಪರೀಕ್ಷೆ ನಡೆಸಿ ಕ್ಷಯರೋಗ ದೃಢಪಟ್ಟಲ್ಲಿ ಉಚಿತವಾಗಿ ಆರು ತಿಂಗಳ ಡಾಟ್ಸ್ ಚಿಕಿತ್ಸೆ ನೀಡಲಾಗುವುದು ಎಂದರು.
ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ದಿನೇಶ್ ಎಂ.ಎಲ್, ಮಾಜಿ ಸದಸ್ಯ ಗಂಜಾಂ ಕೃಷ್ಣಪ್ಪ, ರೇಡಿಯಾಲಜಿಸ್ಟ್ ಡಾ.ಆಶಾಲತಾ ಎಚ್.ಆರ್, ಕ್ಷ-ಕಿರಣ ತಂತ್ರಜ್ಞ ನಿವೇದ ಜೆ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಸವಿತಾ, ರೋಗಲಕ್ಷಣ ಶಾಸ್ತ್ರಜ್ಞೆ ಮೇಘನ, ನೇತ್ರಾಧಿಕಾರಿ ಗೋವಿಂದರಾಜು, ಪ್ರಭಾರ ಶುಶ್ರೂಷಕ ಅಧೀಕ್ಷಕಿ ಕುಸುಮ ಎ.ಕೆ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ, ಜಿ.ಬಿಯ ಹೇಮಣ್ಣ, ರಾಜ, ಆರೋಗ್ಯ ನಿರೀಕ್ಷಣಾಧಿಕಾರಿ ಎಂಯಎನ್ ಕೃಷ್ಣೇಗೌಡ, ಎಸ್.ಪಿಯಪಣಿಂದ್ರ, ಮೇಘನಾ, ಸ್ನೇಹ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಬಿ.ಮಂಗಳ, ವಾಣಿ ಎಸ್, ಲಲಿತಮ್ಮ, ಸ್ಮಿತ ಆಸ್ಪತ್ರೆಯ ವಿವಿಧ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.