ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಬದುಕಿಗೆ ಕಲೆ ಅತ್ಯಗತ್ಯ. ಮನುಷ್ಯ ಕಲೆಯನ್ನು ಕಲಿಯದಿದ್ದರೇ ಪ್ರಕೃತಿ ವಿಕೃತಿಯಾಗುತ್ತದೆ, ಲಕ್ಷಣ ವಿಲಕ್ಷಣವಾಗುತ್ತದೆ ಎಂದು ರಂಗಾಯಣದ ಮಾಜಿ ನಿರ್ದೇಶಕ ಹಾಗೂ ಗಾಯಕ ಎಚ್. ಜನಾರ್ಧನ್ ಅಭಿಪ್ರಾಯಪಟ್ಟರು.ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕಾಲೇಜಿನ ಕಾಜಾಣ ನಾಟಕ ತಂಡದ ಉದ್ಘಾಟಿಸಿ ಮಾತನಾಡಿದ ಅವರು,ಕಲೆಗೆ ಈ ಪ್ರಕೃತಿಯನ್ನು ಸುಂದರಗೊಳಿಸುವ ಗುಣವಿದೆ. ನಾವೆಲ್ಲರೂ ಪ್ರಕೃತಿಯ ಅಂಶಗಳು ನಾವು ನಮ್ಮನ್ನು ದೈವಾಂಶ ಸಂಭೂತರೆಂದುಕೊಂಡು ತಾಯಿಯ ಗರ್ಭವನ್ನು ಇಂದು ಮರೆಯುತ್ತಿದ್ದೇವೆ ಎಂದರು. ರಂಗ ದಿಗ್ಗಜರೆನಿಸಿಕೊಂಡ ಬಿ.ವಿ. ಕಾರಂತರು ರಂಗಭೂಮಿಯನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋದರು. ನಾಟಕ ಎಂದರೆ ಅದು ಸಂಭ್ರಮ. ನಾಟಕ ಮನುಷ್ಯನಿಗೆ ಶಾಂತಿ, ಸಮಾಧಾನ, ಸಹಬಾಳ್ವೆ, ಸಮಾನತೆ ಅನುಸಂಧಾನವನ್ನು ಬಿತ್ತುತ್ತದೆ. ನಾಟಕ ವಾಸ್ತವವಾಗಿರುವುದನ್ನು ಹಾಗೆಯೇತೋರಿಸುತ್ತದೆ.ದೂರದರ್ಶನದಂತೆ ಕಿರಿದಾಗಿಸದೇ ಸಿನಿಮಾದಂತೆ ಹಿರಿದಾಗಿಸದೇ ಸಹಜತೆಯನ್ನು ಉಳಿಸಿಕೊಂಡು ಬರುತ್ತಿದೆ. ನಾಟಕದ ಕಲಿಕೆಯಿಂದಾಗಿ ವ್ಯಕ್ತಿತ್ವ ನಿರ್ಮಾಣವಾಗುತ್ತದೆ, ಅಹಂ ತನವನ್ನು ನಿರಾಕರಿಸುತ್ತದೆ. ಮಾನವೀಯ ಮೌಲ್ಯಗಳಿಗೆ ಒಳಗಾಗುವಂತೆ ಮಾಡುತ್ತದೆ ಎಂದರು.ಕಾಲೇಜಿನಲ್ಲಿ ಈ ರೀತಿಯ ಒಂದು ನಾಟಕ ತಂಡ ಉದ್ಘಾಟನೆಯಾಗುತ್ತಿರುವುದು ಬಹಳ ಸಂತಸದ ವಿಷಯ. ವಿದ್ಯಾವರ್ಧಕ ಕಾಲೇಜು ಈ ವಿಚಾರದಲ್ಲಿ ಮೈಸೂರಿಗೆ ಮಾದರಿಯಾಗಿದೆ ಎಂದು ಅವರು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಮರೀಗೌಡ ಮಾತನಾಡಿ, ನಮ್ಮಕಾಲೇಜಿನಲ್ಲಿ ಈ ಹಿಂದೆಯೇ ಕಾಜಾಣ ತಂಡ ಚಾಲನೆಯಲ್ಲಿ ಇತ್ತು. ಕಾರಾಣಾಂತರಗಳಿಂದ ಅದರ ಕಾರ್ಯಚಟುವಟಿಕೆಗಳು ನಡೆಯುತ್ತಿರಲಿಲ್ಲ. ಇಂದು ಮತ್ತೊಮ್ಮೆ ಚಾಲನೆ ನೀಡಲಾಗಿದೆ. ಮುಂದೆ ಈ ತಂಡ ಉತ್ತಮ ನಾಟಕಗಳನ್ನು, ನೃತ್ಯಗಳನ್ನು ವಿದ್ಯಾರ್ಥಿಗಳಿಂದ ಹೊರಹೊಮ್ಮಿಸುತ್ತದೆ ಎಂಬ ನಂಬಿಕೆ ಇದೆ ಎಂದರು.
ಕಾಜಾಣ ನಾಟಕತಂಡದ ಸಂಚಾಲಕ ಜೆ. ಮಂಜು ರಂಗಗೀತೆಯನ್ನು ಹಾಡಿ ಅತಿಥಿಗಳನ್ನು ಸ್ವಾಗತಿಸಿದರು.ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ರಂಗಗೀತೆಗಳನ್ನು, ಜನಪದ ಗೀತೆಗಳನ್ನು ಹಾಡಿದರು. ಹಾಲಿ ವಿದ್ಯಾರ್ಥಿಗಳು ಮ್ಯಾಕ್‌ಬೆತ್ ನಾಟಕದ ತುಣಕನ್ನು ಪ್ರದರ್ಶಿಸಿದರು. ಕಾಜಾಣ ನಾಟಕದತಂಡದ ಸದಸ್ಯರು, ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಅಧ್ಯಾಪಕೇತರರು ಭಾಗವಹಿಸಿದ್ದ ಕಾರ್ಯಕ್ರಮವನ್ನು ಇಂಗ್ಲೀಷ್ ವಿಭಾಗದ ಪ್ರೀತಿ ನಿರೂಪಿಸಿದರು. ಅಧ್ಯಾಪಕ ಸಲಹೆಗಾರ ಡಾ.ಪಿ.ಕೆ. ಗೋವರ್ಧನ್ ವಂದಿಸಿದರು.