ಸಾರಾಂಶ
1985ರಲ್ಲಿ ಹಿರಿಯ ಸಹಕಾರಿ ದಿ. ಜಿ.ಎನ್. ಭಿಡೆಯವರ ನೇತೃತ್ವದಲ್ಲಿ ಸ್ಥಾಪನೆಗೊಂಡು ತನ್ನ ವಿಶಿಷ್ಟ ಸಾಧನೆಯ ಮೂಲಕ ಕರ್ನಾಟಕ ರಾಜ್ಯಾದ್ಯಂತ ಹೆಸರು ಗಳಿಸಿ ಜಿಲ್ಲೆಯ ಅತ್ಯುತ್ತಮ ಸಹಕಾರಿ ಸಂಘಗಳಲ್ಲಿ ಒಂದು ಎಂಬ ಹೆಸರು ಗಳಿಸಿರುವ ಸಂಘವು ಕೃಷಿಕರಿಗೆ 40 ವರ್ಷಗಳಿಂದ ಸೇವೆ ನೀಡುತ್ತಿದೆ.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಸಂಘದ ಮೂಲಕ ರಬ್ಬರ್ ಮಾರಾಟ ಮಾಡುವ ಸದಸ್ಯರಿಗೆ ಕೆ.ಜಿ. ಒಂದಕ್ಕೆ ಒಂದು ರು. ಪ್ರೋತ್ಸಾಹ ಧನ ಹಾಗೂ ಸಂಘದಿಂದ ರಬ್ಬರ್ ಕೃಷಿಗೆ ಸಂಬಂಧಪಟ್ಟ ಪರಿಕರಗಳನ್ನು ಖರೀದಿಸುವ ಸದಸ್ಯರಿಗೆ ಶೇ.15 ರಿಯಾಯಿತಿ ನೀಡಲಾಗಿದ್ದು, ಇದಕ್ಕೆ ಸುಮಾರು 72 ಲಕ್ಷ ರು. ಬಳಕೆಯಾಗಿದೆ. ಸಂಘವು ಕಳೆದ ಸಾಲಿನಲ್ಲಿ 29 ಲಕ್ಷ ರು.ಗಿಂತ ಅಧಿಕ ಲಾಭಗಳಿಸಿದೆ ಎಂದು ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ ಹೇಳಿದರು.ಅವರು ಶನಿವಾರ ಉಜಿರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1985ರಲ್ಲಿ ಹಿರಿಯ ಸಹಕಾರಿ ದಿ. ಜಿ.ಎನ್. ಭಿಡೆಯವರ ನೇತೃತ್ವದಲ್ಲಿ ಸ್ಥಾಪನೆಗೊಂಡು ತನ್ನ ವಿಶಿಷ್ಟ ಸಾಧನೆಯ ಮೂಲಕ ಕರ್ನಾಟಕ ರಾಜ್ಯಾದ್ಯಂತ ಹೆಸರು ಗಳಿಸಿ ಜಿಲ್ಲೆಯ ಅತ್ಯುತ್ತಮ ಸಹಕಾರಿ ಸಂಘಗಳಲ್ಲಿ ಒಂದು ಎಂಬ ಹೆಸರು ಗಳಿಸಿರುವ ಸಂಘವು ಕೃಷಿಕರಿಗೆ 40 ವರ್ಷಗಳಿಂದ ಸೇವೆ ನೀಡುತ್ತಿದೆ ಎಂದರು.ಸಂಘಕ್ಕೆ ರಬ್ಬರ್ ಮಾರಾಟ ಮಾಡುವ ಸದಸ್ಯರಿಗೆ 5000 ರು. ಗರಿಷ್ಠ ಮಿತಿಗೊಳಪಟ್ಟು ಕೆ.ಜಿ. ಒಂದಕ್ಕೆ ಒಂದು ರು.ನಂತೆ ಪ್ರೋತ್ಸಾಹ ಧನ ನೀಡುವ ಯೋಜನೆ, ಈ ವರ್ಷವೂ ಮುಂದುವರಿಯಲಿದೆ. ಟ್ಯಾಪರ್‌ಗಳ ಕೊರತೆ ಕಂಡು ಬರುತ್ತಿದ್ದು, ಇತರ ಆರ್‌ಪಿಎಸ್‌ಗಳ ಸಹಕಾರದಲ್ಲಿ ತಾಲೂಕಿಗೆ ಟ್ಯಾಪರ್‌ಗಳನ್ನು ಒದಗಿಸಿ ಕೊಡುವ ಕುರಿತು ಮಾತುಕತೆ ನಡೆದಿದೆ. ಬೆಳೆಗೆ ಬೆಲೆ ಕೊಡುವ ನೈತಿಕ ಜವಾಬ್ದಾರಿಯನ್ನು ಸಂಘವು ಹೊಂದಿದ್ದು, ನೂತನ ಯೋಜನೆಗಳನ್ನು ರೂಪಿಸಲಿದೆ ಎಂದು ಹೇಳಿದರು.
ಉಪಾಧ್ಯಕ್ಷ ಎಂ.ಅನಂತ ಭಟ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು. ಸಿಇಒ ರಾಜು ಶೆಟ್ಟಿ ಸ್ವಾಗತಿಸಿದರು.