ಸಾರಾಂಶ
- ಸುರಪುರ ತಾಲೂಕಿನಲ್ಲಿ ಮನೆಗಳ ಕುಸಿತ । ಬೆಳೆ ನಷ್ಟ ಸರ್ವೇ ಕಾರ್ಯಕ್ಕೆ ಒತ್ತಾಯ ಕನ್ನಡಪ್ರಭ ವಾರ್ತೆ ಸುರಪುರ
ಕಳೆದ ಮೂರು ದಿನಗಳಿಂದ ಸುರಿಯುತ್ತಿದ್ದ ಮಳೆ ಸೋಮವಾರವೂ ಮುಂದುವರಿದಿದ್ದು,ಕೃಷಿ ಚಟುವಟಿಕೆಗಳು ಅರ್ಧಕ್ಕೆ ನಿಂತು ಮನೆಯತ್ತ ಅನ್ನದಾತರು, ಕೃಷಿ ಕಾರ್ಮಿಕರು ಹೆಜ್ಜೆ ಹಾಕಿದ್ದಾರೆ.
ಭಾನುವಾರ ರಾತ್ರಿ ಸುರಿದ ಮಳೆಗೆ ತಾಲೂಕಿನ ನಾಗರಾಳ, ತಿಂಥಣಿಯಲ್ಲಿ ಸೇರಿ ಒಟ್ಟು ಮೂರು ಮನೆಗಳು ಕುಸಿದಿವೆ. ನದಿ ಪಾತ್ರದ ಗ್ರಾಮಗಳು, ಹಳ್ಳಕೊಳ್ಳ ಪಕ್ಕದ ಜಮೀನುಗಳಲ್ಲಿ ನೀರಿನ ಇಳಿಮುಖವಾಗಿಲ್ಲ. ಒಣ ಬೇಸಾಯ ಭೂಮಿಗಳಲ್ಲಿ ಬೆಳೆದಿರುವ ಬೆಳೆಯಲ್ಲಿ ನೀರು ನಿಂತಿದೆ. ಈಗಾಗಲೇ ಹತ್ತಿ, ತೊಗರಿಗೆ ತಾಮ್ರ ರೋಗ (ಬೆಂಕಿರೋಗ) ತಗಲಿದ್ದು, ಎಲೆಗಳು ಸುಟ್ಟಂತಾಗುತ್ತಿವೆ. ಅಲ್ಲದೆ ಮುದುರಿ ಬೀಳುತ್ತಿವೆ. ಇದರಿಂದ ರೈತರು ನಷ್ಟಕ್ಕೆ ಒಳಗಾಗುವ ಸಾಧ್ಯತೆಯಿದೆ. ಬೆಳೆ ನಷ್ಟ ಸರ್ವೇ ಕಾರ್ಯ ಆರಂಭಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.ನಾಲ್ಕೈದು ದಿನಗಳಿಂದ ಭತ್ತದ ಗದ್ದೆಗಳಲ್ಲಿ ನೀರು ಕಡಿಮೆಯಾಗುತ್ತಿಲ್ಲ. ಇದರಿಂದ ಭತ್ತ ಸಸಿಗಳು ಕೊಳೆಯುತ್ತಿವೆ. ಇದರಿಂದ ನಷ್ಟ ಎದುರಾಗಬಹುದು. ವಾಗಣಗೇರಾ, ದೇವರಗೋನಾಲ, ತಳವಾರಗೇರಾ, ಆಲದ್ದಾಳ, ಪೇಠಾ ಅಮ್ಮಾಪುರ, ಬೋನಾಳ, ದೇವಾಪುರ, ಅರಳಹಳ್ಳಿ, ಮುಷ್ಠಳ್ಳಿ, ಶೆಳ್ಳಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಒಡ್ಡುಗಳು ಒಡೆದು ಹೋಗಿವೆ. ಹಾಕಿದ ಗೊಬ್ಬರ ನೀರಿನಲ್ಲಿ ಕರಗಿ ಹರಿದು ಹೋಗಿದೆ. ಕೃಷಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಕಿಸಾನ್ ಘಟಕದ ತಾಲೂಕು ಅಧ್ಯಕ್ಷ ಚನ್ನಪ್ಪಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
------ಕೋಟ್ - 1-----ಸುರಪುರದ ಕಂದಾಯ ಅಧಿಕಾರಿ ಮಾಹಿತಿಗಾಗಿ ಮಾಧ್ಯಮದವರು ಸಂಪರ್ಕಿಸಿದರೆ ಪೋನ್ ಎತ್ತುವುದಿಲ್ಲ. ಕಚೇರಿಯಲ್ಲಿಯೂ ಇರುವುದಿಲ್ಲ. ಹಾಗಾದರೆ ಹೋಗುವುದಾದರೂ ಎಲ್ಲಿಗೆ? ಅಲ್ಲದೆ ಸುರಪುರ ಹೋಬಳಿಯಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾದ ಸ್ಥಳಗಳಿಗೆ ಒಮ್ಮೆಯೂ ಭೇಟಿ ನೀಡಿಲ್ಲ. ಕೂಡಲೇ ಇಂತಹ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕು.
- ಮಲ್ಲಿಕಾರ್ಜುನ ಕ್ರಾಂತಿ, ಹಿರಿಯ ಹೋರಾಟಗಾರ, ಸುರಪುರ.2ವೈಡಿಆರ್16
ಸುರಪುರ ತಾಲೂಕಿನ ನಾಗರಾಳದಲ್ಲಿ ಮನೆಯೊಂದು ಮಳೆಗೆ ಕುಸಿದಿರುವುದು.