ಬೀಡಾಡಿ ದನ, ಕರುಗಳ ನಿಲ್ಲದ ಹಾವಳಿ

| Published : Jul 21 2024, 01:28 AM IST

ಸಾರಾಂಶ

ಪುರಸಭೆ ವ್ಯಾಪ್ತಿಯಲ್ಲಿ ಬೀಡಾಡಿ ದನ, ಕರುಗಳ ಹಾವಳಿಗೆ ಪುರಸಭೆ ಬ್ರೇಕ್‌ ಹಾಕದ ಹಿನ್ನೆಲೆ ಓರ್ವ ವ್ಯಕ್ತಿ ಸಾವನ್ನಪ್ಪಿದರೆ, ಮೂರು ಹಸುಗಳು ಪ್ರಾಣ ಕಳೆದುಕೊಂಡ ಘಟನೆ ಪಟ್ಟಣದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪುರಸಭೆ ವ್ಯಾಪ್ತಿಯಲ್ಲಿ ಬೀಡಾಡಿ ದನ, ಕರುಗಳ ಹಾವಳಿಗೆ ಪುರಸಭೆ ಬ್ರೇಕ್‌ ಹಾಕದ ಹಿನ್ನೆಲೆ ಓರ್ವ ವ್ಯಕ್ತಿ ಸಾವನ್ನಪ್ಪಿದರೆ, ಮೂರು ಹಸುಗಳು ಪ್ರಾಣ ಕಳೆದುಕೊಂಡ ಘಟನೆ ಪಟ್ಟಣದಲ್ಲಿ ನಡೆದಿದೆ.

ಕಳೆದ ಶುಕ್ರವಾರ ರಾತ್ರಿ ಗುಂಡ್ಲುಪೇಟೆ-ಹಂಗಳ ರಸ್ತೆಯ ಪುರಸಭೆ ವ್ಯಾಪ್ತಿಯಲ್ಲಿ ಹಸುವಿಗೆ ಬೈಕ್‌ ಸವಾರ ತಾಲೂಕಿನ ವೀರನಪುರ ಗ್ರಾಮದ ಸುರೇಶ್‌ (55) ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಂದಡೆ ಗುಂಡ್ಲುಪೇಟೆ-ಹಂಗಳ ರಸ್ತೆಯ ಬಿಸಿಎಂ ವಿದ್ಯಾರ್ಥಿ ನಿಲಯದ ಮುಂದೆ ಮೂರು ಹಸುಗಳಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೂರು ಹಸುಗಳು ದಾರುಣವಾಗಿ ಸಾವನ್ನಪ್ಪಿವೆ.

ಹೊಣೆ ಯಾರಿಗೆ?:

ಪುರಸಭೆ ವ್ಯಾಪ್ತಿಯಲ್ಲಿ ಬೀಡಾಡಿ ದನ, ಕರುಗಳು ಹಾವಳಿ ಬಗ್ಗೆ ಕನ್ನಡಪ್ರಭ ಪತ್ರಿಕೆ ಹಲವು ವರದಿ ಪ್ರಕಟಿಸಿ ಪುರಸಭೆ ಎಚ್ಚರಿಸಿದರೂ ಬೀಡಾಡಿ ದನ, ಕರುಗಳ ಹಾವಳಿಗೆ ಬ್ರೇಕ್‌ ಹಾಕಿದ್ದರೆ ಓರ್ವನ ಜೀವ ಹಾಗೂ ಮೂರು ಜಾನುವಾರು ಜೀವ ಉಳಿಯುತ್ತಿತ್ತು. ಮೂರು ಹಸುಗಳು ಹಾಗೂ ಓರ್ವನ ಜೀವಕ್ಕೆ ಈಗ ಹೊಣೆ ಯಾರು ಹೊರುತ್ತಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

ಮೂರು ಹಸು, ಓರ್ವನ ಪ್ರಾಣಕ್ಕೆ ಸಂಚಕಾರ ತಂದ ಬೀಡಾಡಿಗಳ ದನ, ಕರುಗಳ ಹಾವಳಿಗೆ ಇನ್ನಾದರೂ ಕ್ಷೇತ್ರದ ಶಾಸಕರು ಹಾಗೂ ಪುರಸಭೆ ಮುಂದಾಗುವುದೇ ಎಂದು ಪಟ್ಟಣದ ನಾಗರೀಕರು ಕೇಳಿದ್ದಾರೆ. ಗುಂಡ್ಲುಪೇಟೆ ಪಟ್ಟಣದಲ್ಲಿ ಬೀಡಾಡಿ ದನ, ಕರುಗಳ ಹಾವಳಿಗೆ ಓರ್ವ ಸತ್ತಿದ್ದಾನೆ. ಜೊತೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೂರು ಹಸುಗಳು ಸಾವನ್ನಪ್ಪಿವೆ. ಇನ್ನೆಷ್ಟು ಜನರ ಹಾಗೂ ಹಸುಗಳ ಪ್ರಾಣ ಹೋಗಬೇಕು ಎಂದು ಪಟ್ಟಣದ ನಾಗರೀಕರು ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ. ಪುರಸಭೆ ಬೀಡಾಡಿ ದನ, ಕರುಗಳ ಹಾವಳಿಗೆ ಬ್ರೇಕ್‌ ಹಾಕಲು ವಿಫಲವಾಗಿದ್ದೇ ಈ ದುರಂತಕ್ಕೆ ಕಾರಣವಾಗಿದೆ.ಪಟ್ಟಣದ ಹೊರ ವಲಯದಲ್ಲಿ ಶುಕ್ರವಾರ ರಾತ್ರಿ ಹಸುಗೆ ಬೈಕ್‌ ಸವಾರ ಡಿಕ್ಕಿ ಹೊಡೆದು ಸತ್ತಿದ್ದಾರೆ. ಶುಕ್ರವಾರ ಮಧ್ಯರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೂರು ಹಸುಗಳು ಸಾವನ್ನಪ್ಪಿವೆ.-ಸಾಹೇಬ ಗೌಡ, ಪಿಎಸ್‌ಐ, ಗುಂಡ್ಲುಪೇಟೆ

ಪುರಸಭೆ ಎಚ್ಚರಿಸಿದ್ದ ಕನ್ನಡಪ್ರಭಪುರಸಭೆ ವ್ಯಾಪ್ತಿಯಲ್ಲಿ ʼಬೀಡಾಡಿ ದನ, ಕರುಗಳ ಹಾವಳಿʼ ಬಗ್ಗೆ ಕಳೆದ ಜೂ.17 ರ ಕನ್ನಡಪ್ರಭ ಪತ್ರಿಕೆಯಲ್ಲಿ ಮೊದಲ ವರದಿ ಪ್ರಕಟಿಸಿ ಪುರಸಭೆ ಎಚ್ಚರಿಸಿತ್ತು. ಕನ್ನಡಪ್ರಭ ವರದಿ ಬಳಿಕ ಪುರಸಭೆ ಎಚ್ಚೆತ್ತು ಹತ್ತಾರು ಬೀಡಾಡಿ ದನ, ಕರುಗಳ ಮಾಲೀಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿ ಕೈ ತೊಳೆದುಕೊಂಡಿದ್ದರು.

ಇದಾದ ಬಳಿಕವೂ ಜು.೧೫ ರ ಕನ್ನಡಪ್ರಭದಲ್ಲಿ ʼಬೀಡಾಡಿ ದನಗಳ ಹಾವಳಿ ನಿಂತಿಲ್ಲʼಎಂದು ವರದಿ ಪ್ರಕಟಿಸಿ ಪುರಸಭೆ ಗಮನ ಸೆಳೆದ ಬಳಿಕ ಪುರಸಭೆ ಬೀಡಾಡಿ ದನ, ಕರುಗಳ ಮಾಲೀಕರಿಗೆ ದಂಡ ಹಾಗೂ ಎಚ್ಚರಿಕೆ ನೀಡಿದರು. ಆದರೂ ಬೀಡಾಡಿ ದನ, ಕರುಗಳ ಹಾವಳಿ ನಿಲ್ಲಲಿಲ್ಲ. ಮೈಸೂರು-ಊಟಿ ರಸ್ತೆ, ಚಾಮರಾಜನಗರ-ಕೇರಳ ರಸ್ತೆಯ ಜಂಕ್ಷನ್‌ಗಳಲ್ಲಿ ಬೀಡಾಡಿ ದನ, ಕರುಗಳ ಹಾವಳಿಗೆ ಸವಾರರು ರೋಸಿ ಹೋಗಿದ್ದಾರೆ.