ನಿರಂತರ ಮಳೆ: ಜನ- ವಾಹನ ಸಂಚಾರಕ್ಕೆ ಅಡ್ಡಿ

| Published : Jul 19 2024, 12:53 AM IST

ಸಾರಾಂಶ

ಕಡೂರು- ಬೀರೂರು ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲೂ 6ನೇ ದಿನದ ಪುನರ್ವಸು ಮಳೆಯಿಂದ ಅಲ್ಲಲ್ಲಿ ಸ್ವಲ್ಪಮಟ್ಟಿಗೆ ತೊಂದರೆ ಆಗಿದ್ದು, ಕೆಲವೆಡೆ ಜನ- ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು ಅಲ್ಲಲ್ಲಿ ಸಣ್ಣ ಪುಟ್ಟ ಮರಗಳು ಬಿದ್ದಿವೆ. ಇನ್ನು ಕಡೂರು ತಾಲೂಕಿನ ಜನರ ಜೀವನ ನಾಡಿಯಾದ ಎಮ್ಮೇದೊಡ್ಡಿಯ ಮದಗದಕೆರೆಗೆ ಸದ್ಯಕ್ಕೆ ಸುಮಾರು 46 ಅಡಿ ಗಳಷ್ಟು ನೀರು ಬಂದಿದೆ ಎಂದು ತಿಳಿದು ಬಂದಿದೆ

ಕನ್ನಡಪ್ರಭ ವಾರ್ತೆ. ಕಡೂರು

ಕಳೆದ ಆರು ದಿನಗಳಿಂದಲೂ ತಾಲೂಕಿನಲ್ಲಿ ಸೋನೆ ಮಳೆಯು ಬಿಡುವು ಕೊಡದೆ ಮುಂದುವರಿಯುತ್ತಿದೆ.

ಕಡೂರು- ಬೀರೂರು ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲೂ 6ನೇ ದಿನದ ಪುನರ್ವಸು ಮಳೆಯಿಂದ ಅಲ್ಲಲ್ಲಿ ಸ್ವಲ್ಪಮಟ್ಟಿಗೆ ತೊಂದರೆ ಆಗಿದ್ದು, ಕೆಲವೆಡೆ ಜನ- ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು ಅಲ್ಲಲ್ಲಿ ಸಣ್ಣ ಪುಟ್ಟ ಮರಗಳು ಬಿದ್ದಿವೆ. ಇನ್ನು ಕಡೂರು ತಾಲೂಕಿನ ಜನರ ಜೀವನ ನಾಡಿಯಾದ ಎಮ್ಮೇದೊಡ್ಡಿಯ ಮದಗದಕೆರೆಗೆ ಸದ್ಯಕ್ಕೆ ಸುಮಾರು 46 ಅಡಿ ಗಳಷ್ಟು ನೀರು ಬಂದಿದೆ ಎಂದು ತಿಳಿದು ಬಂದಿದೆ.

ಮಲೆನಾಡಿನಲ್ಲಿ ಮಳೆ ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಹೊನ್ನಮ್ಮನ ಹಳ್ಳದಿಂದ ಮದಗದ ಕೆರೆಗೆ ಹಿನ್ನೀರಿನ ಮಾರ್ಗದಿಂದ ನೀರು ಹರಿಯುವ ಮೂಲಕ ಒಳ ಹರಿವು ಹೆಚ್ಚಾಗುತ್ತಿದೆ.

ಕಳೆದ ಬುಧವಾರ ಮಳೆ ಸ್ವಲ್ಪ ಮಟ್ಟಿಗೆ ಬಿಡುವ ಕೊಡುವ ಮೂಲಕ ಬೆಳಗಿನಿಂದ ಬಿಸಿಲಿನ ವಾತಾವರಣ ಇತ್ತು. ಆದರೆ ಸಂಜೆ ಮೇಲೆ ಮತ್ತೆ ಮಳೆ ಆರಂಭವಾಗಿ ರಾತ್ರಿ ಕೂಡ ಬಿಟ್ಟುಬಿಟ್ಟು ಸುರಿದು ಗುರುವಾರ ಬೆಳಗಿನ ಜಾವದಿಂದಲೂ ಇಡೀ ದಿನ ಸುರಿಯಿತು. ಬುಧವಾರ ರಾತ್ರಿ ಸುರಿದ ಮಳೆಗೆ ಕಡೂರು ತಾಲೂಕಿನ ಗೆದ್ಲೇಹಳ್ಳಿಯ ಬೋವಿ ಕಾಲೋನಿ ಗ್ರಾಮದ ಪುಟ್ಟಸ್ವಾಮಿ ಬಿನ್ ನರಸಾಬೋವಿ ಎಂಬುವರ ವಾಸದ ಮನೆ ಗೋಡೆ ಕುಸಿದಿದೆ. ಇನ್ನು ತಾಲೂಕಿನ ಪಟ್ಟಣಗೆರೆ ಗ್ರಾಮದ ಪಾರ್ವತಮ್ಮ ಅವರ ವಾಸದ ಮನೆ ಮಳೆಯಿಂದ ಕುಸಿದಿದೆ.

ಫೋಟೋ 18 ಕೆಕೆಡಿಯು1. ಕಡೂರು ತಾಲೂಕಿನ ಪಟ್ಟಣಗೆರೆ ಗ್ರಾಮದಲ್ಲಿ ಮಳೆಯಿಂದ ಮನೆ ಕುಸಿದಿದೆ.